Advertisement

ಚುನಾವಣೆ ಬಂದಾಗ ಸಿಎಂ ಗಡಿನಾಡ ಕನ್ನಡಿಗರ ಸ್ಮರಣೆ

06:40 PM Oct 19, 2019 | Team Udayavani |

ಸೊಲ್ಲಾಪುರ: ಚುನಾವಣೆ ಬಂದಾಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಗಡಿನಾಡ ಕನ್ನಡಿಗರ ಸಮಸ್ಯೆ ನೆನಪಾಗಿ ಇದೀಗ ಅವರ ಸ್ಮರಣೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಗಡಿನಾಡ ಕನ್ನಡಿಗರ ಅಭಿವೃದ್ಧಿಗೆ ಮಾಡಿರುವ ಕೆಲಸಗಳನ್ನು ಹಾಗೂ ರೂಪಿಸಿದ ಯೋಜನೆಗಳಿಗೆ ತಮ್ಮ ಲೇಬಲ್‌ ಅಂಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆ ಮೂಲಕ ಗಡಿನಾಡ ಕನ್ನಡಿಗರ ದಿಕ್ಕು ತಪ್ಪಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ವಾಗ್ಧಾಳಿ ನಡೆಸಿದರು.

Advertisement

ಶುಕ್ರವಾರ ಮಹಾರಾಷ್ಟ್ರದ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಸೊಲ್ಲಾಪುರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಈಗ ಗಡಿನಾಡ ಕನ್ನಡಿಗರ ಸಮಸ್ಯೆ ಕಂಡಿದೆ. ಕೊಟ್ಟಲಗಿ ಕೆರೆ ತುಂಬಿಸಿ ಅಲ್ಲಿಂದ 1 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಆದರೆ ಯೋಜನೆಯ ತಳಬುಡ ಗೊತ್ತಿಲ್ಲದೇ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಪಾಪ ಯಡಿಯೂರಪ್ಪ ಅವರು ಯಾರೋ ಬರೆದುಕೊಟ್ಟುದನ್ನು ಓದಿದ್ದಾರೆ ಎಂದು ಗೇಲಿ ಮಾಡಿದರು.

ತುಬಚಿ-ಬಬಲೇಶ್ವರ ಯೋಜನೆ ನನ್ನ ಕನಸಿನ ಕೂಸು. ಈ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ್ದು ನಾನು ಎಂಬುದು ಗಡಿಭಾಗದ ಜನತೆ ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ಗೊತ್ತಿದೆ. ಆದರೆ ಈ ಯೋಜನೆಯ ಮೂಲಕ ನೀರು ಹರಿಸುವುದಾಗಿ ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಎಷ್ಟು ಸರಿಯಲ್ಲ. ಗಡಿಭಾಗದ ಕನ್ನಡಿಗರಿಗೆ ನೀರು ಕೊಡುವುದು ನಮ್ಮ ಧರ್ಮ ಎಂದರು.

ಗಡಿಭಾಗದ ಜನತೆ ಅನೇಕ ತೊಂದರೆ ಎದುರಿಸುತ್ತಿದ್ದಾರೆ. ಭೀಕರ ಬರಗಾಲವೂ
ಅಲ್ಲಿ ಬಾಧಿಸುತ್ತಿದೆ. ಅದರಿಂದ ಬೇಸತ್ತಿದ್ದ ಗಡಿ ಗ್ರಾಮಗಳ ಜನತೆ ತಮ್ಮನ್ನು ಕರ್ನಾಟಕ ಭಾಗಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಹೋರಾಟ ಮಾಡಿದ್ದರು. ಆದರೆ ಆಗ ಈ ಗಡಿ ಗ್ರಾಮಗಳ ಜನತೆಯ ಸಮಸ್ಯೆ ಯಡಿಯೂರಪ್ಪ ಅವರಿಗೆ
ಬೇಕಾಗಿರಲಿಲ್ಲ. ಈಗ ಚುನಾವಣೆ ಬಂದಾಗ ಯಾವುದೋ ಒಂದು ಹೇಳಿಕೆ ನೀಡಿ ರಾಜಕೀಯ ಗಿಮಿಕ್‌ ಮಾಡಲು ಮುಂದಾಗಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಆದರೆ ನಾನು ಚುನಾವಣೆ ಬಂದಾಗ ಗಿಮಿಕ್‌ ಮಾಡಿಲ್ಲ, ಈ ಹಿಂದೆಯೇ ಗಡಿನಾಡ ಕನ್ನಡದ ಗ್ರಾಮಗಳ ಜನತೆಗೆ ಕುಡಿಯುವ ನೀರು ಪೂರೈಕೆಯಾಗುವ ದೃಷ್ಟಿಯಿಂದ ಸಂಖ ಸೇರಿದಂತೆ ನಾಲ್ಕು ಕೆರೆಗಳಿಗೆ ನೀರು ತುಂಬಿಸಿದ್ದು, ಕೊಟ್ಟಲಗಿ ಕೆರೆ ಇನ್ನೂ ತುಂಬಿಲ್ಲ. ಆಗಲೇ ಮುಖ್ಯಮಂತ್ರಿ ಯಡಿಯೂರಪ್ಪ
ಕೊಟ್ಟಲಗಿ ಕೆರೆಯಿಂದ ನೀರು ಹರಿಸುವುದಾಗಿ ಜವಾಬ್ದಾರಿ ರಹಿತವಾಗಿ ಹೇಳಿಕೆ ನೀಡಿದ್ದಾರೆ.

