Advertisement

ಬಂಜಾರರು ಕಾಯಕ ನಿಷ್ಠರು: ಎಂಬಿಪಿ

10:44 AM Jul 03, 2019 | Naveen |

ವಿಜಯಪುರ: ಬಸವೇಶ್ವರರ ಕಾಯಕ ಸಿದ್ಧಾಂತವನ್ನು ಬದುಕಿನಲ್ಲಿ ಮೈಗೂಡಿಸಿಕೊಂಡಿರುವ ಬಂಜಾರಾ ಸಮುದಾಯದ ಜನರು ನಿತ್ಯವೂ ಸ್ವಯಂ ಬೆವರು ಸುರಿಸಿದ ಶ್ರಮಿಕ ಜೀವನ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟರು.

Advertisement

ಮಂಗಳವಾರ ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ ತಾಂಡಾ- 1ರಲ್ಲಿ ಜರುಗಿದ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರಮ ಸಂಸ್ಕೃತಿಯನ್ನು ಉಸಿರಾಗಿಸಿಕೊಂಡಿರುವ ಬಂಜಾರರು ತಮ್ಮ ಬೆವರಿವನ ಶಕ್ತಿಯನ್ನೇ ನಂಬಿಕೊಂಡಿದ್ದಾರೆ. ಹಗಲು-ರಾತ್ರಿ ಎನ್ನದೇ ಬೆವರು ಸುರಿಸಿ ದುಡಿಯುವ ಮೂಲಕ ಶರಣರು ಪ್ರತಿಪಾದಿಸಿದ ಬದುಕಿನ ಕಾಯಕ ತತ್ವದ ಬದುಕನ್ನೇ ಅನುರಿಸುತ್ತಿದ್ದಾರೆ ಎಂದು ವಿವರಿಸಿದರು.

ಶ್ರೀದೇವಿಯ ಆಶೀರ್ವಾದದ ಫ‌ಲವಾಗಿ ಜನತೆ ನನ್ನನ್ನು ಕೈಹಿಡಿದರು. ಪರಿಣಾಮ ನಾನು ರಾಜ್ಯದ ಜಲ ಸಂಪನ್ಮೂಲ ಸಚಿವನಾಗಿ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರಾಮಾಣಿಕವಾಗಿ ಕಾಯಕಲ್ಪ ನೀಡಲು ಸಾಧ್ಯವಾಯಿತು. ಜಿಲ್ಲೆಯಲ್ಲಿ ಈಗಾಗಲೇ ಕಾಲುವೆಗಳಿಗೆ ನೀರು ಹರಿಯುತ್ತಿದ್ದು, ಕೆರೆ ಕಾಲುವೆಗಳಿಗೆ ಹಂತ ಹಂತವಾಗಿ ನೀರು ಹರಿಯುವ ಮೂಲಕ ಜಿಲ್ಲೆ ಅನ್ನದಾತರ ಕನಸು ನನಸಾಗಿದೆ. ಪ್ರಸಕ್ತಗ ವರ್ಷ ಶ್ರೀದೇವಿ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ನೀಡಿ ಸಮೃದ್ಧಿ ನೀಡಲಿ ಎಂದರು.

ನನ್ನ ಕ್ಷೇತ್ರ ವ್ಯಾಪ್ತಿಯ ಸೋಮದೇವರ ಹಟ್ಟಿ ಭಾಗದಲ್ಲಿ ನಡೆಯುವ ದುರ್ಗಾದೇವಿ ಜಾತ್ರೆ ವರ್ಷದಿಂದ ವರ್ಷಕ್ಕೆ ವೈಭವ ಪಡೆಯುತ್ತಿದ್ದು ರಾಜ್ಯ ಅಲ್ಲದೆ ಗೋವಾ, ಮಹಾರಾಷ್ಟ್ರ, ತೆಲಂಗಾಣ, ಅಂಧ್ರಪ್ರದೇಶ ಸೇರಿದಂತೆ ದೇಶ ವಿವಿಧ ರಾಜ್ಯಗಳಿಂದ ಜನರು ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಾರೆ. ಯಾವುದೇ ಧರ್ಮದಲ್ಲಿ ಭಕ್ತಿ, ಶ್ರದ್ಧೆ, ನಂಬಿಕೆ ಅತಿ ಮುಖ್ಯ ಎಂದರು.

ಗೋವಾ ವಿಧಾನಸಭೆ ಉಪಾಧ್ಯಕ್ಷ ಮೈಕಲ್ ಲೋಬೋ ಮಾತನಾಡಿ, ನಾನು ಪ್ರತಿ ವರ್ಷವೂ ಸೋಮದೇವರಹಟ್ಟಿ ತಾಂಡಾ ಶ್ರೀದೇವಿ ದುರ್ಗಾ ಮಾತೆ ದರ್ಶನಕ್ಕೆ ಬರುತ್ತೇನೆ. ಶ್ರೀದೇವಿಯ ಆಶೀರ್ವಾದವಿಲ್ಲದೇ ಯಾವ ಶುಭಕಾರ್ಯ ಮಾಡುವುದಿಲ್ಲ. ದೇವರ ಸ್ಮರಣೆಯಿಂದಾಗಿ ಜೀವನದಲ್ಲಿ ನೆಮ್ಮದಿ ಸಾಧ್ಯ ಎಂದರು.

