ಮೈಸೂರು: “ಭಾನುವಾರದ ಒಳಗೆ ಸಮಸ್ಯೆ ಬಗೆಹರಿಸಿ, ಇಲ್ಲವಾದಲ್ಲಿ ನನ್ನ ದಾರಿ ನನಗೆ, ಇನ್ನು ನಿಮ್ಮ ಮಾತು ಕೇಳಿಕೊಂಡು ಪದೇ ಪದೇ ಬಲಿಪಶುವಾಗುತ್ತಾ ನನ್ನ ರಾಜಕೀಯ ಜೀವನಕ್ಕೆ ಧಕ್ಕೆ ತಂದು ಕೊಳ್ಳಲು ಸಿದ್ಧನಿಲ್ಲ’ ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರು ರಾಜ್ಯ ಬಿಜೆಪಿ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಪಿರಿಯಾಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ
ಮುಂಬರುವ ವಿಧಾನಸಭೆ ಚುನಾವಣೆಯ ಸ್ಪರ್ಧಾಕಾಂಕ್ಷಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರೂ ಕ್ಷೇತ್ರದಲ್ಲಿ ಇತ್ತೀಚೆಗೆ ಪಕ್ಷದಿಂದ ಮತ್ತೂಂದು ಶಕ್ತಿ ಕೇಂದ್ರ ಹುಟ್ಟುಹಾಕಿ ಪಕ್ಷದ ಕೆಲ ನಾಯಕರೇ ಅವರಿಗೆ ನೀರೆರೆಯುತ್ತಿದ್ದಾರೆ ಎಂಬುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಶಕ್ತಿಕೇಂದ್ರ ಹುಟ್ಟಿಕೊಂಡಿದ್ದು ಹೇಗೆ?: ಒಂದು ವರ್ಷದ ಹಿಂದೆ ಪಿರಿಯಾಪಟ್ಟಣಕ್ಕೆ ಬಂದ ಹಾವೇರಿ ಮೂಲದ ಉದ್ಯಮಿ ಮಂಜುನಾಥ್ ಎಂಬುವರು, ಪಕ್ಷೇತರನಾಗಿಯೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬರುವುದಾಗಿ ಬಿಂಬಿಸಿಕೊಂಡು ಕ್ಷೇತ್ರದ ತುಂಬೆಲ್ಲಾ ಹಣ ಚೆಲ್ಲಿ ಯುವಕರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ತಾವು ಕುರುಬ ಸಮಾಜದವರು ಎಂದು ಊರ ತುಂಬೆಲ್ಲಾ ಕನಕಜಯಂತಿ ಆಚರಿಸಲು ಹಣ ನೀಡುತ್ತಾ, ಹೆಲಿಕಾಪ್ಟರ್‌ನಲ್ಲೇ ಹಾರಾಡುತ್ತಾ ಆಶಾಗೋಪುರ ಕಟ್ಟಿದ್ದರು. ಆದರೆ, ದಿನ ಕಳೆದಂತೆ ಪಕ್ಷೇತರನಾಗಿ ಗೆದ್ದು ಬರುವುದು ಸುಲಭವಲ್ಲ ಎಂಬ ಕಾರಣಕ್ಕೆ ಕೆಲ ತಿಂಗಳ ಹಿಂದೆ ಬಿಜೆಪಿ ಸೇರಿಕೊಂಡರು. ಪಕ್ಷಕ್ಕೆ ಸೇರಿದ ಬೆನ್ನಲ್ಲೇ ಅವರನ್ನು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಿಸಲಾಯಿತು. ಅಂದಿನಿಂದ ಮತ್ತೆ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿದ ಮಂಜುನಾಥ್, ಬಿಜೆಪಿಯಿಂದ ತಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಈ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತಂದಿದ್ದರೂ ಸರಿಪಡಿಸುವ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ವಿಜಯಶಂಕರ್‌ರ ಅಸಮಾಧಾನಕ್ಕೆ ಕಾರಣ.
ಅನಧಿಕೃತ ಕಚೇರಿ: ಪಕ್ಷದ ರಾಜ್ಯ ವರಿಷ್ಠರು ಪಿರಿಯಾಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಸಂಘಟಿಸಿ ಕೆಲಸ ಮಾಡುವಂತೆ ಸೂಚಿಸಿದ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದು, ಕೆಲವರು ಪಕ್ಷದಲ್ಲೇ ಇದ್ದುಕೊಂಡು ಅನಧಿಕೃತವಾಗಿ ಕಚೇರಿ ಮತ್ತು ಪಕ್ಷದ ಬಾವುಟಗಳನ್ನು ದುರುಪಯೋಗ ಪಡಿಸಿಕೊಂಡು ಪಕ್ಷದ ಶಿಸ್ತಿಗೆ ಧಕ್ಕೆ ತರುತ್ತಿದ್ದಾರೆ. ಈ ಬಗ್ಗೆ ರಾಜ್ಯದ ವರಿಷ್ಠರಿಗೆ ತಿಳಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ, ಇದು ತಮಗೆ ಅನುಮಾನ ಹುಟ್ಟಿಸಿದೆ ಎಂದು ದೂರಿದ್ದಾರೆ.
ಸ್ಥಳೀಯ ನಾಯಕರಿಂದ ಮನವೊಲಿಕೆ
ವಿಜಯಶಂಕರ್ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಸ್.ಎ. ರಾಮದಾಸ್, ಪಕ್ಷದ ಮುಖಂಡರಾದ ಎಲ್.ನಾಗೇಂದ್ರ, ಕೋಟೆ ರಾಮಕೃಷ್ಣಪ್ಪ, ಮಲ್ಲಪ್ಪಗೌಡ, ಫಣೀಶ್ ಮತ್ತಿತರರು ಅವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರು. ಇನ್ನೆರಡು ದಿನ ಕಾದು ನೋಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.