ಹಾಸನ: ಕಾರಾಗೃಹ ಬಂಧಿಗಳ ಯೋಗ ಕ್ಷೇಮದ ಜೊತೆಗೆ ಜಿಲ್ಲಾ ಕಾರಾಗೃಹದ ಆತಂರಿಕ ಸಮಸ್ಯೆಗಳಿಗೆ ಸೂಕ್ತ ಹಾಗೂ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಕಾರಾಗೃಹದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಕಾರಾಗೃಹದಲ್ಲಿ ನಡೆದ ಸಂದರ್ಶಕರ ಮಂಡಳಿ ಸಭೆಯಲ್ಲಿ ಮಾತನಾ ಡಿದ ಅವರು, ಶಾಂತಿಗ್ರಾಮ ಸರ್ವೆ ನಂ 488ರಲ್ಲಿ ನೂತನ ಕೇಂದ್ರ ಕಾರಾಗೃಹಕ್ಕೆ ಮಂಜೂರಾಗಿರುವ 40ಎಕರೆ ಜಮೀನಿನಲ್ಲಿ 13 ಎಕರೆ ಜಮೀನನ್ನು ಕೆಎಸ್‌ಆರ್‌ಪಿ ಪಡೆ ಬಳಸಿಕೊಂಡಿದ್ದು, ಅವರಿಂದ ಅದನ್ನು ಕಾರಾಗೃಹ ಇಲಾಖಾ ವಶಕ್ಕೆ ತುರ್ತಾಗಿ ಹಸ್ತಾಂತರಿಸುವ ಬಗ್ಗೆ ಪತ್ರ ಮುಖೇನ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ಕಾರಾಗೃಹದ ಬಂಧಿಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದಾಗ ವೈದ್ಯರ ಸಲಹೆ ಮೇರೆಗೆ ಒಳರೋಗಿಯಾಗಿ ದಾಖಲಾಗುವ ಬಂಧಿಗಳಿಗೆ ಪ್ರತ್ಯೇಕ ವಾಗಿ ಒಂದು ಸಂಖ್ಯೆ ಜೈಲ್ ವಾರ್ಡ್ ಕಾಯ್ದಿರಿಸಬೇಕು. ಕಾರಾಗೃಹ ಬಂಧಿಗಳ ಆರೋಗ್ಯ ತಪಾಸಣೆ ಸಲುವಾಗಿ ಹಾಸನದ ಹಿಮ್ಸ್ ಆಸ್ಪತ್ರೆ ವತಿಯಿಂದ ವಾರಕ್ಕೆ ಮೂರು ಬಾರಿ ವೈದ್ಯರನ್ನು ಕಳುಸಹಿಸಬೇಕು. ಬಂಧಿಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದ ಸಮಯದಲ್ಲಿ ಆಸ್ಪತ್ರೆ ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ಪ್ರತಿನಿತ್ಯ ವಿತರಿಸಲು ಒಬ್ಬ ಪುರುಷ ಹಾಗೂ ಒಬ್ಬ ಮಹಿಳಾ ನರ್ಸ್ ಸಿಬ್ಬಂದಿಯನ್ನು ಆರೋಗ್ಯ ಇಲಾಖೆಯಿಂದ ನಿಯೋಜಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಮೂಲಸೌಕರ್ಯ ಒದಗಿಸಿ: ಶಾಸಕರಾದ ಪ್ರೀತಂ ಜೆ ಗೌಡ ಮಾತನಾಡಿ, ಕಾರಾಗೃಹ ಮುಂಭಾಗದ ರಸ್ತೆ ಡಾಂಬರೀಕರಣ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಲ್ಲದೆ, ಮೂಲಭೂತ ಸೌಕರ್ಯಗಳನ್ನು ಕುರಿತಂತೆ ಹೆಚ್ಚಿನ ಗಮನಹರಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಂದೀಖಾನೆ ಸ್ಥಳ ಕೊರತೆ: ಕಾರಾಗೃಹ ಉಪ ಅಧೀಕ್ಷಕ ಬಿ.ಸುರೇಶ್ ಮಾತನಾಡಿ, ಕಾರಾಗೃಹದಲ್ಲಿ 250 ಪುರುಷ ಮತ್ತು 9 ಮಹಿಳಾ ಬಂಧಿಗಳನ್ನು ದಾಖಲಿಡುವ ಸಾಮರ್ಥ್ಯ ಇದೆ. ಆದರೆ ಪ್ರಸ್ತುತ ಬಂಧಿಗಳ ಸಂಖ್ಯೆ ಹೆಚ್ಚಾಗಿದ್ದು ಆಡಳಿತ ಅವಶ್ಯಕತೆ ಮೇರೆಗೆ 25 ಬಂಧಿಗಳನ್ನು ಸಕಲೇಶಪುರ ತಾಲೂಕು ಉಪಕಾರಾಗೃಹಕ್ಕೆ ವರ್ಗಾಹಿಸಲು ಅನುಮತಿ ಕೊಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಮೋಹನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ್, ಕೃಷಿ ಇಲಾಖೆಯ ಉಪ ನಿರ್ದೇಶಕ ಭಾನು ಪ್ರಕಾಶ್, ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಜಿಲ್ಲಾ ಉದ್ಯೋಗಾಧಿಕಾರಿ ಚೇತನ್ ಕುಮಾರ್, ಶಿಕ್ಷಣಾಧಿಕಾರಿ ತಮ್ಮಣ್ಣಗೌಡ ಮತ್ತಿತರರು ಹಾಜರಿದ್ದರು. ಸಭೆಯ ನಂತರ ಹಾಸನ ಕಾರಾಗೃಹಕ್ಕೆ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರು ಭೇಟಿ ನೀಡಿ ಕೈದಿಗಳ ಅಹವಾಲು ಆಲಿಸಿದರು.