ಕುಳಗೇರಿ ಕ್ರಾಸ್ : ಈ ಮಠದಲ್ಲಿರುವ ತಂಬೂರಿ ಸುಮಾರು 52 ವರ್ಷಗಳಿಂದ ನೆಲ ಮುಟ್ಟಿಲ್ಲ… ನಿಂತಲ್ಲೇ ನಿಂತು ಓಂ.. ನಮಃ ಶಿವಾಯ… ಎಂದು 24 ಗಂಟೆ ಶಿವಧ್ಯಾನ ಮಾಡುತ್ತಿರುವ ಭಕ್ತರು… ಇಲ್ಲಿ 52 ವರ್ಷಗಳ ಹಿಂದೆ ಹಚ್ಚಿದ ದೀಪ ಇಂದು ಸಹ ಪ್ರಜ್ವಲಿಸುತ್ತಿದೆ… ಇವೆಲ್ಲ ಕೇಳಿದರೆ ಅಚ್ಚರಿ ಆಗುತ್ತಿದೆ ಅಲ್ವಾ.
ಹೌದು ಅಚ್ಚರಿಯೇ ಸರಿ ಇವೆಲ್ಲ ನಡೆಯುತ್ತಿರುವುದು ಬಾದಾಮಿ ತಾಲೂಕಿನ ಸುಕ್ಷೇತ್ರ ಸೋಮನಕೊಪ್ಪ ಗ್ರಾಮದ ಪೂರ್ಣಾನಂದರ ಮಠದಲ್ಲಿ. ಶ್ರೀಗಳೊಬ್ಬರ ಮಾತಿಗೆ ಶಿವನಾಮ ಮಾಡಲು ಬದ್ದರಾದ ಗ್ರಾಮದ ಭಕ್ತರು 52 ವರ್ಷಗಳಿಂದ ವಾದ್ಯ ಸಮೇತ ನಿರಂತರವಾಗಿ ಶಿವನಾಮ ಜಪ ಮಾಡುತ್ತಿದ್ದಾರೆ.
1970 ಅಗಸ್ಟ್ 23 ರಂದು ಪೂರ್ಣಾನಂದ ಸ್ವಾಮಿಜಿ ಅಣತೆಯಂತೆ ಹಗಲು ರಾತ್ರಿ ನಿರಂತರ ಭಜನೆಯನ್ನ ಯಾವ ಗ್ರಾಮದವರು ಹೆಚ್ಚುಕಾಲ ಮಾಡುತ್ತಿರೋ ಆ ಗ್ರಾಮಕ್ಕೆ ಬರುತ್ತೇನೆ ಬಂದು ನೆಲೆಸುತ್ತೇನೆ ಎಂದಿದ್ದರಂತೆ. ಶ್ರೀಗಳ ವಾಣಿಗೆ ಬದ್ದರಾದ ಸೋಮನಕೊಪ್ಪ ಗ್ರಾಮದ ಭಕ್ತರು 36 ವರ್ಷಗಳ ಕಾಲ ಶಿವನಾಮ ಸಪ್ತಾಹಕ್ಕೆ ಒಪ್ಪಿಕೊಂಡು ಆರಂಭಿಸಿದರು. ಶ್ರೀಗಳ ಮಾತಿಗೆ ಒಪ್ಪಿದ ಭಕ್ತರು 36 ವರ್ಷದ ನಂತರವೂ ಬಿಡದೇ ಶಿವನಾಮ ಜಪವನ್ನ ಮುಂದುವರೆಸಿದ ಭಕ್ತರ ಭಕ್ತಿ ಮೆಚ್ಚುವಂತದ್ದು.
