ರಾಧೆಯನ್ನು ಬೇರೆ ರೀತಿಯಲ್ಲಿ ಎಂದೂ ಕಲ್ಪಿಸುವುದೂ ಸಾಧ್ಯವಿರಲಿಲ್ಲ. ಆದರೆ ಇಂತಹ ಕಲ್ಪನೆಯನ್ನೂ
ಮೀರಿ ಹೀಗೂ ಇರಬಹುದು ರಾಧೆ ಅನ್ನುವ ಮತ್ತೂಂದು ದಾರಿಯನ್ನು ನಮಗೆ ತೋರಿಸಿದ್ದು ಮಂಜುಳಾ ಸುಬ್ರಹ್ಮಣ್ಯ ಅಭಿನಯಿಸಿದ “ರಾಧಾ’ ಎಂಬ ಏಕವ್ಯಕ್ತಿ ಪ್ರದರ್ಶನ.
ರಾಧೆಯೆಂದರೆ ಉತ್ಕಟ ಪ್ರೇಮಿ, ಚಿರ ವಿರಹಿನಿ , ಅಪೂರ್ವ ಸೌಂದರ್ಯದ ಖನಿ. ಇದ್ದರೆ ರಾಧೆಯಂತಹ ಪ್ರೇಯಸಿ ಇರಬೇಕು ಅನ್ನುವ ಹರೆಯದ ಹುಡುಗರ ಬಯಕೆಯಾಗಿ… ರಾಧೆಯೆಂದರೆ, ಈ ಕಣ್ಣಾ ತುಟಿ ಈ ನಗೆ ಆ ನಡೆ ಈ ಕೊಂಕೆಲ್ಲವ ಪಡೆದವಳು – ಅಹ ಎಂತೋ ಎನ್ನೆದೆ ತಡೆದವಳು! ಇಂತಹ ತುಂಬು ಹರೆಯದ ರಾಧೆಯನ್ನು ಬೇರೆ ರೀತಿಯಲ್ಲಿ ಎಂದೂ ಕಲ್ಪಿಸುವುದೂ ಸಾಧ್ಯವಿರಲಿಲ್ಲ.ಆದರೆ ಇಂತಹ ಕಲ್ಪನೆಯನ್ನೂ ಮೀರಿ ಹೀಗೂ ಇರಬಹುದು ರಾಧೆ ಅನ್ನುವ ಮತ್ತೂಂದು ದಾರಿಯನ್ನು ನಮಗೆ ತೋರಿಸಿದ್ದು ಮಂಜುಳಾ ಸುಬ್ರಹ್ಮಣ್ಯ ಅಭಿನಯಿಸಿದ “ರಾಧಾ’ ಎಂಬ ಏಕವ್ಯಕ್ತಿ ಪ್ರದರ್ಶನ.
ಇತ್ತೀಚೆಗೆ ಅರೆಹೊಳೆ ಪ್ರತಿಷ್ಠಾನ ಮತ್ತು ನಾಟ್ಯರಂಗ ಪುತ್ತೂರು ಜಂಟಿಯಾಗಿ ಮಂಗಳೂರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸುಧಾ ಆಡುಕಳ ರಚಿಸಿದ ರಾಧಾಳ ಅಂತರಂಗ ತೆರೆದಿಡುವ ಈ ಕತೆ ರಾಧಾಳ ವ್ಯಕ್ತಿತ್ವದ ವಿವಿಧ ಮಗ್ಗುಲುಗಳನ್ನು ಶೋಧಿಸಿತು. ರಂಗದ ಮೇಲೆ ಬೆಳಕು ಮೂಡುತ್ತಿರುವಂತೆಯೇ ಹೆಗಲ ಮೇಲೊಂದು ರಗ್ಗು ಹೊದ್ದುಕೊಂಡು ಮೆಲ್ಲಮೆಲ್ಲನೇ ನಡೆದುಕೊಂಡು ಬಂದ ರಾಧೆಗೆ ವಯಸ್ಸಾಗಿದೆ. ಕೃಷ್ಣ ತೊರೆದ ಗೋಕುಲದಲ್ಲಿಯೇ ಇದ್ದು ತನ್ನ ಬದುಕನ್ನು ಕಟ್ಟಿಕೊಂಡ ರಾಧೆ ತನ್ನ ಅಂತರಂಗವನ್ನು ನಮ್ಮ ಮುಂದೆ ಎಳೆಎಳೆಯಾಗಿ ಬಿಚ್ಚಿಡುತ್ತಾಳೆ.