Advertisement

ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ

11:42 AM Mar 15, 2022 | Team Udayavani |

ಧಾರವಾಡ: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ತನಿಖೆ ಮಾಡಿ ಇತ್ಯರ್ಥ ಪಡಿಸಬೇಕೆಂದು ಡಿಸಿ ನಿತೇಶ ಪಾಟೀಲ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ 2-3ನೇ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳ ಕಲ್ಯಾಣ ಸಮಿತಿಯಿಂದ ನೊಂದ ಮಕ್ಕಳನ್ನು ತಾತ್ಕಾಲಿಕವಾಗಿ ಅಭಿರಕ್ಷಣೆ ಮಾಡುವ ಸಂದರ್ಭದಲ್ಲಿ ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಅಲ್ಲಿನ ಮೂಲಸೌಕರ್ಯ, ಮಕ್ಕಳ ಸ್ನೇಹಿ ಪರಿಸರ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಪಾಲಕರ-ಮಕ್ಕಳ ಪಾತ್ರ ಮುಖ್ಯ. ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಮಧ್ಯವರ್ತಿಗಳು ಕಂಡು ಬಂದಲ್ಲಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ವಿವಿಧ ಇಲಾಖೆಗಳು ಸಮನ್ವಯತೆಯಿಂದ ಸಾಧಿಸಬೇಕು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು. ಶಾಲೆಗೆ ಸೇರಿರುವ ಮತ್ತು ಶಾಲೆಯಿಂದ ಹೊರಗಿರುವ ಪ್ರತಿ ಮಗು ಮಕ್ಕಳ ಹಕ್ಕನ್ನು ಸಂತೋಷದಿಂದ ಅನುಭವಿಸುವಂತಹ ವಾತಾವರಣ ಸೃಷ್ಟಿಸಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, ಪೋಕ್ಸೋ, ಬಾಲ್ಯವಿವಾಹ ನಿಷೇದ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಮಕ್ಕಳನ್ನು ರಕ್ಷಿಸಬೇಕು. ಮಕ್ಕಳಿಗೆ ಪೋಕ್ಸೋ, ಲೈಂಗಿಕ ದೌರ್ಜನ್ಯ ಬಗ್ಗೆ ತಿಳಿವಳಿಕೆ ನೀಡಿ ಅವರಲ್ಲಿ ಎಚ್ಚರಿಕೆ ಮೂಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಪ್ರಕಟಿಸಿರುವ ಘನತೆಯ ಬದುಕು ಕೈಪಿಡಿಯನ್ನು ಡಿಸಿ ನಿತೇಶ ಪಾಟೀಲ ಬಿಡುಗಡೆ ಗೊಳಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ|ಕಮಲಾ ಬೈಲೂರ ಸಭೆ ನಿರ್ವಹಿಸಿ, ಮಕ್ಕಳ ರಕ್ಷಣಾ ಘಟಕದ ಕಾರ್ಯಗಳನ್ನು ಪ್ರಸ್ತುತಪಡಿಸಿದರು.

Advertisement

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ ಯರಗಟ್ಟಿ, ಜಿಪಂ ಸಿಇಒ ಡಾ|ಸುರೇಶ ಇಟ್ನಾಳ, ಉಪ ಪೊಲೀಸ್‌ ಆಯುಕ್ತ ಗೋಪಾಲ ಬ್ಯಾಕೋಡ ಇದ್ದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಂಕದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌. ಎಸ್‌. ಕೆಳದಿಮಠ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ|ಎನ್‌.ಆರ್‌.ಪುರುಷೋತ್ತಮ, ತಾಲೂಕು ವೈದ್ಯಾ ಧಿಕಾರಿ ಡಾ|ಕೆ.ಎನ್‌.ತನುಜಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕಾರ್ಮಿಕ ಇಲಾಖೆ, ಲೋಕೋಪಯೋಗಿ ಇಲಾಖೆ, ತನಿಖಾ ಸಮಿತಿ ಸದಸ್ಯರು, ಬಾಲ ನ್ಯಾಯಮಂಡಳಿ ಸದಸ್ಯರು, ಮಕ್ಕಳ ಪಾಲನಾ ಸಂಸ್ಥೆಯ ಅಧೀಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಇದ್ದರು.

ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರತಿ ಶಾಲೆ, ಕಾಲೇಜಿಗೆ ಓರ್ವ ಶಿಕ್ಷಕಿಯನ್ನು ಆಯ್ಕೆ ಮಾಡಬೇಕು. ಆ ಬಳಿಕ ಅವರಿಗೆ ಮಕ್ಕಳ ರಕ್ಷಣೆಗೆ ಅಗತ್ಯವಿರುವ ಕಾನೂನಾತ್ಮಕ ತಿಳಿವಳಿಕೆ, ಮಕ್ಕಳ ರಕ್ಷಣೆಗೆ ಇರುವ ವಿವಿಧ ಕಾಯ್ದೆಗಳ ಕುರಿತು ತರಬೇತಿ ನೀಡಬೇಕು. ಈ ತರಬೇತಿ ಹೊಂದಿದ ಶಿಕ್ಷಕಿಯರ ಮೂಲಕ ಪ್ರತಿ ತಿಂಗಳು ಶಾಲೆಗಳ ಬಾಲಕಿಯರಿಗೆ ರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು.

ನಿತೇಶ ಪಾಟೀಲ, ಡಿಸಿ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next