Advertisement

ಕನ್ನಡ-ಮರಾಠಿ ನಡುವೆ ಅನುವಾದ ಕಮ್ಮಟ ಸಂಪರ್ಕ ಸೇತುವೆ

10:39 AM Jun 23, 2019 | Naveen |

ಸೊಲ್ಲಾಪುರ: ಕನ್ನಡದಿಂದ ಮರಾಠಿಗೆ, ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಎರಡು ಭಾಷೆಗಳ ಮಧ್ಯೆ ಭಾಷಾ ಬಾಂಧವ್ಯ ಬೆಳೆಸುವುದರ ಜೊತೆಗೆ ಅನುವಾದ ಕಮ್ಮಟ ಸಂಪರ್ಕದ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಹೇಳಿದರು.

Advertisement

ಅಕ್ಕಲಕೋಟ ನಗರದ ಲೋಕಾಪುರೆ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಸಹಯೋಗದಲ್ಲಿ ನಡೆದ ಕನ್ನಡದಿಂದ ಮರಾಠಿಗೆ ಸಣ್ಣ ಕಥೆಗಳ ಅನುವಾದ ಕಮ್ಮಟದಲ್ಲಿ ಅವರು ಮಾತನಾಡಿದರು.

ನಮ್ಮ ಬಹು ಭಾಷಾ ರಾಷ್ಟ್ರಕ್ಕೆ ಅನುವಾದಕರೇ ಸಾರಥಿಗಳು. ಕೃತಿಕಾರ ಸೃಷ್ಟಿರ್ಕತನಾದರೆ ಅನುವಾದಕ ಮರು ಸೃಷ್ಟಿಕರ್ತ. ಹೀಗಾಗಿ ಅವನು ದೇವರ ದೇವ. ಅನುವಾದಕರು ಜಾತಿ-ಧರ್ಮ, ಭೇದ-ಭಾವ ಮರೆತು ರಾಷ್ಟ್ರ ಕಟ್ಟುವ ಕಾರ್ಯವನ್ನು ಮಾಡುತ್ತಿದ್ದಾರೆ. ಎರಡು ಭಾಷೆಗಳ ಹೃದಯ ಸಮ್ಮೇಲನದಿಂದ ಅನುವಾದವಾಗುತ್ತದೆ. ವಿವಿಧ ಭಾಷೆಗಳ ಮೇಲೆ ಪ್ರಭುತ್ವ ಉಳ್ಳವರು ಮಾತ್ರ ಅನುವಾದಕರಾಗಲು ಸಾಧ್ಯ ಎಂದರು.

ಹಿರಿಯ ಅನುವಾದಕ ಚಂದ್ರಕಾಂತ ಪೋಕಳೆ ಮಾತನಾಡಿ, ಭಾರತ ದೇಶದಲ್ಲಿ ಹೆಜ್ಜೆ-ಹೆಜ್ಜೆಗೂ ಬೇರೆ-ಬೇರೆ ಭಾಷೆಗಳಿವೆ. ಅವರದ್ದೇ ಆದ ಸಾಹಿತ್ಯ, ಸಂಸ್ಕೃತಿಗಳಿವೆ. ಎರಡು ಭಾಷೆಗಳ ಸಾಹಿತ್ಯವನ್ನು ಪರಸ್ಪರ ಕೊಡು ಕೊಳ್ಳುವಿಕೆಯಿಂದ ಭಾಷಾ ಮನೋಭಾವ ಹೆಚ್ಚಾಗುತ್ತದೆ. ಹೀಗಾಗಿ ಕನ್ನಡದ ಭಾಷಾ ಸಾಹಿತ್ಯವನ್ನು ಬೇರೆ-ಬೇರೆ ಭಾಷೆಗಳಿಗೆ ಅನುವಾದಿಸುವ ಮೂಲಕ ಕನ್ನಡ ಸಾಹಿತ್ಯವನ್ನು ರಾಷ್ಟ್ರ ಮಟ್ಟದಲ್ಲಿ ಬಲಪಡಿಸಬೇಕು ಎಂದರು.

ಅನುವಾದಕಿ ಸುಶೀಲ ಪುನೀತ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನುವಾದಕನು ಎರಡು ಭಾಷೆಗಳ ಮೇಲೆ ಪ್ರಭುತ್ವ ಉಳ್ಳವನಾಗಿದ್ದು ಸೃಜನಶೀಲ ಸಾಹಿತಿಯಷ್ಟೇ ಅನುವಾದಕ ಸೃಜನಶೀಲನಾಗಿರುತ್ತಾನೆ. ಹೀಗಾಗಿ ಅನುವಾದ ದ್ವಿತೀಯ ದರ್ಜೆ ಕೆಲಸವಲ್ಲ. ಕನ್ನಡಿಗರ ಮನಸ್ಸು ವಿಶಾಲವಾಗಿದೆ. ಆದ್ದರಿಂದ ಕನ್ನಡದ ಸಾಹಿತ್ಯವನ್ನು ಮರಾಠಿ ಭಾಷೆಗೆ ಅನುವಾದಿಸುವ ಮೂಲಕ ಕನ್ನಡ ಭಾಷೆ ಇನ್ನಷ್ಟು ಶ್ರೀಮಂತಗೊಳಿಸುವ ಕಾರ್ಯವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಡುತ್ತಿದೆ ಎಂದರು.