ತನ್ನ ನೆನಪುಗಳ ಸರಮಾಲೆಯನ್ನು ಬಿಚ್ಚುತ್ತಾ ಹಿಂದಕ್ಕೋಗುವ ರಾಧೆ ತಾನು ಗೋಕುಲಕ್ಕೆ ಮೊದಲ ಬಾರಿಗೆ ಬಂದ ಕತೆಯಿಂದ ಆರಂಭ ಮಾಡುತ್ತಾಳೆ.ರಗ್ಗು ಹೊದ್ದುಕೊಂಡು ರಂಗಕ್ಕೆ ಬಂದ ರಾಧೆ ಕತೆ ಆರಂಭವಾಗುವಾಗ ಚಂಚಲ ಕಣ್ಣುಗಳ ಚಿಗರೆ ಚುರುಕಿನ ಪಾದರಸದ ಹುಡುಗಿಯಾಗಿ ಬದಲಾಗುತ್ತಾಳೆ. ಮಂಜುಳಾ ಹುಡುಗಾಟದ ನಡೆನುಡಿ, ಹಾವ ಭಾವಗಳಿಂದ ರಾಧೆಯಾಗಿ ಇಷ್ಟವಾಗುತ್ತಾರೆ.ಅಜ್ಜಿ ಹೇಳುವ ಕೃಷ್ಣನ ಪರಾಕ್ರಮಗಳನ್ನೆಲ್ಲಾ ಛೇಡಿಸುವ ರಾಧೆ ಒರಳುಗಲ್ಲಿಗೆ ತಾಯಿ ಕಟ್ಟಿದ ಬಂಧನವನ್ನು ಬಿಡಿಸಿಕೊಳ್ಳಲಾಗದವ ಪರಾಕ್ರಮಿ ಹೇಗಾದಾನು? ಸುಳ್ಳೇ ಜನರು ಹಬ್ಬಿಸುವ ವದಂತಿಗಳು ಅಂದಾಗ ಅಜ್ಜಿ, ರಾಧಾ, ಕಟ್ಟಿದ್ದು ಯಾರು ಅನ್ನುವುದರ ಮೇಲೆ ನಿಂತಿರುತ್ತದೆ ಅದರ ಬಲ… ಅನ್ನುವಾಗ ಲೇಖಕಿಯ ಬರಹದ ಶಕ್ತಿ ಗೊತ್ತಾಗುತ್ತದೆ.
ಪ್ರೇಕ್ಷಕರ ಮುಂದೆ ಬೃಂದಾವನ ಮೆಲ್ಲನೇ ತೆರೆದುಕೊಳ್ಳುವುದು ರಾಧಾ – ಶ್ಯಾಮನ ಮೊದಲ ಭೇಟಿಯೊಂದಿಗೆ. ಶ್ಯಾಮನ ಬಿಸಿಯುಸಿರು,ಆನಂದ ಸೂಸುವ ಆ ಮೋಹಕ ಶ್ಯಾಮಲ ರೂಪದಲ್ಲಿ ರಾಧೆ ತನ್ನನ್ನು ತಾನು ಕಳೆದುಕೊಳ್ಳುತ್ತಾಳೆ. ಮಂಜುಳಾ ನೃತ್ಯಕ್ಕಿದ್ದ ವಿಪುಲ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಮೊದಲ ಸ್ಪರ್ಶದ ಪುಳಕ,ಬಿಸಿಯುಸಿರಿನ ನಡುಕ,ಪಿಸುಮಾತುಗಳ ಮಿಡಿತದ ರಾಧೆಯ ರೋಮಾಂಚನವನ್ನೆಲ್ಲಾ ಅನುಭವಿಸುತ್ತಾ ನೃತ್ಯಾಭಿನಯದ ಹೊಸ ಹೊಸ ಸಾಧ್ಯತೆಗಳನ್ನೆಲ್ಲಾ ಪರಿಶೋಧಿಸಿದ್ದಾರೆ.ಶ್ಯಾಮನ ನವಿರು ಸ್ಪರ್ಶಕ್ಕೂ ಅವನೊಡನೆಯ ಸಂವಾದಕ್ಕೂ ನವಿಲುಗರಿಯನ್ನು ರಂಗದಲ್ಲಿ ಬಳಸಿಕೊಂಡದ್ದು ಸೃಜನಶೀಲತೆಯ ನಿರ್ದೇಶನಕ್ಕೊಂದು ಕನ್ನಡಿ ಹಿಡಿದಂತೆ ಬಹಳ ಪರಿಣಾಮಕಾರಿಯಾಗಿದೆ.
