Advertisement

ಸೋಮಣ್ಣ ಸೇರ್ಪಡೆ: ಕಾಂಗ್ರೆಸ್ಸಲ್ಲಿ ಸಂಚಲನ

03:50 AM Jan 19, 2017 | Team Udayavani |

ಬೆಂಗಳೂರು: ವಿಧಾನಪರಿಷತ್‌ ಬಿಜೆಪಿ ಸದಸ್ಯರೂ ಆಗಿರುವ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಪಕ್ಷಕ್ಕೆ ಕರೆತರುವ ವಿಚಾರ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ.

Advertisement

ಸೋಮಣ್ಣ ಅವರನ್ನು ಬಿಜೆಪಿಗೆ ಕರೆತರಲು ಇದುವರೆಗೆ ತೆರೆಮರೆಯಲ್ಲೇ ಪ್ರಯತ್ನ ಆರಂಭಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಆ ಪ್ರಯತ್ನವನ್ನು ಚುರುಕುಗೊಳಿಸಿದ್ದು, ಸೋಮಣ್ಣ ಅವರನ್ನು ಪಕ್ಷಕ್ಕೆ ಕರೆ ತಂದರೆ, ಆಗುವ ಲಾಭ ನಷ್ಟದ ಕುರಿತು ಕೆಲವು ಆಪ್ತರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಸೋಮಣ್ಣ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಕಸರತ್ತು ಕುರಿತಂತೆ ಬುಧವಾರ “ಉದಯವಾಣಿ’ಯಲ್ಲಿ ಪ್ರಕಟವಾದ ವರದಿ ಕುರಿತಂತೆ ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದಾಗ, ಸಧ್ಯ ಸೋಮಣ್ಣ ಬಿಜೆಪಿಯಲ್ಲಿದ್ದಾರೆ. ನಾನು ಅವರನ್ನು ಮಾತನಾಡಿಸಿಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರೇ ಹೊರತು ವರದಿಯನ್ನು ಅಲ್ಲಗಳೆದಿಲ್ಲ.

ಈ ಮಧ್ಯೆ ಸೋಮಣ್ಣ ಅವರನ್ನು ಕಾಂಗ್ರೆಸ್‌ಗೆ ಕರೆತರುವ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗೆಯಿಂದ ವಿಜಯನಗರದ ಶಾಸಕ ಹಾಗೂ ವಸತಿ ಸಚಿವ ಎಂ. ಕೃಷ್ಣಪ್ಪ ವಿಚಲಿತರಾಗಿದ್ದು, ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಸೋಮಣ್ಣ ಕಾಂಗ್ರೆಸ್‌ಗೆ ಬಂದರೂ  ಬೆಂಗಳೂರು ಬಿಟ್ಟು ಚಾಮರಾಜನಗರ ಜಿಲ್ಲೆಗೆ ತಮ್ಮ ರಾಜಕೀಯ ಕ್ಷೇತ್ರವನ್ನು ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಎಂ. ಕೃಷ್ಣಪ್ಪ ಸಮಾಧಾನ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳಿಗೆ ಶೀಘ್ರದಲ್ಲೇ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಎರಡೂ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದಕ್ಕಾಗಿ ಲಿಂಗಾಯತ ಸಮುದಾಯದವರಾಗಿರುವ ವಿ.ಸೋಮಣ್ಣ ಅವರನ್ನು ಪಕ್ಷಕ್ಕೆ ತರುವ ಮೂಲಕ ಬಿಜೆಪಿ ತಿರುಗೇಟು ನೀಡಲು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next