Advertisement

ವಿಠ್ಠಲನ ದರ್ಶನಕ್ಕೆ 12 ಲಕ್ಷ ವಾರಕರಿಗಳು

11:08 AM Jul 13, 2019 | Naveen |

ಸೊಲ್ಲಾಪುರ: ಆಷಾಢ ಏಕಾದಶಿ ಅಂಗವಾಗಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಬಂದಿರುವ ಸುಮಾರು 12 ಲಕ್ಷ ವಾರಕರಿಗಳು (ಭಕ್ತರು) ಶುಕ್ರವಾರ ಪಂಢರಪುರ ವಿಠ್ಠಲನ ದರ್ಶನ ಪಡೆದರು.

Advertisement

ಶುಕ್ರವಾರ ಬೆಳಗ್ಗೆ 2:30 ಗಂಟೆಗೆ ಸರ್ಕಾರಿ ಮಹಾಪೂಜೆಯನ್ನು ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಅಹಮದಪುರ್‌ ಗ್ರಾಮದ ಸುನೆವಾಡಿ ತಾಂಡಾದ ವಿಠ್ಠಲ ಚವ್ಹಾಣ ಹಾಗೂ ಪತ್ನಿ ಪ್ರಯಾಗಾಬಾಯಿ ಚವ್ಹಾಣ ಎನ್ನುವ ವಾರಕರಿಗಳು ನೆರವೇರಿಸಲಿದ್ದಾರೆ. ಸರ್ಕಾರಿ ಪೂಜೆ ನಂತರ ವಿಠ್ಠಲನ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಇಲ್ಲಿನ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡಿದ ವಾರಕಾರಿಗಳು ಸರದಿಯಲ್ಲಿ ನಿಂತು ವಿಠ್ಠಲ.. ವಿಠ್ಠಲ.. ಜಯ ಹರಿ ವಿಠ್ಠಲ ಎಂದು ನಾಮಸ್ಮರಣೆ ಮಾಡುವ ಮೂಲಕ ಭಕ್ತಿ, ಶ್ರದ್ಧೆಯಿಂದ ದರ್ಶನ ಪಡೆದರು. ಪಂಢರಪುರದೆಲ್ಲೆಡೆ ವಿಠ್ಠಲಮಯ ವಾತಾವರಣ ನಿರ್ಮಾಣವಾಗಿತ್ತು. ವಿಶೇಷವಾಗಿ ಲಕ್ಷಾಂತರ ವಾರಕಾರಿಗಳು ಪಾದಯಾತ್ರೆ ಮೂಲಕ ಪಂಢರಪುರಕ್ಕೆ ಆಗಮಿಸಿ ವಿಠ್ಠಲನ ದರ್ಶನ ಪಡೆದರು. ಯಾವುದೇ ಜಾತಿ-ಭೇದವಿಲ್ಲದೇ ವಾರಕರಿಗಳು ಭಜನೆ ಮತ್ತು ನೃತ್ಯದಲ್ಲಿ ಮಗ್ನರಾಗಿದ್ದರು.

ಸುಮಾರು 10 ಕಿಮೀವರೆಗೆ ಭಕ್ತರ ಸಾಲು ನಿಂತಿತ್ತು. ವಿಠ್ಠಲನ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಸಾಲಾಗಿ ನಿಂತ ಭಕ್ತರ ಜೈ ಘೋಷಣೆಗಳು ಮುಗಿಲು ಮುಟ್ಟಿದ್ದವು. ಪಂಢರಪುರ ಜಾತ್ರಾ ಮಹೋತ್ಸವಕ್ಕೆ 15 ದಿನಗಳಿಂದ ಆಳಂದಿಯಿಂದ ಹೊರಟಿದ್ದ ಸಂತ ಜ್ಞಾನೇಶ್ವರ ಮಹಾರಾಜ, ಶೇಗಾಂವ ಸಂತ ಗಜಾನನ ಮಹಾರಾಜ ಹಾಗೂ ಸಂತ ತುಕಾರಾಮ ಮಹಾರಾಜರ ಪಲ್ಲಕ್ಕಿ ಶುಕ್ರವಾರ ಪಂಢರಪುರಕ್ಕೆ ಆಗಮಿಸಿತ್ತು. ಪಲ್ಲಕ್ಕಿಯೊಂದಿಗೆ ಲಕ್ಷಾಂತರ ವಾರಕರಿಗಳು ಕೇಸರಿ ಧ್ವಜ ಹಿಡಿದು ಸಾಲಾಗಿ ಆಗಮಿಸಿದ್ದರು. ಆಷಾಢ ಏಕಾದಶಿ ನಿಮಿತ್ತ ಪರರಾಜ್ಯಗಳಿಂದ ಬರುವ ಭಕ್ತರಿಗಾಗಿ ವಸತಿಗೃಹ, ಕುಡಿಯುವ ನೀರು, ಶೌಚಾಲಯ, ಆರೋಗ್ಯ ಸೌಲಭ್ಯ ಒದಗಿಸಲಾಗಿತ್ತು. ಅಲ್ಲದೇ ಭಕ್ತರ ಅನುಕೂಲಕ್ಕಾಗಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯಿಂದ ಹೆಚ್ಚಿನ ಬಸ್‌ಗಳನ್ನು ಒದಗಿಸಲಾಗಿತ್ತು. ವಾರಕರಿಗಳ ಆರೋಗ್ಯ ಸೇವೆಗೆ ನೂರಾರು ವೈದ್ಯರನ್ನು ನೇಮಕ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next