Advertisement

Manipal ಜನರ ಸಮಸ್ಯೆ ಪರಿಹರಿಸಿ; ಅಸಡ್ಡೆ ಸಹಿಸಲಾಗದು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

11:36 PM Nov 24, 2023 | Team Udayavani |

ಮಣಿಪಾಲ: ಈ ವರ್ಷ ಕಡಿಮೆ ಮಳೆಯಾಗಿರುವುದರಿಂದ ಬರದ ಛಾಯೆಯಿದೆ. ತಹಶೀಲ್ದಾರ್‌, ಪಿಡಿಒ, ವಿಎ ಮೊದಲಾದ ಅಧಿಕಾರಿಗಳು ಕೇಂದ್ರ ಸ್ಥಾನಗಳಲ್ಲಿಯೇ ಇದ್ದು, ಜನರ ಸಮಸ್ಯೆಗ ಳನ್ನು ಆಲಿಸಿ, ಪರಿಹಾರ ನೀಡಬೇಕು. ಜನಪ್ರತಿನಿಧಿಗಳು ಸೂಚಿಸುವ ಸಮಸ್ಯೆಗಳನ್ನು ಬಗೆಹರಿಸಲು ಅಸಡ್ಡೆ ತೋರಿಸಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಶುಕ್ರವಾರ ಕರ್ನಾಟಕ ಅಭಿವೃದ್ಧಿ ಕಾರ್ಯ ಕ್ರಮಗಳ ತ್ತೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರದ ಯೋಜನೆಗಳ ಅನುಷ್ಠಾನಕ್ಕೆ ಆಸಕ್ತಿ ತೋರಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಕಾರಕ್ಕೆ, ಉಸ್ತುವಾರಿ ಸಚಿವರಿಗೆ ಕೆಟ್ಟ ಹೆಸರು ಬರುತ್ತದೆ. ಈ ಬಗ್ಗೆ ಎಚ್ಚರ ಇರಲಿ ಎಂದರು.

ಹಾರಿಕೆ ಉತ್ತರ ಸಹಿಸಲಾಗದು
ಜನರಿಗೆ ಶಾಸಕರು ಉತ್ತರ ನೀಡ ಬೇಕಾಗಿರುವುದರಿಂದ ಶಾಸಕರು ಸೂಚಿ ಸುವ ಕಾರ್ಯಗಳನ್ನು ಆದ್ಯತೆ ಮೇರೆಗೆ ಮಾಡಬೇಕು. ಕೆಡಿಪಿ ಸಭೆಯಲ್ಲಿ ಚರ್ಚೆ ಯಾದ ಎಲ್ಲ ವಿಷಯಕ್ಕೂ ಮುಂದಿನ ಸಭೆಯಲ್ಲಿ ಉತ್ತರ ಅಥವಾ ಪರಿಹಾರ ಇರಬೇಕು. ಎಲ್ಲದಕ್ಕೂ ಅಧಿಕಾರಿಗಳು ತಲೆ ಅಲ್ಲಾಡಿಸುವುದು ಅಥವಾ ಹಾರಿಕೆ ಉತ್ತರ ನೀಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಬೈಂದೂರು ತಾಲೂಕಿನ ಮರವಂತೆ ಯಲ್ಲಿ ಹೊರ ಬಂದರು, ಗಂಗೊಳ್ಳಿ ಬಂದರಿನ ಮರು ನಿರ್ಮಾಣ, ಗಂಗೊಳ್ಳಿ ಬಂದರು ಹಾಗೂ ಕೋಡಿ ಜೆಟ್ಟಿಯ ನ್ಯಾವಿಗೇಶನ್‌ ಚಾನೆಲ್‌ನಲ್ಲಿ ಹೂಳೆತ್ತುವ ಕಾಮಗಾರಿಗಳನ್ನು ತಾಂತ್ರಿಕ ಸಮಸ್ಯೆಗ ಳಿಂದ ಕೈಗೊಳ್ಳದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಬಂದರು ಇಲಾಖೆ ಹಾಗೂ ಸಿಆರ್‌ಝ್ಡ್‌ನ‌ವರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಕಾಮಗಾರಿಗಳನ್ನು ತ್ವರಿತವಾಗಿ ಗುಣಮಟ್ಟದೊಂದಿಗೆ ಕಾಲಮಿತಿಯೊಳಗೆ ಪೂರ್ಣಗೊಳಿಸ ಬೇಕು ಎಂದು ಸೂಚಿಸಿದರು.

ಬರ ನಿರ್ವಹಣೆಗೆ ಸೂಚನೆ
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 22ರಷ್ಟು ಕಡಿಮೆ ಮಳೆಯಾಗಿದ್ದು, ಅಂತರ್ಜಲ ಮಟ್ಟವೂ ಶೇ. 24ರಷ್ಟು ಕಡಿಮೆಯಾಗಿದೆ. ಬೇಸಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳ ಬೇಕು. ಬಾಕಿ ಉಳಿದಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆಯಲ್ಲಿ ಪೂರ್ಣಗೊಳಿಸಬೇಕು. ನಗರೋತ್ಥಾನ ನಾಲ್ಕನೇ ಹಂತದ ಕಾಮಗಾರಿಗಳಲ್ಲಿ ಅನುಮೋದನೆಯಾದ 71 ಕಾಮಗಾರಿ ಗಳಲ್ಲಿ 32 ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

Advertisement

ಶಾಸಕರಾದ ವಿ. ಸುನಿಲ್‌ ಕುಮಾರ್‌, ಯಶ್‌ಪಾಲ್‌ ಎ. ಸುವರ್ಣ, ಗುರುರಾಜ್‌ ಗಂಟಿಹೊಳೆ, ಕಿರಣ್‌ ಕುಮಾರ್‌ ಕೊಡ್ಗಿ, ಗುರ್ಮೆ ಸುರೇಶ್‌ ಶೆಟ್ಟಿ, ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಜಿ.ಪಂ. ಸಿಇಒ ಪ್ರಸನ್ನ ಎಚ್‌., ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಡಾ| ಅರುಣ್‌ ಕೆ, ಎಡಿಸಿ ಮಮತಾದೇವಿ ಜಿ.ಎಸ್‌, ಡಿಎಫ್‌ಒ ಗಣಪತಿ ಮೊದಲಾದವರಿದ್ದರು.

ಸರಕಾರಿ ಪತ್ರವೆಂದರೆ ಲವ್‌ ಲೆಟರ್‌ ಅಲ್ಲ
ಯಾವುದೇ ಒಂದು ಯೋಜನೆ ಅಥವಾ ಸಮಸ್ಯೆಗೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ಪತ್ರ ಬರೆದು ಸುಮ್ಮನೆ ಕೂರುವುದಲ್ಲ. ಅಪ್‌ಡೇಟ್‌ ಪಡೆಯುತ್ತಿರಬೇಕು. ಸರಕಾರಿ ವ್ಯವಸ್ಥೆಯ ಪತ್ರ ವ್ಯವಹಾರ ಎಂದರೆ ಲವ್‌ ಲೆಟರ್‌ ಅಲ್ಲ. ಜಿಲ್ಲಾಡಳಿತ ಇದೆಲ್ಲವನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಶಾಸಕ – ಎಸ್‌ಪಿ ವಾಗ್ವಾದ
ಲಾರಿ ಮುಷ್ಕರದ ಸಂದರ್ಭ ಲಾರಿ ಚಾಲಕರು ಮತ್ತು ಮಾಲಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವ ಬಗ್ಗೆ ಶಾಸಕ ಸುನಿಲ್‌ ಕುಮಾರ್‌ ಪ್ರಸ್ತಾವಿಸಿ, ಈ ರೀತಿ ಮಾಡಿರುವುದು ಸರಿಯಲ್ಲ ಎಂದರು. ಎಸ್‌ಪಿ ಅವರು ಮಧ್ಯ ಪ್ರವೇಶಿಸಿ, ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ ಎಂದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಜಿಲ್ಲೆಯಲ್ಲಿ 3.12 ಲಕ್ಷ ಕುಟುಂಬಗಳಿದ್ದು, ಈ ಪೈಕಿ 1,83,072 ಕುಟುಂಬದ ಯಜಮಾನಿಯರು ಗೃಹಲಕ್ಷಿ$¾ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಜಿಲ್ಲೆಯ ಕೊರಗ ಹಾಗೂ ಮಲೆಕುಡಿಯ ಜನಾಂಗದವರಿಗೆ ಗೃಹಲಕ್ಷಿ$¾ ಯೋಜನೆ ತಲುಪುವ ದೃಷ್ಟಿಯಿಂದ ವಿಶೇಷ ಅಭಿಯಾನ ಮಾಡಬೇಕು. ಯಾವುದೇ ಕುಟುಂಬವೂ ಯೋಜನೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವೆ ಲಕ್ಷ್ಮೀ ಸೂಚಿಸಿದರು.

ಕೋಳಿ ಅಂಕದ ಚರ್ಚೆ
ಜಿಲ್ಲಾದ್ಯಂತ ಸಾಂಪ್ರದಾಯಿಕ ವಾಗಿ ನಡೆದುಕೊಂಡು ಬರುತ್ತಿರುವ ಕೋಳಿ ಅಂಕಕ್ಕೆ ಅವಕಾಶ ನೀಡದೇ ಇರುವ ಬಗ್ಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಧಾರ್ಮಿಕ ಆಚರಣೆಯ ಅನಂತರ ನಡೆಯುವ ಕೋಳಿ ಅಂಕಕ್ಕೆ ವರ್ಷಕ್ಕೆ ಒಮ್ಮೆ ಅವಕಾಶ ನೀಡಬೇಕು. ಮೋಜಿಗಾಗಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಪೊಲೀಸ್‌ ಇಲಾಖೆಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next