Advertisement

ಕ್ಲಚ್‌ ಬೇರಿಂಗ್‌ ಸಮಸ್ಯೆಗೆ ಪರಿಹಾರ‌

01:53 PM Jun 28, 2019 | mahesh |

ಕಾರುಗಳಲ್ಲಿ ಅಟೋಮ್ಯಾಟಿಕ್‌ ಮತ್ತು ಮ್ಯಾನುವಲ್‌ ಟ್ರಾನ್ಸ್‌ ಮಿಷನ್‌ (ಗಿಯರ್‌) ವ್ಯವಸ್ಥೆ ಇರುವುದು ಸಾಮಾನ್ಯ. ಮ್ಯಾನುವಲ್‌ ಟ್ರಾನ್ಸ್‌ಮಿಷನ್‌ಗಳನ್ನು ಬಳಸುವ ಕಾರುಗಳಲ್ಲಿ ಕ್ಲಚ್‌ ಇರುತ್ತದೆ. ಕ್ಲಚ್‌ ಎನ್ನುವುದು ಕಾರಿನ ಚಕ್ರ ಮತ್ತು ಎಂಜಿನ್‌ಗೆ ಸಂಪರ್ಕ ಬೆಸೆಯುತ್ತದೆ. ಈ ಸಂಪರ್ಕವನ್ನು ತಪ್ಪಿಸುವಂತೆ ಮಾಡುವುದು ಕ್ಲಚ್‌ ಪೆಡಲ್‌ ಕ್ಲಚ್‌ ಅದುಮಿದ ಕೂಡಲೇ ಎಂಜಿನ್‌ ಸಂಪರ್ಕ ತಪ್ಪಿ, ಕಾರಿನ ಚಕ್ರ ಸುಲಭವಾಗಿ ತಿರುಗುವಂತೆ ಮಾಡುತ್ತದೆ. ಕ್ಲಚ್‌ ಹೀಗೆ ಬೇಕೆಂದಾಗ ಸಂಪರ್ಕ ತಪ್ಪಿಸಲು, ಮರುಜೋಡಿಸಲು ಕಾರ್ಯನಿರ್ವಹಿಸುವುದು ಅದರಲ್ಲಿರುವ ಬೇರಿಂಗ್‌ ಇದಕ್ಕೆ ಕ್ಲಚ್‌ ಬೇರಿಂಗ್‌ ಎಂದು ಹೆಸರು. ಕ್ಲಚ್‌ ಒಳಗಿನ ಪ್ರಶರ್‌ ಪ್ಲೇಟನ್ನು ಒಳಕ್ಕೆ ತಳ್ಳಿ ಚಕ್ರಕ್ಕೆ ಎಂಜಿನ್‌ ಸಂಪರ್ಕ ತಪ್ಪಿಸಿ, ಸುಗಮವಾಗಿ ಗಿಯರ್‌ ಹಾಕುವಂತೆ ಮಾಡುವುದು ಕ್ಲಚ್‌ ಬೇರಿಂಗ್‌ ಕೆಲಸ. ಕ್ಲಚ್‌ ಬೇರಿಂಗ್‌ ಸಮಸ್ಯೆ ಸೃಷ್ಟಿಯಾದದ್ದೇ ಆದಲ್ಲಿ ಕೂಡಲೇ ಅದು ಗಮನಕ್ಕೆ ಬರುತ್ತದೆ.

Advertisement

ಕ್ಲಚ್‌ ಪೆಡಲ್‌ ವೈಬ್ರೇಷನ್‌
ಕ್ಲಚ್‌ ಪೆಡಲ್‌ ಅನ್ನು ಒತ್ತಿದಾಗಲೆಲ್ಲ ಮೃದುವಾದ ಅನುಭವ ಆಗಬೇಕು. ಯಾವುದೇ ಕಾರಣಕ್ಕೂ ಕ್ಲಚ್‌ ಪೆಡಲ್‌ನಲ್ಲಿ ವೈಬ್ರೇಷನ್‌ ಬರಬಾರದು. ಪ್ರಶರ್‌ ಪ್ಲೇಟ್‌ ಅನ್ನು ಒತ್ತಲು ಬೇರಿಂಗ್‌ಗೆ ಸಾಧ್ಯವಾಗ ದಂತಿದ್ದರೆ, ಹೆಚ್ಚು ವೈಬ್ರೇಷನ್‌ ಬರುತ್ತದೆ. ಕಾಲನ್ನು ನಿರಂತರವಾಗಿ ಕ್ಲಚ್‌ ಮೇಲೆ ಇಟ್ಟು ಚಾಲನೆ ಮಾಡುತ್ತಿದ್ದರೆ ಈ ಸಮಸ್ಯೆ ಬರಲು ಕಾರಣವಾಗುತ್ತದೆ. ಕಾರನ್ನು ಸರಿಯಾಗಿ ನಿಲ್ಲಿಸಿ ಸೂಕ್ಷ್ಮವಾಗಿ ಗಮನಿ ಸಿದರೆ, ಈ ವೈಬ್ರೇಷನ್‌ ಗಮನಕ್ಕೆ ಬರುತ್ತದೆ.