ನಂತರ ಪೂರ್ಣಾನಂದ ಶ್ರೀಗಳು ಸೋಮನಕೊಪ್ಪ ಗ್ರಾಮದಲ್ಲಿ ಲಿಂಗೈಕ್ಯರಾದರು. ಶ್ರೀಗಳ ಗದ್ದುಗೆಯನ್ನ ಗ್ರಾಮದಲ್ಲಿ ನಿರ್ಮಿಸಲಾಯಿತು. ನಂತರ ಈ ಮಠಕ್ಕೆ ಇತ್ತಿಚೆಗೆ ಲಿಂಗೈಕ್ಯರಾದ ಶ್ರದ್ಧಾನಂದ ಸ್ವಾಮಿಜಿ ಪಟ್ಟಾಧಿಕಾರ ವಹಿಸಿಕೊಂಡರು. ಶಿವನಾಮ ಜಪ-ತಪ ಸೇರಿದಂತೆ ಕೋಟಿ ಜಪಯಜ್ಞ ಮಾಡುವ ಮೂಲಕ ಈ ಭಾಗದಲ್ಲಿ ಭಕ್ತರನ್ನು ಉದ್ಧರಿಸಿದ ಮಹಾತ್ಮರು.
ಅಂದು ಅಂಧಕಾರ ಹೋಗಲಾಡಿಸಲು ಶ್ರೀಗಳು ಹಚ್ಚಿದ ದೀಪವನ್ನು ಇಂದಿಗೂ ಜ್ಯೋತಿಯಾಗಿ ಪ್ರಜ್ವಲಿಸುತ್ತಿದೆ. ಆ ದೀಪವನ್ನ ಭಕ್ತರು ಎಣ್ಣೆ-ಬತ್ತಿ ಹಾಕಿ ಕಾಯ್ದುಕೊಂಡು ಬಂದಿದ್ದಾರೆ. ಶಿವನಾಮ ಸಪ್ತಾಹ 52 ವರ್ಷ ಕಳಿದರೂ ಹೀಗೆ ಮುಂದುವರೆಸಿಕೊಂಡು ಹೋಗುವ ಸಂಕಲ್ಪ ಸೋಮನಕೊಪ್ಪ ಗ್ರಾಮಸ್ಥರದ್ದಾಗಿದೆ.
ಪ್ರತಿ ದಿನವೂ ಮೂರ್ನಾಲ್ಕು ಮನೇತನಗಳಂತೆ ಒಂದು ಕುಟುಂಬಕ್ಕೆ ಮೂರು ಗಂಟೆಗಳಂತೆ ಸಮಯ ಹೊಂದಿಸಿಕೊಂಡು ಶಿವನಾಮ ಜಪ ಭಕ್ತಿಯಿಂದ ಮಾಡಲಾಗುತ್ತಿದೆ. ನಿತ್ಯ ಭಕ್ತರು ಶ್ರೀಮಠಕ್ಕೆ ಬಂದು ಹೆಗಲಿಗೆ ತಂಬೂರಿ ಹಾಕಿಕೊಂಡು ಉರಿಯುತ್ತಿರುವ ಜ್ಯೋತಿಯ ಎದುರು ಶಿವನಾಮ ಜಪ ಮಾಡುತ್ತಾರೆ. ಪಾಳೆ ಹಾಕಿಕೊಂಡು ಬರುವ ಭಕ್ತರು ತಂಬೂರಿ ನೆಲಕ್ಕಿಡದೆ ಒಬ್ಬರಿಗೊಬ್ಬರು ವರ್ಗಾಯಿಸಿಕೊಂಡು ಶಿವನಾಮ ಜಪಿಸುತ್ತಾರೆ.
ವಿಶೇಷವೆಂದರೆ ಈ ಮಠದಲ್ಲಿ ಜಾತಿ-ಮತ-ಬೇಧ ಇಲ್ಲ… ಹಿಂದೂ ಮುಸ್ಲಿಮ್ ಸೇರಿದಂತೆ ಎಲ್ಲ ಜಾತಿಯವರು ಜಾತ್ಯತೀತ ಮನೋಭಾವನೆಯಿಂದ ಕೋಟಿ ಜಪಯಜ್ಞ ಕಾರ್ಯದಲ್ಲಿ ಭಾಗವಹಿಸುತ್ತಾರೆ.
– ಮಹಾಂತಯ್ಯ ಹಿರೇಮಠ