Advertisement

ಬಳ್ಳಾರಿ ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆ ಮಾಡಿದ್ದಕ್ಕೆ ಸೋಮಶೇಖರ ರೆಡ್ಡಿ ಅಪಸ್ವರ

09:15 AM Apr 01, 2020 | keerthan |

ಬಳ್ಳಾರಿ: ನಗರದ ಹೃದಯ ಭಾಗದಲ್ಲಿರುವ ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿದ್ದಕ್ಕೆ ಶಾಸಕ ಜಿ.ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾಸ್ಪತ್ರೆ ಹೃದಯ ಭಾಗದಲ್ಲಿದೆ. ನಗರ ಸೇರಿ ನೆರೆಹೊರೆಯ ಹಲವಾರು ಗ್ರಾಮಗಳಿಂದ ಸಾವಿರಾರು ಜನರು ಚಿಕಿತ್ಸೆಗೆ ಬರುತ್ತಾರೆ. ಹಾಗಾಗಿ ಜಿಲ್ಲಾಸ್ಪತ್ರೆಯನ್ನು ಪರಿವರ್ತಿಸಿದರೆ ಅವರಿಗೂ ಹರಡುವ ಸಾಧ್ಯತೆ ಇದೆ. ಜತೆಗೆ ಸುತ್ತಮುತ್ತಲಿನ ಬಡಾವಣೆಗಳಿಗೂ ಆವರಿಸುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಮಾಡಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್-19 ವೈರಸ್ ನ ಪರಿಣಾಮ ಕೂಲಿ ಕಾರ್ಮಿಕರು, ಬಡವರಿಗೂ ತಗುಲಿರುವ ಹಿನ್ನೆಲೆಯಲ್ಲಿ ಇಲ್ಲಿನ ಹರಿಶ್ಚಂದ್ರ ನಗರದಲ್ಲಿನ ಪ್ರತಿ ಮನೆಗೆ ನಾಲ್ಕು ಕೆಜಿ ಅಕ್ಕಿಯನ್ನು ಶಾಸಕ ಜಿ.ಸೋಮಶೇಖರ ರೆಡ್ಡಿಯವರು ಮಂಗಳವಾರ ವಿತರಿಸಿದರು.

ಕೋವಿಡ್-19 ವೈರಸ್ ಆತಂಕ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದ್ದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲ ಬಡ ಕೂಲಿಕಾರ್ಮಿಕರ ಮನೆಗಳಿಗೆ ತಲಾ ನಾಲ್ಕು ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಇಷ್ಟುದಿನಗಳ ಕಾಲ ಯಾವುದೇ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಇಲ್ಲ ಎಂದು ನಾವೆಲ್ಲ ಸಮಾಧಾನದಲ್ಲಿದ್ದೆವು. ಆದರೆ ಸೋಮವಾರ ರಾತ್ರಿ ಹೊಸಪೇಟೆಯಲ್ಲಿ ಮೂರು ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು ಜಿಲ್ಲೆಯ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ನಗರದ ರಾಣಿತೋಟದಲ್ಲೂ ಗೃಹಬಂಧನದಲ್ಲಿರಿಸಿದ್ದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ತಿರುಗಾಡುತ್ತಿದ್ದಾನೆ ಎಂದು ಸ್ಥಳೀಯರು ನನಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು, ವೈದ್ಯರ ಗಮನ ಸೆಳೆದಾಗ ಆ ವ್ಯಕ್ತಿಯನ್ನು ಹಿಡಿದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗಾಗಿ ಬೇರೆ ಊರಿಂದ ಬಳ್ಳಾರಿಗೆ ಹಲವರು ಬಂದಿದ್ದಾರೆ. ಅವರು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಈ ವೇಳೆ 1ನೇ ವಾರ್ಡ್ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಕೆಎಂಎಫ್ ನಿರ್ದೇಶಕ ವೀರಶೇಖರ ರೆಡ್ಡಿ ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next