ಗಿಯರ್‌ ಹಾಕಲು ಸಮಸ್ಯೆ
ಬೇರಿಂಗ್‌ ಸುಗಮ ಕಾರ್ಯನಿರ್ವಹಣೆಗಾಗಿ ವಿಶೇಷ ಲ್ಯೂಬ್ರಿಕೇಷನ್‌ ಹಾಕಲಾಗಿರುತ್ತದೆ. ಲ್ಯೂಬ್ರಿಕೇಷನ್‌ ಕಡಿಮೆಯಾಗಿ ಸಮಸ್ಯೆಯಾದರೆ, ಕ್ಲಚ್‌ ತೀರಾ ಬಿಗಿಯಾಗಿದೆ ಎಂದು ನಿಮಗೆ ಅನಿಸಹುದು. ಕ್ಲಚ್‌ ಬಿಗಿಯಾದ್ದರಿಂದ ಸುಗಮವಾಗಿ ಗಿಯರ್‌ ಹಾಕುವುದಕ್ಕೂ ಸಮಸ್ಯೆಯಾಗಬಹುದು. ಬಿಗಿಯಾದ ಗಿಯರ್‌ ಇದ್ದರೆ ಟ್ರಾನ್ಸ್‌ ಮಿಷನ್‌ಗೆ ಹಾನಿಯಾಗಬಹುದು.  ಸಮಸ್ಯೆ ಕಂಡುಬಂದ ಕೂಡಲೇ ಮೆಕ್ಯಾನಿಕ್‌ ಬಳಿ ತೋರಿಸಿ, ಇದಕ್ಕೆ ಪರಿಹಾರವೆಂದರೆ ಬೇರಿಂಗ್‌ ಬದಲಾಯಿಸುವುದು. ವಿವಿಧ ಮಾಡೆಲ್‌ ಕಾರುಗಳಿಗೆ ಅನುಗುಣವಾಗಿ 200ರೂ.ಗಳಿಂದ ಸಾವಿರ ರೂ.ವರೆಗೆ ದರವಿದೆ.

ಲಟಲಟ ಶಬ್ದ
ಬೇರಿಂಗ್‌ ಹಾಳಾದ್ದರಿಂದ ಲಟಲಟ ಶಬ್ದವೂ ಬರಬಹುದು. ಬೇರಿಂಗ್‌ನ ರೋಲರ್‌ಗಳು ಹತ್ತಿರವಾಗಿ ಅಥವಾ ಮಧ್ಯೆ ಜಾಗ ಸೃಷ್ಟಿಯಾಗಿ ಲಟಲಟ ಶಬ್ದ ಬರಬಹುದು. ಬೇರಿಂಗ್‌ ಹಳತಾದಷ್ಟೂ ಈ ಶಬ್ದ ಜೋರಾಗುತ್ತಾ ಹೋಗುತ್ತದೆ. ಜತೆಗೆ ಕೀ..ಕೀ.. ಎಂಬ ಗ್ರೈಂಡರ್‌ ರೀತಿ ಶಬ್ದ ಸೃಷ್ಟಿಯಾಗಬಹುದು. ಈ ಶಬ್ದಗಳು ವಾಹನದ ಟ್ರಾನ್ಸ್‌ ಮಿಷನ್‌ ಜಾಗದಿಂದ ಬರುವುದನ್ನು ಕೇಳಿ ಖಚಿತಪಡಿಸಿಕೊಳ್ಳಬಹುದಾಗಿದೆ. ಅಲ್ಲದೇ ಕ್ಲಚ್‌ ಪೆಡಲ್‌ ಒತ್ತಿದಾಗ ಈ ಶಬ್ದ ಹೆಚ್ಚಾಗುತ್ತದೆ.

-   ಈಶ

Advertisement
Advertisement

Udayavani is now on Telegram. Click here to join our channel and stay updated with the latest news.

Next