ಬಾಗೇಪಲ್ಲಿ: ತಾಲೂಕಿನ ಪರಗೋಡು ಗ್ರಾಪಂ ವ್ಯಾಪ್ತಿಯ ಕಾಶಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಎಲ್ಲೆಡೆ ಅನೈರ್ಮಲ್ಯವಿದ್ದು, ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಳೆದ ಮೂರು ತಿಂಗಳಿಂದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಮೋಟಾರ್ ಪಂಪ್ ಮೂಲಕ ಮಿನಿ ಟ್ಯಾಂಕ್‌ಗೆ ನೀರು ಸರಬರಾಜು ಆಗುತ್ತಿಲ್ಲ. ಬದಲಾಗಿ ಕಾಶಾಪುರಕ್ಕೆ ಅರ್ಧ ಕಿ.ಮಿ. ದೂರದಲ್ಲಿ ತೊಟ್ಟಿ ನಿರ್ಮಿಸಿ, ಮೂರು ನಲ್ಲಿ ಅಳವಡಿಸಿ, ನೀರು ಸರಬರಾಜು ಮಾಡಲಾಗುತ್ತಿದೆ. ಈ ಸುಡು ಬಿಸಿಲಲ್ಲಿ ಅರ್ಧ ಕಿ.ಮೀ. ದೂರಕ್ಕೆ ಮಹಿಳೆಯರು, ಮಕ್ಕಳೊಂದಿಗೆ ಬಿಂದಿಗೆ ಹಿಡಿದು ನೀರು ತರಬೇಕಿದೆ.
ಹಾಲಿ ಕೊಳವೆ ಬಾವಿಯಿಂದ ನೀರು ಶುದ್ಧೀಕರಣ ಮಾಡದೆ ಸರಬರಾಜು ಮಾಡಲಾಗುತ್ತಿದ್ದು, ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಶುದ್ಧ ನೀರು ಘಟಕ ಸ್ಥಾಪನೆ ಮಾಡಬೇಕೆಂದು ಹಲವು ವರ್ಷಗಳಿಂದ ಮನವಿ ಸಲ್ಲಿಸು ತ್ತಿದ್ದರೂ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಅವ್ಯವಸ್ಥೆಗಳನ್ನು ಸರಿಪಡಿಸ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೊಳವೆಬಾವಿ ಕೊರೆಸಿ: ಗ್ರಾಮಕ್ಕೆ ಅರ್ಧ ಕಿ.ಮೀ. ದೂರ ದಲ್ಲಿ ತೊಟ್ಟಿ ನಿರ್ಮಾಣ ಮಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ಬಿಸಿಲಿನ ಬೇಗೆಯಲ್ಲಿ ನೀರು ಸಂಗ್ರಹ ಮಾಡಲು ಕಷ್ಟವಾಗುತ್ತಿದೆ. ನೂತನವಾಗಿ ಕೊಳವೆಬಾವಿ ಕೊರೆಸಲು ಕ್ರಮ ಕೈಗೊಳ್ಳಬೇಕುಎಂದು ಕಾಶಾಪುರ ಗ್ರಾಪಂ ಸದಸ್ಯ ಅಶ್ವತ್ಥಪ್ಪ ತಿಳಿಸಿದರು.
ಕೊಳವೆ ಬಾವಿ ಕೊರೆಸಲು ತೀರ್ಮಾನ: ಗ್ರಾಮದಲ್ಲಿ ಇರುವ ಕೊಳವೆ ಬಾವಿಯಲ್ಲಿ ನೀರಿನ ಕೊರತೆ ಕಂಡುಬಂದಿದ್ದು, ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಟಾಸ್ಕ್ಫೋರ್ಸ್ ಸಭೆಯಲ್ಲಿ ಕೊಳವೆ ಬಾವಿ ಕೊರೆಸಲು ತೀರ್ಮಾನಿಸಲಾಗಿದೆ. ಈ ಕೊಳವೆಬಾವಿ ಅನುಷ್ಠಾನವಾದರೆ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ಪರಗೋಡು ಗ್ರಾಪಂನ ಪಿಡಿಒ ಸುಲ್ತಾನ್ ಅಜೀಜ್ ತಿಳಿಸಿದ್ದಾರೆ.