Advertisement
ವಿಠ್ಠಲನ ಪ್ರಮುಖ ಉತ್ಸವಗಳು ಹಿಂದೂ ಚಾಂದ್ರಮಾನ ಮಾಸದ ಏಕಾದಶಿಯಂದು ನಡೆಯುತ್ತದೆ. ಆಷಾಢ ಮಾಸದಲ್ಲಿ ಶಯನೀ ಏಕಾದಶಿ ಮತ್ತು ಕಾರ್ತಿಕ ಮಾಸದಲ್ಲಿ ಪ್ರಬೋನಿ ಏಕಾದಶಿ ಹೀಗೆ ಇವೆರಡು ಏಕಾದಶಿಗಳಲ್ಲಿ ಹೆಚ್ಚಿನ ಭಕ್ತರು ಪಂಢರಪುರಕ್ಕೆ ಆಗಮಿಸುತ್ತಾರೆ.
Related Articles
Advertisement
ಬಡ್ವಾ ವಂಶದ ಬ್ರಾಹ್ಮಣ ಅರ್ಚಕರಿಂದ ದೇವಸ್ಥಾನದ ಒಳಗೆ ವಾರಕರಿಯರಿಂದ ಅಮೂರ್ತ ಆರಾಧನೆ, ವಿಧಿವತ್ತಾದ ಪೂಜೆಯು ಐದು ದಿನಗಳ ಕಾಲ ನಡೆಯುತ್ತದೆ. ಮೊದಲಿಗೆ ಬೆಳಗ್ಗೆ 3:00 ಗಂಟೆಗೆ ದೇವರನ್ನು ಎಬ್ಬಿಸುವ ಕಾಕಡಾರತಿ ಮಾಡಲಾಗುತ್ತದೆ. ನಂತರ ಪಂಚಾಮೃತ ಸ್ನಾನ ನಡೆಯುತ್ತದೆ. ತದನಂತರ ವಿಗ್ರಹಕ್ಕೆ ಉಡುಪು ತೊಡಿಸಲಾಗುತ್ತದೆ.
ಮೂರನೇ ವಿಧಿಯು ಮತ್ತೂಮ್ಮೆ ಉಡುಪು ತೊಡಿಸುವ ಮತ್ತು ಮಧ್ಯಾಹ್ನದ ಭೋಜನ ಒಳಗೊಳ್ಳುವ ಇನ್ನೊಂದು ಪೂಜೆ ನಡೆಯುತ್ತದೆ. ನಂತರ ನಾಲ್ಕನೇ ವಿಧಿಯಾದ ಸೂರ್ಯಾಸ್ತದ ಭೋಜನಕ್ಕಾಗಿ ‘ಅಪರಾಹ್ನ ಪೂಜೆ’, ತದನಂತರ ಕೊನೆ ವಿಧಿಯಾದ ಶೆರಾರತಿ ನಡೆಯುತ್ತದೆ. ಪಂಢರಪುರದ ಮುಖ್ಯ ದೇವಸ್ಥಾನದಲ್ಲಿನ ವಿಧಿಗಳ ಜೊತೆಗೆ ವಿಠ್ಠಲನಿಗೆ ಸಮರ್ಪಿತವಾದ ಹರಿದಾಸ ಸಂಪ್ರದಾಯಗಳು ಕರ್ನಾಟಕದಲ್ಲಿ ಪ್ರವರ್ಧಮಾನವಾಗಿವೆ.
ವಿಠ್ಠಲನಿಗೆ ಸಂಬಂಧಿಸಿರುವ ಉತ್ಸವಗಳು ಮುಖ್ಯವಾಗಿ ವಾರಕರಿಯರ ಅರ್ಧವಾರ್ಷಿಕ ಯಾತ್ರೆಗಳಿಗೆ ಸರಿಹೊಂದುತ್ತವೆ. ಅನುಕ್ರಮವಾಗಿ ಕವಿ-ಸಂತ ಜ್ಞಾನೇಶ್ವರ ಮತ್ತು ತುಕಾರಾಮರಿಗೆ ನಿಕಟವಾಗಿ ಸಂಬಂಧಿಸಿರುವ ಪಟ್ಟಣಗಳಾದ ಆಳಂದಿ ಮತ್ತು ದೇಹೂದಿಂದ ಪಂಢರಪುರ ದೇವಸ್ಥಾನಕ್ಕೆ ಯಾತ್ರಿಕರು ಪ್ರಯಾಣ ಮಾಡುತ್ತಾರೆ. ದಾರಿಯುದ್ದಕ್ಕೂ ಕವಿ-ಸಂತರ ಪಲ್ಲಕ್ಕಿ ಒಯ್ಯುತ್ತಲೇ ಅವರು ವಿಠ್ಠಲನಿಗೆ ಸಮರ್ಪಿಸಿದ ಅಭಂಗಗಳನ್ನು ಹಾಡುತ್ತಾರೆ. ವಿಠ್ಠಲನ ನಾಮಸ್ಮರಣೆಯಲ್ಲಿ ಮಗ್ನರಾಗಿರುತ್ತಾರೆ. ಆಷಾಢ ಏಕಾದಶಿ ಯಾತ್ರೆಗೆ ವಾರಕರಿಗಳು ದೊಡ್ಡ ಸಂಖ್ಯೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಹರಿದಾಸ ಪಂಥಹರಿದಾಸ ಹರಿಯ ದಾಸವೆಂಬ ಅರ್ಥ ಸೂಚಿಸುತ್ತದೆ. ಹರಿದಾಸ ಸಂಪ್ರದಾಯದ ಪ್ರಕಾರ ಹರಿದಾಸ-ಕೂಟ ಎಂದು ಪರಿಚಿತವಾಗಿರುವ ಅವರ ಸಂಪ್ರದಾಯವು ಅಚಲಾನಂದ ವಿಠ್ಠಲರಿಂದ ಪ್ರಾರಂಭಿಸಲಾಯಿತು. ವಾರಕರಿಯರನ್ನು ಮಹಾರಾಷ್ಟ್ರದೊಂದಿಗೆ ಸಂಬಂಧ ಕಲ್ಪಿಸಿದರೇ, ಹರಿದಾಸರನ್ನು ಸಾಮಾನ್ಯವಾಗಿ ಕರ್ನಾಟಕದೊಂದಿಗೆ ಸಂಬಂಧ ಕಲ್ಪಿಸಲಾಗುತ್ತದೆ. ವಿಠ್ಠಲನ ಆರಾಧನೆಯು ಮೊದಲು ಕರ್ನಾಟಕದಲ್ಲಿ ಕಾಣಿಸಿಕೊಂಡಿತ್ತು. ನಂತರವೇ ಮಹಾರಾಷ್ಟ್ರಕ್ಕೆ ಸ್ಥಳಾಂತರವಾಯಿತು ಎಂದು ಹೇಳಲಾಗುತ್ತದೆ. ಹರಿದಾಸರು ಪಂಢರಪುರ ಮತ್ತು ಹಂಪಿ ದೇವಸ್ಥಾನವನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಅಲ್ಲದೇ ವಿಠ್ಠಲನನ್ನು ಕೃಷ್ಣನ ಸ್ವರೂಪದೊಂದಿಗೆ ಆರಾಧಿಸುತ್ತಾರೆ. 10 ಲಕ್ಷ ವಾರಕರಿಗಳ ಆಗಮನ
ಪಂಢರಪುರ ಜಾತ್ರಾ ಮಹೋತ್ಸವಕ್ಕೆ ಕಳೆದ 15 ದಿನಗಳ ಹಿಂದೆ ಆಳಂದಿಯಿಂದ ಹೊರಟ್ಟಿದ್ದ ಸಂತ ಜ್ಞಾನೇಶ್ವರ ಮಹಾರಾಜ, ಶೇಗಾಂವ ಸಂತ ಗಜಾನನ ಮಹಾರಾಜ ಹಾಗೂ ಸಂತ ತುಕಾರಾಮ ಮಹಾರಾಜರ ಪಲ್ಲಕ್ಕಿ ಪಂಢರಪುರಕ್ಕೆ ಆಗಮಿಸಿತ್ತು. ಪಲ್ಲಕ್ಕಿಯೊಂದಿಗೆ ಲಕ್ಷಾಂತರ ವಾರಕರಿಗಳು ಆಗಮಿಸಿದ್ದರು. ಆಷಾಢ ಏಕಾದಶಿ ನಿಮಿತ್ತ ಪರರಾಜ್ಯಗಳಿಂದ ಬರುವ ಭಕ್ತರಿಗಾಗಿ ವಸತಿಗೃಹ, ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸೇವೆ ಕಲ್ಪಿಸಲಾಗಿದೆ. ಅಲ್ಲದೇ ಭಕ್ತರ ಅನುಕೂಲಕ್ಕಾಗಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಹೆಚ್ಚಿನ ಬಸ್‌ಗಳನ್ನು ಒದಗಿಸಿದೆ. ಮಂದಿರದ ಸುತ್ತ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದುವರೆಗೂ ಸುಮಾರು 10 ಲಕ್ಷಕ್ಕೂ ಹೆಚ್ಚು ವಾರಕರಿಗಳು ಪಂಢರಪುರ ವಿಠ್ಠಲನ ದರ್ಶನಕ್ಕೆ ಆಗಮಿಸಿದ್ದಾರೆ. ವಾರಕರಿ ಪಂಥ
ವಾರಕರಿ ಸಂಪ್ರದಾಯ ಭಾರತದಲ್ಲಿ ಅತ್ಯಂತ ಪ್ರತಿಷ್ಠಿತ ಪಂಥವಾಗಿದೆ. ಇದು ವಿಠ್ಠಲನ ಆರಾಧನೆ ಮೇಲೆ ಕೇಂದ್ರಿಕರಿಸಿದ ಮತ್ತು ಸಾಂಪ್ರದಾಯಿಕ ಭಾಗವತ ಧರ್ಮ ಆಧರಿಸಿದ ಏಕದೇವತಾವಾದಿ ಭಕ್ತಿ ಪಂಥವಾಗಿದೆ. ವಿಠ್ಠಲನನ್ನು ತನ್ನ ಮಾ-ಬಾಪ್ (ತಾಯಿ-ತಂದೆ) ಎಂದು ಮತ್ತು ಪಂಢರಪುರವನ್ನು ತನ್ನ ಮಾಹೇರ್ (ತವರು) ಎಂದು ಪರಿಗಣಿಸುವ ಪ್ರತಿಯೊಬ್ಬನನ್ನು ಜಾತಿಯ ಪ್ರತಿಬಂಧ ಲೆಕ್ಕಿಸದೇ ವಿವಿಧ ಪಂಥದಿಂದ ಒಬ್ಬ ವಾರಕರಿಯೆಂದು ಒಪ್ಪಿಕೊಳ್ಳಲಾಗುತ್ತದೆ. ವಾರಕರಿಗಳು ವಿಠ್ಠಲನಾಮಸ್ಮರಣೆ ಮಾಡುತ್ತಾ ಪ್ರತಿ ಏಕಾದಶಿಯಂದು ಉಪವಾಸ ಆಚರಿಸುತ್ತಾರೆ.