Advertisement

ಸಕಾರಾತ್ಮಕತೆಯಿಂದ ಸಮಸ್ಯೆಗೆ ಪರಿಹಾರ

12:38 PM Feb 07, 2018 | Team Udayavani |

ಮೈಸೂರು: ಸಕಾರಾತ್ಮಕ ಭಾವನೆ, ಒಳ್ಳೆಯ ಚಿಂತನೆ ಬೆಳೆಸಿಕೊಳ್ಳುವ ಜತೆಗೆ ಬದುಕಿನಲ್ಲಿ ಆತ್ಮವಿಶ್ವಾಸ, ಧೈರ್ಯ ಬೆಳೆಸಿಕೊಂಡರೆ ಯಾವುದೇ  ಕಾಯಿಲೆಗಳು ಹಾಗೂ ಸಮಸ್ಯೆಗಳಿಂದ ಪಾರಾಗಬಹುದು ಎಂದು ರಾಮಕೃಷ್ಣ ಆಶ್ರಮದ ಮಹೇಶಾತ್ಮಾನಂದಜೀ ಅಭಿಪ್ರಾಯಪಟ್ಟರು. 

Advertisement

ಸಂಜೀವಿನಿ  ಸಮಾನ ಮನಸ್ಕರ ವೇದಿಕೆ ವತಿಯಿಂದ ವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಸೋಮವಾರ ನಗರದ ಜೆ.ಕೆ. ಮೈದಾನದಲ್ಲಿರುವ ಅಮೃತ ಮಹೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕ ರಮೇಶ್‌ ಬಿಳಿಕೆರೆ ಅವರ ಕ್ಯಾನ್ಸರ್‌ ಗೆದ್ದ ಜೀವನ ಪ್ರೇಮ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಯಾವುದೇ ಭಯಾನಕ ಕಾಯಿಲೆ ಗುಣಪಡಿಸಲಾಗುವುದಿಲ್ಲ ಎಂಬ ಭಾವನೆ ಹಾಗೂ ಕ್ಯಾನ್ಸರ್‌ ಬಂದರೆ ಜೀವನವೇ ಇಲ್ಲ ಎಂಬ ಭಾವನೆ  ಅನೇಕರಲ್ಲಿದೆ. ಆದರೆ, ಇಂತಹ ಮನಸ್ಥಿತಿ ಬೆಳೆಸಿಕೊಳ್ಳುವುದು ಸರಿಯಲ್ಲ, ಅದರಲ್ಲೂ ಕ್ಯಾನ್ಸರ್‌ ಬಂದರೆ ಶೇ.80 ಜೀವನ ಹಾಳಾಗಲಿದೆ ಎಂಬ ಭಾವನೆಯನ್ನು ಮನಸ್ಸಿನಿಂದ ತೆಗೆದು ಹಾಕಬೇಕಿದೆ.

ಪ್ರೀತಿ, ವಿಶ್ವಾಸದ ಜತೆಗೆ ಒಳ್ಳೆಯ ಮಾತುಗಳಿಂದ ಯಾವುದೇ ರೋಗಿಯ ಮನಸ್ಸನ್ನು ಪರಿವರ್ತಿಸಬಹುದಾಗಿದ್ದು, ಸಕಾರಾತ್ಮಕ ಭಾವನೆ, ಒಳ್ಳೆಯ ಚಿಂತನೆಯ ಜತೆಗೆ ಬದುಕಿನಲ್ಲಿ ಆತ್ಮವಿಶ್ವಾಸ ಬೆಳೆಸಿಕೊಂಡರೆ ಯಾವುದೇ  ರೋಗಗಳಿಂದ ಗುಣಮುಖ ಹೊಂದಬಹುದು.

ಆದರೆ, ಆತ್ಮವಿಶ್ವಾಸದ ಕೊರತೆ ಹಾಗೂ ರೋಗದ ಬಗ್ಗೆ ಆತಂಕ ಪಡುವುದರಿಂದ ಅನೇಕರು ಭಯಾನಕ ರೋಗಗಳಿಗೆ ಬಲಿಯಾಗುತ್ತಾರೆ. ಹೀಗಾಗಿ ಪ್ರತಿಯೊಬ್ಬರು ಜೀವನದಲ್ಲಿ ಆತ್ಮವಿಶ್ವಾಸ, ಧೈರ್ಯ ಬೆಳೆಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. 