ಈ ಸುತ್ತಾಟದ ಸುದ್ದಿ ತಿಳಿದ ನಂತರ ರಾಧೆಗೆ ಚಿಕ್ಕಮ್ಮ ಹಾಕಿದ ನಿರ್ಬಂಧ,ಆಯನನೊಂದಿಗೆ ಮದುವೆಯ ಮಾತುಕತೆ,ಹೊರಗೆ ಕರೆದೊಯ್ಯಲು ಶ್ಯಾಮನ ಉಪಾಯ ಹೀಗೆ ಕತೆ ಮುಂದೆ ಸಾಗುವಾಗ ಬರುವ ಪಾತ್ರಗಳು ಹಲವಾರು.ನಿಜವಾಗಿಯೂ ರಂಗದಲ್ಲಿ ಹಲವಾರು ಪಾತ್ರಗಳು ಏಕ ಕಾಲದಲ್ಲಿ ಅಭಿನಯಿಸುತ್ತಿವೆ ಅನ್ನಿಸುವಷ್ಟರ ಮಟ್ಟಿಗೆ ಮಂಜುಳಾ ಅನೇಕ ಪಾತ್ರಗಳ ವಿವಿಧ ಭಾವಗಳಲ್ಲಿ ಅದ್ಭುತವಾಗಿ ಸಂಚಾರ ಮಾಡಿದ್ದಾರೆ.ಏಕಪಾತ್ರಾಭಿನಯದ ಏಕತಾನತೆ ಕಾಡದಂತೆ ನೋಡಿಕೊಂಡಿದ್ದಾರೆ.ಇಲ್ಲಿಯ ತನಕದ ರಾಧೆ ಶ್ಯಾಮನ ಪ್ರೇಮದಲ್ಲಿ ಮುಳುಗಿದ ಹೆಣ್ಣಾಗಿ, ನಾವು ನೋಡಿದ ರಾಧೆಯಾಗಿ ಕಂಡರೆ ನಂತರದಲ್ಲಿ ಲೇಖಕಿ ಕಂಡ ರಾಧೆ ಪ್ರತಿಕೂಲ ಪರಿಸ್ಥಿತಿಯಿಂದ ಹೊರಬಂದು ತನ್ನನ್ನು ತಾನು ನಿಭಾಯಿಸಿಕೊಂಡ ಸ್ತ್ರೀ ಸ್ವಾತಂತ್ರ್ಯದ ಪ್ರತೀಕವಾಗಿ ಕಾಣುತ್ತಾಳೆ.
ಕೃಷ್ಣನಿಂದ ಆಗಬೇಕಾದ ರಾಜಕಾರ್ಯದ ಬಗ್ಗೆ ಸುಳಿವು ಕೊಡುವ ಮತ್ತು ನಿನ್ನ ಪ್ರೀತಿ ಈ ಘನ ಕಾರ್ಯಕ್ಕೆ ಅಡ್ಡಿಯಾಗಿರುವ ವಿಷಯವನ್ನು ರಾಧೆಗೆ ಯಶೋಧೆ ನಂದಗೋಕುಲಕ್ಕೆ ಕರೆಸಿ ಹೇಳಿ,ಪ್ರೀತಿಯಲ್ಲಿ ತ್ಯಾಗದ ಮಹತ್ವವನ್ನು ಒತ್ತಿ ಹೇಳುತ್ತಾಳೆ ಮತ್ತು ಆಯನನನ್ನು ಮದುವೆಯಾಗುವ ಸಲಹೆ ನೀಡುತ್ತಾಳೆ.ಅಲ್ಲಿಗೆ ಕೃಷ್ಣನ ಗೋಕುಲ ನಿರ್ಗಮನವಾಗುತ್ತದೆ ರಾಧೆಯನ್ನು ವಿರಹದ ಮಡುವಲ್ಲಿ ಬಿಟ್ಟು.ನಮ್ಮ ಕಲ್ಪನೆಯ ರಾಧೆ ಇಲ್ಲಿಗೇ ನಿಲ್ಲುತ್ತಾಳೆ.