Advertisement

ವಾಸ್ತವವಾಗಿ ಕೊಟ್ಟಲಗಿ ಕೆರೆಗೆ ಸಂಬಂಧಿಸಿದ ಭೂ-ಸ್ವಾಧೀನ ಪ್ರಕ್ರೀಯೆ ಪೂರ್ಣಗೊಂಡಿಲ್ಲ. ರೈತರಿಗೆ ಇನ್ನೂ ಪರಿಹಾರ ದೊರಕಿಲ್ಲ. ಈ ತಾಂತ್ರಿಕ ಸಮಸ್ಯೆಗಳ ನಿವಾರಣೆಗಾಗಿ ನಾನು ಶ್ರಮಿಸುತ್ತಿದ್ದೇನೆ ಎಂದು ವಿವರಿಸಿದರು. ಗಡಿನಾಡ ಗ್ರಾಮಗಳ ಕನ್ನಡಿಗರು ಕೂಡ ನಮ್ಮವರೇ, ಅವರಿಗೆ ಅಗತ್ಯ ಪ್ರಮಾಣದ ನೀರಿನ ಸೌಲಭ್ಯ ಕಲ್ಪಿಸಬೇಕಿರುವುದು ನಮ್ಮ ಕರ್ತವ್ಯಕ್ಕಿಂತ ಮಾನವೀಯತೆ ಧರ್ಮ‌. ಆದರೆ ಈ ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಟೀಕಿಸಿದರು.

ತುಬಚಿ ಬಬಲೇಶ್ವರ ಯೋಜನೆ ನನ್ನ ಕನಸಿನ ಯೋಜನೆ. ಈ ಯೋಜನೆಯಡಿ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಭಾಗದ ಸುಮಾರು 1.55 ಲಕ್ಷ
ಎಕರೆಗೂ ಹೆಚ್ಚು ಜಮೀನಗಳು ನೀರಾವರಿ ಸೌಲಭ್ಯಕ್ಕೊಳಪಡಲಿವೆ. 3600 ಕೋಟಿ ರೂ. ಯೋಜನಾ ವೆಚ್ಚದ ಈ ಯೋಜನೆ ಅಡಿಯಲ್ಲಿ ತಿಕೋಟಾ ಸುತ್ತಮುತ್ತ 96 ಸಾವಿರ ಎಕರೆ ಭೂಮಿ, ಜಮಖಂಡಿ ಸಾವಳಗಿ ಭಾಗದ 27
ಸಾವಿರ ಎಕರೆ ಹಾಗೂ ಅಥಣಿ ಭಾಗದ 8 ಸಾವಿರ ಎಕರೆ ಭೂಮಿ ನೀರಾವರಿ ಸೌಲಭ್ಯ ಪಡೆಯಲಿದೆ. ಈ ಯೋಜನೆ ರೂಪಿಸಿದ್ದೂ ನಾವೇ, ಈ ಯೋಜನೆ ಅನುಷ್ಠಾನಗೊಳಿಸಿದ್ದೂ ನಾವೇ ಸ್ಪಷ್ಟೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next