Advertisement

ಅಲ್ಲದೆ, ವೈದ್ಯರು ರೋಗಿಗಳೊಂದಿಗೆ ಪ್ರೀತಿ, ಸಂಯಮದಿಂದ ವರ್ತಿಸಿದರೆ ರೋಗ ಗಳು ತಾನಾಗಿಯೇ ನಿಯಂತ್ರಣಕ್ಕೆ ಬರಲಿದೆ.  ಆದರೆ, ಪ್ರಸ್ತುತ ಸಂದರ್ಭದಲ್ಲಿ ಸೇವಾ ಕ್ಷೇತ್ರವಾಗಿದ್ದ ಆರೋಗ್ಯ ಕ್ಷೇತ್ರ ಹಣ ಮಾಡುವ ದಂಧೆಯಾಗಿ ಪರಿವರ್ತನೆ ಯಾಗಿದ್ದು, ಇದ ರಿಂದಾಗಿ  ವೈದ್ಯರು ರೋಗಿಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವ ಹೊಂದಿರುವುದನ್ನು ಕಾಣ ಬಹುದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸ್ವತ್ಛ ಹಾಗೂ  ಗುಣಮಟ್ಟದ ಆಹಾರ ಸೇವನೆ ಔಷಧಿಗಿಂತಲೂ ಮಿಗಿಲಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವ ಜತೆಗೆ  ಪ್ರಕೃತಿಯನ್ನು ಉಳಿಸಿ-ಬೆಳೆಸುವ ಮನೋಭಾವ ಬೆಳೆಸಿ ಕೊಳ್ಳಬೇಕು. ಪ್ರಕೃತಿಯನ್ನು ನಿರ್ಲಕ್ಷಿಸಿದರೆ ರೋಗಗಳಿಗೆ ತುತ್ತಾಗುವುದರಲ್ಲಿ ಯಾವುದೇ  ಸಂದೇಹವಿಲ್ಲ ಎಂದು ಹೇಳಿದರು.

ಜೀವನ ಪ್ರೀತಿಸಿ ಆನಂದಿಸಿ: ಕೃತಿ ಕುರಿತು ಮಾತನಾಡಿದ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ, ರೋಗಿಗಳಿಗೆ ಸಾವಿನ ನಿರೀಕ್ಷೆ ಎದುರಾದರೆ ಹೆಚ್ಚಿನ  ಮಾನಸಿಕ ತೊಂದರೆ ಅನುಭವಿಸಲಿದ್ದು, ಹೀಗಾಗಿ ರೋಗಿಗಳು ಯಾವುದೇ ಕಾಯಿಲೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು.

ಮೌಡ್ಯಗಳಿಂದ ದೂರವಾಗಿ ಜೀವನ ಕ್ರಮವನ್ನು ಸರಿಯಾದ ದಾರಿಯಲ್ಲಿ ರೂಪಿಸಿಕೊಂಡರೆ ಆರೋಗ್ಯವಂತ ಜೀವನ ಸಾಗಿಸಬಹುದಾಗಿದೆ. ಭಯಾನಕ  ಕ್ಯಾನ್ಸರ್‌ ರೋಗವನ್ನು ಆತ್ಮವಿಶ್ವಾಸದಿಂದ ಎದುರಿಸಿ ಸಂಪೂರ್ಣವಾಗಿ ಗುಣಮುಖ ರಾಗಿರುವ ರಮೇಶ್‌ ಬಿಳಿಕೆರೆ ಅವರು, ಪುಸ್ತಕ ಬರೆಯುವ ಮೂಲಕ  ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದು, ಪ್ರತಿಯೊಬ್ಬರು ಜೀವನವನ್ನು ಪ್ರೀತಿಸಿ ಆನಂದದ ಜೀವನ ಸಾಗಿಸಬೇಕಿದೆ ಎಂದರು.  

ಕಾರ್ಯಕ್ರಮದಲ್ಲಿ ಭಾರತ್‌ ಕ್ಯಾನ್ಸರ್‌ ಆಸ್ಪತ್ರೆಯ ಡಾ.ವಿಶ್ವೇಶ್ವರ, ಯೋಗ ಪ್ರವಚಕ ಡಾ.ರಾಘವೇಂದ್ರ ಪೈ, ಕೆ.ಆರ್‌.ಆಸ್ಪತ್ರೆ ವೈದ್ಯಕೀಯ  ಅಧೀಕ್ಷಕ ಡಾ.ಚಂದ್ರಶೇಖರ್‌, ಮಾಜಿ ಶಾಸಕ ಎಂ.ಸತ್ಯನಾರಾಯಣ, ಎಂಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಅಧ್ಯಾಪಕ ರಮೇಶ್‌ ಬಿಳಿಕೆರೆ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next