ಲೇಖಕಿ ಈ ರಾಧೆಯನ್ನು ಬೆಳೆಸಿ ಆಕೆಗೊಂದು ಸ್ವತಂತ್ರ ವ್ಯಕ್ತಿತ್ವವನ್ನು ಕಲ್ಪಿಸಿ ಒಂಟಿಯಾಗಿಯೇ ಯಮುನೆಯ ದಡದಲ್ಲಿ ಬದುಕನ್ನು ಕಟ್ಟಿಕೊಳ್ಳುವ ನಿರ್ಧಾರವನ್ನು ಪ್ರಕಟಿಸುವ ಮೂಲಕ ಸ್ತ್ರೀ ಪರ ದನಿಯಾಗಿಸುತ್ತಾರೆ.ಮುಂದೆ ಅಪ್ಪ ಬಂದು ಕರೆದರೂ ಇದೇ ನನ್ನ ಬದುಕಿನ ಹಾದಿ ಮತ್ತು ನನಗಿದರಲ್ಲಿ ಸಂತೋಷವಿದೆ ಅನ್ನುವ ಮೂಲಕ ಮನೆಗೆ ಹಿಂದಿರುಗದೇ ತನ್ನ ಒಳದನಿಯ ಪರವಾಗಿ ನಿಲ್ಲತ್ತಾಳೆ.ಇದೇ ನಿನ್ನ ಕೊನೆಯ ನಿರ್ಧಾರವೇ ರಾಧಾ… ಎಂದು ಅಪ್ಪ ಕೇಳುವಾಗ, ಸದ್ಯಕ್ಕೆ ಇದು ನನ್ನ ನಿರ್ಧಾರ, ಮುಂದೆ ಬದಲಾದರೂ ಬದಲಾಗಬಹುದು… ಅನ್ನುವುದರ ಮೂಲಕ ಕಾಲಕ್ಕೆ ಸರಿಯಾಗಿ ಹೆಣ್ಣು ಉಚಿತವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲಳು ಅನ್ನುವುದನ್ನು ಸೂಚ್ಯವಾಗಿ ತೋರಿಸಿಕೊಟ್ಟಿದ್ದಾರೆ ಲೇಖಕಿ.
ಉತ್ತಮ ಪಾತ್ರ ಪೋಷಣೆ,ಚುರುಕಿನ ಸಂಭಾಷಣೆಗಳ ಮೂಲಕ ರಾಧೆ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.ಸಂಭಾಷಣೆಗೆ ಹಿನ್ನಲೆಯಲ್ಲಿ ಭಾವಕ್ಕೊಪ್ಪುವ ಆಲಾಪ ಅಥವಾ ಕೊಳಲಿನ ನಾದವು ನಿರಂತರವಾಗಿರುತ್ತಿದ್ದರೆ ಈ ಮಾತುಗಳ ಪ್ರಭಾವ ಇನ್ನೂ ಉತ್ಕಟವಾಗಿರುತ್ತಿತ್ತು.ಆದರೆ ಈ ಕೊರತೆಯನ್ನು ಮಂಜುಳಾರ ಅಭಿನಯ, ನೃತ್ಯ, ಭಾವ ತುಂಬಿದ ಸಂಭಾಷಣೆ ತುಂಬಿಕೊಟ್ಟಿದೆ.ಬೇರೆ ಬೇರೆ ಭಾವಕ್ಕನುಗುಣವಾಗಿ ಮೂಡಿಬಂದ ಹಾಡುಗಳು ಸಂದರ್ಭಕ್ಕನುಗುಣವಾಗಿದ್ದವು ಮತ್ತು ನೃತ್ಯಕ್ಕೆ ವೇದಿಕೆಯನ್ನು ಒದಗಿಸುವಲ್ಲಿ ಪೂರಕವಾಗಿದ್ದವು.ಈ ರಾಧೆಯನ್ನು ನಿರ್ದೇಶನ ಮಾಡಿದ ಶ್ರೀಪಾದ ಭಟ್ ಲೇಖಕಿಯ ಡೈರಿಯ ಈ ಪುಟಗಳನ್ನು ರಂಗಕ್ಕಿಳಿಸುವಲ್ಲಿ ಗೆದ್ದಿದ್ದಾರೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು