ಮಂಗಳೂರು: ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸೂಚಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಯಾ ಆರೋಗ್ಯ ಕೇಂದ್ರ ಮಟ್ಟದಲ್ಲಿ ಎಂಡೋ ಸಂತ್ರಸ್ತರು, ಅವರ ಪೋಷಕರು, ವೈದ್ಯಾಧಿಕಾರಿಗಳು, ಪಿಡಿಒ, ವಿಎ ಅವರನ್ನೊಳಗೊಂಡ ತಂಡವನ್ನು ರಚಿಸಬೇಕು. ಎಂಡೋ ಬಾಧಿತ ಮಕ್ಕಳು ಅಂಗವೈಕಲ್ಯ, ಮನೋವೈಕಲ್ಯ ಇನ್ನಿತರ ಸಮಸ್ಯೆಗಳಿಂದ ನರಳುತ್ತಾರೆ. ಅವರನ್ನು ಗುರುತಿಸಿ, ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆ ಅಧಿಕಾರಿಗಳು ಗ್ರಾಮವಾರು ಸಂತ್ರಸ್ತರ ಪಟ್ಟಿಯನ್ನು ತಯಾರಿಸಿ ಅವರಿಗೆ ಅಗತ್ಯವಿರುವ ಔಷಧಗಳು ಹಾಗೂ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ತಪ್ಪದೇ ನೀಡಬೇಕು. ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.
ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಪಟ್ಟಿ ನೋಂದಣಿಯಾದೆ. ಆರೋಗ್ಯ ಕೇಂದ್ರಗಳ ಮೂಲಕ ಔಷಧಗಳನ್ನು ಸಂತ್ರಸ್ತರ ಮನೆ ಮನೆಗೆ ತಲುಪಿಸುವಂತೆ ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
364 ಸಾವು, 6,314 ಬಾಧಿತರು
ಜಿಲ್ಲೆಯಲ್ಲಿ 364 ಎಂಡೋ ಪೀಡಿತರು ಸಾವನ್ನಪ್ಪಿದ್ದು, 6,314 ಮಂದಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಎಂಡೋಸಲ್ಫಾನ್ ಕೋಶ ನೋಡಲ್ ಅಧಿಕಾರಿ ಡಾ| ನವೀನ್ ಚಂದ್ರ ಕುಲಾಲ್ ಹೇಳಿದರು.
ಜಿ.ಪಂ. ಸಿಇಒ ಡಾ| ಆನಂದ್ ಕೆ., ಎಡಿಸಿ ಡಾ| ಜಿ. ಸಂತೋಷ್ ಕುಮಾರ್, ಡಿಎಚ್‌ಒ ಡಾ| ತಿಮ್ಮಯ್ಯ, ಆರೋಗ್ಯ ಇಲಾಖೆ ಎಂಡೋಸಲ್ಫಾನ್ ವಿಭಾಗದ ಸಮನ್ವಯಾಧಿಕಾರಿ ಸಜೀವುದ್ದೀನ್, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.