Advertisement

ಮೂಲ ಸೌಲಭ್ಯಗಳ ಕೊರತೆ ನಿವಾರಿಸಿ

10:37 AM Sep 17, 2019 | Team Udayavani |

ಜಗಳೂರು: ಪಟ್ಟಣದಲ್ಲಿ ಕುಡಿಯುವ ನೀರು ಸರಿಯಾಗಿ ಬಿಡುತ್ತಿಲ್ಲ, ಹಂದಿಗಳ ಹಾವಳಿ, ಕಾಮಗಾರಿ ನಡೆಸದೆ ನಕಲಿ ಬಿಲ್ ಸೃಷ್ಟಿಸಿ ಸರಕಾರದ ಹಣ ದುರುಪಯೋಗ…ಸೇರಿದಂತೆ ಲೋಕಾಯುಕ್ತ ಪೊಲೀಸ್‌ ಆಯೋಜಿಸಿದ್ದ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳ ಮಹಾಪೂರವೇ ಹರಿದು ಬಂತು.

Advertisement

ಪಟ್ಟಣದ ಗುರುಭವನದಲ್ಲಿ ಸೋಮವಾರ ಕರ್ನಾಟಕ ಲೋಕಾಯುಕ್ತವು ತಾಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಆಯೋಜಿಸಿದ್ದ ಕುಂದು ಕೊರತೆಗಳ ಸಭೆಯಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಪಟ್ಟಣದ ನಾಗರೀಕರು ಹೆಚ್ಚು ದೂರು, ಅರ್ಜಿ ಸಲ್ಲಿಸಿದರೆ ಗ್ರಾಮೀಣ ಪ್ರದೇಶಗಳ ಜನರು ನರೇಗಾ ಯೋಜನೆಯಡಿ ನಡೆದ ಅವ್ಯವಹಾರ ಹಾಗೂ ಹಣ ದುರುಪಯೋಗದ ಬಗ್ಗೆ ಅಹವಾಲುಗಳನ್ನು ಸಲ್ಲಿಸಿದರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಅಧಿಧೀಕ್ಷಕ ಮುಸ್ತಾಕ್‌ ಅಹಮದ್‌ ಮಾತನಾಡಿ, ದೂರು ನೀಡಿದ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ, ಅಗತ್ಯವಿದ್ದರೆ ಸ್ಥಳಕ್ಕೆ ಭೇಟಿ ನೀಡುವ ಮೂಲಕ 15 ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಜನರ ಕೆಲಸ ದೇವರ ಕೆಲಸವೆಂದು ಭಾವಿಸಿ ಸಕಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳಗೆ ಸ್ಪಂದಿಸುವಂತಾಗಬೇಕು. ಜನ ವೃಥಾ ಪರದಾಡುವಂತೆ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಕಳೆದ ಬಾರಿಯ ಬರ ಪರಿಹಾರ ಹಣ ಬಿಡುಗಡೆಯಾಗಿದ್ದರೂ ಬಹುತೇಕ ರೈತರ ಖಾತೆಗಳಿಗೆ ಜಮೆಯಾಗಿಲ್ಲ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಸಹ ಹಣ ಜಮಾ ಆಗಿಲ್ಲವೆಂಬ ದೂರು ಕೇಳಿ ಬರುತ್ತಿದ್ದು, ಈ ಕೂಡಲೇ ಕಂದಾಯ ಮತ್ತು ಕೃಷಿ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ, ಸಮಸ್ಯೆ ಅರಿತು ರೈತರ ಖಾತೆಗೆ ಪರಿಹಾರದ ಹಣವನ್ನು ಜಮಾ ಮಾಡಬೇಕೆಂದು ಸೂಚನೆ ನೀಡಿದರು.

ಈ ವೇಳೆ ಖಾಸಗಿ ಬಸ್‌ ಮಾಲೀಕರು ಮತ್ತು ಏಜೆಂಟರು ದೂರು ಸಲ್ಲಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ದಾವಣಗೆರೆ ಮತ್ತು ಜಗಳೂರಿಗೆ ಮಾತ್ರ ಓಡಾಡುತ್ತಿವೆ. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಬಸ್‌ ಪಾಸ್‌ ಪಡೆದರೂ ಉಪಯೋಗಕ್ಕೆ ಬಾರದಂತಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಬಸ್‌ ಓಡಿಸಿ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಬಸ್‌ ಮಾಲೀಕರಾದ ಮೆದಗಿನಕೆರೆ ವೀರಣ್ಣ ಹಾಗೂ ಪೀರ್‌ ಬಾಷಾ ದೂರು ಅರ್ಜಿ ಸಲ್ಲಿಸಿದರು.

ತುಮಾಟಿ, ದೇವೇಗೌಡ, ಬಸವೇಶ್ವರ, ಗಂಗಾಂಬಿಕ, ಇಂದಿರಾ ಬಡಾವಣೆಗಳಲ್ಲಿ ಚರಂಡಿ, ರಸ್ತೆಗಳಿಲ್ಲದೇ ನೀರು ನಿಂತು ಜನ ಸಾಂಕ್ರಾಮಿಕ ರೋಗಗಳಿಂದ ಬಳಲುವಂತಾಗಿದ್ದು, ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಮಹಿಳೆಯರು ಅರ್ಜಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್‌ ಮುರುಗೇಶ್‌, ತಹಶೀಲ್ದಾರ್‌ ಹುಲ್ಲುಮನಿ ತಿಮ್ಮಣ್ಣ, ಪಪಂ ಮುಖ್ಯಾಧಿಕಾರಿ ರಾಜು ಬಣಕಾರ್‌, ಆರ್‌ಐ ಸಂತೋಷ್‌, ವ್ಯವಸ್ಥಾಪಕ ರವಿಕುಮಾರ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next