Advertisement

ರೈತರ ಕೈ ಸಾಲಕ್ಕೂ ಪರಿಹಾರ: ಸಿಎಂ

12:02 PM May 21, 2017 | Team Udayavani |

ಮೈಸೂರು: ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಎಲ್ಲಾ ರೈತ ಕುಟುಂಬಗಳಿಗೂ 5 ಲಕ್ಷ ರೂ. ಪರಿಹಾರ, ಉಚಿತ ವೈದ್ಯಕೀಯ ಸೇವೆ ಹಾಗೂ ಅವರ ಮಕ್ಕಳಿಗೆ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣ ನೀಡಬೇಕು. ವಸತಿ ಶಾಲೆಗಳಲ್ಲಿ ನೇರವಾಗಿ ಪ್ರವೇಶ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದ ಶನಿವಾರ ಸರ್ಕಾರಿ ಅತಿಥಿ ಗೃಹದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ರೈತರು ಬ್ಯಾಂಕು, ಸೊಸೈಟಿಗಳಲ್ಲಿ ಮಾತ್ರವಲ್ಲ, ಕೈಸಾಲ ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರೂ ಪರಿಹಾರಕ್ಕೆ ಪರಿಗಣಿಸುವಂತೆ ತಿಳಿಸಿದರು. ಜಿಲ್ಲೆಯ 31 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲೇಬೇಕೆಂದು ಸೂಚಿಸಿದರು.

9 ವಾರ್ಡ್‌ಗಳಿಗೆ ನೀರಿನ ಸಮಸ್ಯೆ ನಿವಾರಿಸಲು ಜೆಸ್ಕೊ ಕೆಲಸ ಪೂರ್ತಿ ಆಗಿಲ್ಲ.  ನರ್ಮ್ ಯೋಜನೆಯಡಿ 2ನೇ ಹಂತದ ಕೆಲಸ ನಡೆಯುತ್ತಿದೆ. ಇನ್ನು 10 ತಿಂಗಳಲ್ಲಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಎಂದು ತಿಳಿಸಿದರು. ನಿತ್ಯ ನೀರು ಪೂರೈಸಲು ಅಗತ್ಯ ಯೋಜನೆಗೆ ಹಣ ಒದಗಿಸುವುದಾಗಿ ತಿಳಿಸಿದರು. ರಮಾಬಾಯಿನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಕೊಡಲು ಯೋಜನೆ ತಯಾರಿಸಿ ಎಂದು ಮುಡಾ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಈ ವರೆಗೆ 80,646 ರೈತರ ಬ್ಯಾಂಕ್‌ ಖಾತೆಗೆ ಪರಿಹಾರ ಜಮಾ ಮಾಡಲಾಗಿದೆ. ಮೇ ಅಂತ್ಯದೊಳಗೆ ಎಲ್ಲ ರೈತರ ಖಾತೆಗೆ ಆಧಾರ್‌ ಸೀಡಿಂಗ್‌ ಮಾಡಿ ಪರಿಹಾರ ವಿತರಿಸಲಾಗುವುದು. ಮುಂಗಾರು ಹಂಗಾಮಿಗೆ 33.72 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಎಚ್‌ಡಿಕೆ ಬೇಜವಾಬ್ದಾರಿ ಹೇಳಿಕೆ
ಉತ್ತರಪ್ರದೇಶದಲ್ಲಿ ಸಾವಿಗೀಡಾದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತ ಅನುರಾಗ್‌ ತಿವಾರಿ ವಿಚಾರದಲ್ಲಿ ಯಾವುದೇ ತನಿಖೆಗೂ ತಮ್ಮ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಈ ಕುರಿತು ಉತ್ತರಪ್ರದೇಶ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಹೀಗಿರುವಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕಾಂಗ್ರೆಸ್‌ ಸರ್ಕಾರಕ್ಕೆ ಅಧಿಕಾರಿಗಳನ್ನು ಕೊಲ್ಲುವುದೇ ಕೆಲಸವಾಗಿದೆ. ಅದನ್ನು ಮುಚ್ಚಿಹಾಕಲು ಒಬ್ಬ ನಿವೃತ್ತ ಐಪಿಎಸ್‌ ಅಧಿಕಾರಿ ಇಟ್ಟುಕೊಂಡಿದ್ದಾರೆಂದು ಹೇಳಿರುವುದು ಅತ್ಯಂತ ಬೇಜವಾಬ್ದಾರಿ ಹೇಳಿಕೆ. ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ತಿವಾರಿ ಅವರು ಸಾವಿಗೀಡಾಗಿದ್ದಾರೆ ಎಂಬ ಹೇಳಿಕೆ ನಿರಾಧಾರ ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧದ ಜಂತಕಲ್‌ ಮೈನಿಂಗ್‌ ಪ್ರಕರಣದ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ. ಯಡಿಯೂರಪ್ಪ ಮೇಲೆ 29 ಎಫ್ಐಆರ್‌ಗಳಿವೆ. ಲೋಕಾಯುಕ್ತರ ಮುಂದೆ ಇನ್ನೂ ದಾಖಲಾಗದ ಕೇಸುಗಳಿವೆ. ನಾನು ಸೇಡಿನ ರಾಜಕೀಯ ಮಾಡುವುದಿಲ್ಲ ಎಂದರು. 

ಇನ್ನೊಂದೇ ಚುನಾವಣೆ: ಚುನಾವಣಾ ರಾಜಕಾರಣ ಸಾಕಾಗಿದೆ. ಇನ್ನೊಂದು ಚುನಾವಣೆಗೆ ಮಾತ್ರ ನಿಲ್ಲುತ್ತೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದು ಬಿಟ್ಟರೆ ಬೇರೆ ಆಸೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡಿಗರ ರಕ್ಷಣೆ: ಬದ್ರಿನಾಥದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ರಕ್ಷಣೆ, ಸೌಲಭ್ಯ, ಸೌಕರ್ಯಗಳನ್ನು ನೀಡುವಂತೆ ದೆಹಲಿಯಲ್ಲಿನ ಕರ್ನಾಟಕದ ಅಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next