Advertisement

ಸಮಾಜ ಹಿತ ಬಯಸುವ ಸಾಧನವೇ ಸಾಹಿತ್ಯ

06:26 PM Mar 02, 2020 | Naveen |

ಸೊಲ್ಲಾಪುರ: ತನ್ನ ಒಡಲೊಳಗೆ ಹಿತವನ್ನು ಇರಿಸಿಕೊಂಡು ಸಮಾಜದ ಹಿತವನ್ನು ಬಯಸುವ ಸಾಧನವೇ ಸಾಹಿತ್ಯ. ಸ-ಹಿತವಾದುದೇ ಸಾಹಿತ್ಯ. ಇಂದು ರಚನೆಯಾಗುತ್ತಿರುವ ಸಾಹಿತ್ಯ ಸಮಾಜಕ್ಕೆ ಮತ್ತು ಓದುಗರಿಗೆ ತಲುಪಬೇಕು. ವಿಷಾದವೆಂದರೆ ಸಾಹಿತ್ಯ ಪ್ರಕಟಿಸುವಲ್ಲಿನ ಉತ್ಸಾಹ ಸಾಹಿತ್ಯ ತಲುಪಿಸುವ ಹೊತ್ತಲ್ಲಿ ಇರುವುದಿಲ್ಲ ಎಂದು ಬಬಲಾದ ಪ್ರಾಥಮಿಕ ಸರ್ಕಾರಿ ಶಾಲೆ ಶಿಕ್ಷಕ ವಿದ್ಯಾಧರ ಗುರವ ಹೇಳಿದರು.

Advertisement

ಅಕ್ಕಲಕೋಟ ತಾಲೂಕಿನ ಮೈಂದರ್ಗಿಯಲ್ಲಿ ಮಹಾರಾಷ್ಟ್ರ ಆದರ್ಶ ಕನ್ನಡ ಬಳಗ ಹಮ್ಮಿಕೊಂಡಿದ್ದ ಪುಸ್ತಕ ಸಂವಾದ ಮಾಲಿಕೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂವಾದಕ್ಕೆ ತೆಗೆದುಕೊಂಡಿರುವ ರಾಗಂ ಅವರ ಜಗದ್ವಂದ್ಯ ಭಾರತ, ಗಿರೀಶ ಜಕಾಪುರೆ ಹಾಗೂ ಶ್ರೀದೇವಿ ಕೆರೆಮನೆಯವರ ಗಜಲ್‌ ಜುಗಲ್‌ ಬಂದಿ ಕೃತಿಗಳು ಬಹಳಷ್ಟು ಪ್ರಸಿದ್ಧಿ ಪಡೆದಿವೆ. ಈ ರೀತಿಯ ಪುಸ್ತಕ ಪರಿಚಯದಿಂದ ಕೃತಿಗಳ ಓದುಗ ಬಳಗ ಇನ್ನಷ್ಟು ಬೆಳೆಯುತ್ತದೆ ಎಂದರು.

ಅಕ್ಕಲಕೋಟನ ಖೇಡಗಿ ಮಹಾ ವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ| ಗುರುಸಿದ್ಧಯ್ಯ ಸ್ವಾಮಿ ಮಾತನಾಡಿ, ನನ್ನ
ದನಿಗೆ ನಿನ್ನ ದನಿಯು ಗಜಲ್‌-ಜುಗಲ್‌ ಬಂದಿಯನ್ನು ಪರಿಚಯಿಸುತ್ತ ಈ ಕೃತಿಯಲ್ಲಿ ಅಲ್ಲಮ ಮತ್ತು ಸಿರಿ ರೂಪದಲ್ಲಿ ಪುರುಷ, ಪ್ರಕೃತಿಯೇ ಸಂವಾದಕ್ಕೆ ಇಳಿದಂತಿದೆ ಎಂದು ಹೇಳಿದರು.

ಆಳಂದ ಸರಕಾರಿ ಪದವಿ ವಿದ್ಯಾಲಯದ ಅತಿಥಿ ಉಪನ್ಯಾಸಕ ಡಾ| ರಾಜಕುಮಾರ ಹಿರೇಮಠ ಜಗದ್ವಂದ್ಯ ಭಾರತ ಕೃತಿಯನ್ನು ಪರಿಚಯಿಸುತ್ತ, ಇಂದು ದೇಶದಲ್ಲಿ ಕೋಮುದಳ್ಳುರಿ ಹಬ್ಬಿದೆ. ದೇಶದ ರಾಜಧಾನಿ ದಿಲ್ಲಿ ಹೊತ್ತಿ ಉರಿಯುತ್ತಿದೆ. ಘಾತುಕ ಶಕ್ತಿಗಳು ಜನರನ್ನು ಧರ್ಮದ ಹೆಸರಿನಲ್ಲಿ ಒಡೆಯುತ್ತಿವೆ. ಜನರು ಸುಳ್ಳು ಸುದ್ದಿಗಳಿಗೆ ಕಿವಿಗೊಡದೇ ಒಂದಾಗಿರಬೇಕಾದ ಕಾಲವಿದು ಎಂದರು.

ರಾಗಂ ಅವರ ಕೃತಿ ಜಗದ್ವಂದ್ಯ ಭಾರತಂ ಓದಿದರೆ ಇಂತಹ ಕೋಮುದಳ್ಳುರಿಗಳೇ ನಡೆಯುವುದಿಲ್ಲ. ದೇಶಭಕ್ತಿ ನರನಾಡಿಗಳಲ್ಲಿ ಸಂಚರಿಸುತ್ತದೆ. ನಾವೆಲ್ಲ ಒಂದು ಎನ್ನುವ ಭಾವನೆ ತಾನಾಗಿಯೇ ಹೊಮ್ಮುತ್ತದೆ ಮತ್ತು ಸಹೋದರತೆ ಬಲಪಡೆಯುತ್ತದೆ ಎಂದರು.

Advertisement

ಲೇಖಕ ಗಿರೀಶ ಜಕಾಪುರೆ ಮಾತನಾಡಿ, ಹೊರನಾಡಿನಲ್ಲಿಯೂ ಹಲವಾರು ಜನ ಲೇಖಕರು, ಕವಿಗಳು ಇದ್ದಾರೆ. ಆದರೆ ಅವರ ಕೃತಿಗಳ ಪರಿಚಯ ಕನ್ನಡದ ಓದುಗರಿಗೆ ಆಗಬೇಕಿದೆ ಎಂದು ಹೇಳಿದರು. ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಮಡ್ಡೆ, ಹಿರಿಯ ಶಿಕ್ಷಕ ಶ್ರೀಶೈಲ ಹಲಡಗಿ ಹಾಜರಿದ್ದರು. ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್‌ ಶೇಖ, ಕಾರ್ಯದರ್ಶಿ ಸೋಮಶೇಖರ ಜಮಶೆಟ್ಟಿ, ಖಜಾಂಚಿ ಶರಣಪ್ಪ ಫುಲಾರಿ ಹಾಜರಿದ್ದರು. ಚಲನಚಿತ್ರ ಗಾಯಕ ಮಹೇಶ ಮೇತ್ರಿ ಕನ್ನಡದ ಸುಮಧುರ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಚಿದಾನಂದ ಮಠಪತಿ ನಿರೂಪಿಸಿದರು. ಬಸವರಾಜ ಧಾನಶೆಟ್ಟಿ ವಂದಿಸಿದರು. ದಿನೇಶ ಥಂಬದ, ಶರಣು ಕೋಳಿ, ಪ್ರಕಾಶ ಶಿವಣಗಿ, ಮಲ್ಲಿನಾಥ ರೂಪನೂರ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next