Advertisement

ಯುವ ಸಾಹಿತಿ ಹಾಗೂ ಕಮ್ಮಟ ನಿರ್ದೇಶಕ ಗಿರೀಶ ಜಕಾಪುರೆ ಪ್ರಾಸ್ತವಿಕ ಮಾತನಾಡಿದ ಅವರು, ಹೊರನಾಡ ಕನ್ನಡಿಗರಾದ ನಾವು ನಮ್ಮ ದೇಹ ಮಹಾರಾಷ್ಟ್ರದಲ್ಲಿದ್ದರೂ ಮನಸ್ಸು ಮಾತ್ರ ಕರ್ನಾಟಕದಲ್ಲಿದೆ. ಕರ್ನಾಟಕ ಸರ್ಕಾರ ನಮ್ಮನ್ನು ಕೈ ಬಿಟ್ಟರೂ ನಾವು ಮಾತ್ರ ಕನ್ನಡ ಬಿಟ್ಟಿಲ್ಲ. ಹೀಗಾಗಿ ಕನ್ನಡದಿಂದ ಮರಾಠಿಗೆ, ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಎರಡು ಭಾಷೆಗಳ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಬೆಳಗ್ಗೆ ನಡೆದ ಮೊದಲ ಉಪನ್ಯಾಸದಲ್ಲಿ ಕನ್ನಡ ಮರಾಠಿ ಸಾಹಿತ್ಯಿಕ ಸಾಂಸ್ಕೃತಿಕ ಹಿನ್ನೆಲೆ ಕುರಿತು ಹಿರಿಯ ಸಾಹಿತಿ ಡಾ| ಬಿ.ಬಿ. ಪೂಜಾರಿ ಉಪನ್ಯಾಸ ನೀಡಿದರು. ಮಧ್ಯಾಹ್ನ ನಡೆದ ಎರಡನೇ ಉಪನ್ಯಾಸದಲ್ಲಿ ಅನುವಾದಕ್ಕೆ ವಸ್ತುವಿನ ಆಯ್ಕೆಯ ಆಯಾಮಗಳು ಕುರಿತು ಡಾ| ವಿಜಯಾ ತೆಲಂಗ ಉಮನ್ಯಾಸ ನೀಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಸಂಗಮೇಶ ಬಾದವಾಡಗಿ, ಆದರ್ಶ ಕನ್ನಡ ಬಳಗದ ಅಧ್ಯಕ್ಷ ಅಧ್ಯಕ್ಷ ಮಲಿಕಾಜಾನ್‌ ಶೇಖ್‌, ಅನುವಾದಕರಾದ ಡಾ| ಡಿ.ಎಸ್‌. ಚೌಗಲೆ, ಡಾ| ಸುಜಾತಾ ಶಾಸ್ತ್ರಿ, ರಾಮಕೃಷ್ಣ ಮರಾಠೆ, ಪ್ರಭಾಕರ ಸಾತಖೇಡ, ವಸುಂಧರಾ ಶರ್ಮಾ, ಚನ್ನವೀರ ಭದ್ರೇಶ್ವರಮಠ, ವಿಶ್ವೇಶ್ವರ ಮೇಟಿ, ಪ್ರಕಾಶ ಪ್ರಧಾನ, ಡಾ| ಗುರುಸಿದ್ದಯ್ಯ ಸ್ವಾಮಿ, ಉಜ್ವಲಾ ಮಹಿಶಿ, ಕಸ್ತೂರಿ ಕರೋಟಿ, ಪ್ರಕಾಶ ಅತನೂರೆ, ಎಸ್‌.ಎಂ. ಜಾಧವ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಅನುವಾದಕರು ಪಾಲ್ಗೊಂಡಿದ್ದರು.

ಕರಿಯಪ್ಪ ಎನ್‌. ಸ್ವಾಗತಿಸಿದರು. ವಿದ್ಯಾಧರ ಗುರವ ನಿರೂಪಿಸಿದರು. ದಿನೇಶ ಚವ್ಹಾಣ ವಂದಿಸಿದರು. ಕಾರ್ಯಕ್ರಮ ಯಶಸ್ವಿಗಾಗಿ ಆದರ್ಶ ಕನ್ನಡ ಬಳಗದ ಶರಣಪ್ಪ ಫುಲಾರಿ, ಬಸವರಾಜ ಧನಶೆಟ್ಟಿ, ಶರಣು ಕೋಳಿ, ಶ್ರೀಶೈಲ ಮೇತ್ರೆ, ಗಣೇಶ ಜಕಾಪುರೆ, ಕಲ್ಮೇಶ ಅಡಳಟ್ಟಿ, ಸ್ವೀಟಿ ಪವಾರ, ವಿದ್ಯಾಶ್ರೀ ಬಸವನಕೇರಿ ಶ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next