Advertisement

ಕರ್ನಾಟಕದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಉತ್ತಮ ಕೆಲಸ ಮಾಡಿರುವ ಹಾಲಿ ಗೃಹ ಸಚಿವ ಎಂ.ಬಿ. ಪಾಟೀಲ ಅವರು ಶ್ರೀದೇವಿ ಹಾಗೂ ಕರ್ನಾಟಕದ ಜನತೆ ಆಶೀರ್ವಾದಿಂದ ಮುಖ್ಯಮಂತ್ರಿ ಸ್ಥಾನಕ್ಕೇರಲಿ ಎಂದು ಆಶಿಸಿದರು.

ಪೌರಾಡಳಿತ ಸಚಿವ ಆರ್‌.ಶಂಕರ್‌ ಮಾತನಾಡಿ, ಅಧಿಕಾರ ಇಲ್ಲದಿದ್ದ ಸಂದರ್ಭದಲ್ಲೂ ನಾನು ಸೋಮದೇವರಹಟ್ಟಿಗೆ ಆಗಮಿಸಿ ಶ್ರೀದುರ್ಗಾದೇವಿ ದರ್ಶನ ಪಡೆದಿದ್ದೆ. ನಮ್ಮ ಸಮ್ಮಿಶ್ರ ಸರ್ಕಾರ ಇನ್ನು 4 ವರ್ಷಗಳ ಕಾಲ ಸುಭದ್ರವಾಗಿದ್ದು, ಪೂರ್ಣಾವಧಿ ಮುಗಿಸಲಿ ಎಂದು ಶ್ರೀದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಂ.ಬಿ. ಪಾಟೀಲ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಯುವಕರಾಗಿರುವ ಅವರಿಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ. ಹೀಗಾಗಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಕೆಲವೇ ಕೆಲವು ಮನೆಗಳಿರುವ ಈ ಪುಟ್ಟ ತಾಂಡಾದಲ್ಲಿ ಜಗನು ಮಹಾರಾಜರು ಶ್ರೀದೇವಿ ದುರ್ಗೆ ದೇವಸ್ಥಾನ ನಿರ್ಮಿಸಿ ಈ ಭಾಗದ ಜನರಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇವರ ಪರಿಶ್ರಮದಿಂದ ಈ ಭಾಗದ ಜನರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳು ದೊರಕಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಹೆಲಿಕಾಪ್ಟರ್‌ ಮೂಲಕ ಶ್ರೀದೇವಿ ದುರ್ಗಾಮಾತೆ ದೇವಸ್ಥಾನದ ಮೇಲೆ ಪುಷ್ಪಾರ್ಚನೆ ನಡೆಯಿತು. ಮುಖ್ಯಮಂತ್ರಿಗಳ ಶಿಕ್ಷಣ ಇಲಾಖೆ ಇಲಾಖೆ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ದೇವಾನಂದ ಚವ್ಹಾಣ ಮಾತನಾಡಿದರು. ಸೋಮದೇವರ ಹಟ್ಟಿಯ ಜಗನು ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ವಿನಯ ಕುಲಕರ್ಣಿ, ಕುಂದಗೋಳ ಮಾಜಿ ಶಾಸಕ ಎಂ.ಎಸ್‌. ಅಕ್ಕಿ, ಪಿ.ಸಿ. ಕಟ್ಟಿಮನಿ, ರಾಜಪಾಲ ಚವ್ಹಾಣ, ಸಾಂಗ್ಲಿ ಮೇಯರ್‌ ಸಂಗೀತಾ ಖೋತ್‌, ವಿಜಯಪುರ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಜಿಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೊಡ, ಪಿರ್ಯಾನಾಯ್ಕ, ರಾಮು ಲಮಾಣಿ, ನಂಜ್ಯಾ ನಾಯ್ಕ, ಕಾಶೀನಾಥ ನಾಯ್ಕ, ಭರತ್‌ ನಾಯ್ಕ, ಕೆ.ಜಿ. ರಾಠೊಡ, ರಾಮ ನಾಯ್ಕ, ನಾರಾಯಣ ನಾಯ್ಕ, ಡಿ.ಎಲ್. ಚವ್ಹಾಣ, ಬಿ.ಎಲ್. ನಾಗೂರ, ವಿಜಯಕುಮಾರ ಜಾಧವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next