ಸೊಲ್ಲಾಪುರ: ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಅಕ್ಕಲಕೋಟ ವಿಧಾನಸಭಾ ಚುನಾವಣೆಯಲ್ಲಿ ದಿನದಿಂದ ದಿನಕ್ಕೆ ಪ್ರಚಾರದ ಕಾವು ರಂಗೇರುತ್ತಿದೆ.
Advertisement
ಆರೋಪ-ಪ್ರತ್ಯಾರೋಪಗಳ ಮಧ್ಯೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮತದಾರರ ಮನವೊಲಿಸಿಕ್ಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಅಕ್ಕಲಕೋಟ ಮತಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಂದ 11 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ ಅದೆನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ನಡೆದಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಸಿದ್ಧರಾಮ ಮೇತ್ರೆ ಮತ್ತು ಬಿಜೆಪಿ ಅಭ್ಯರ್ಥಿ ಸಚಿನ ಕಲ್ಯಾಣಶೆಟ್ಟಿ ಮಧ್ಯೆ ನೇರಸ್ಪರ್ಧೆ ಏರ್ಪಟ್ಟಿದೆ. ಆದರೆ ಅ. 21ರಂದು ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.
ಮಾಲೀಕಯ್ಯ ಗುತ್ತೇದಾರ, ಆಳಂದ ಶಾಸಕ ಸುಭಾಷ ಗುತ್ತೇದಾರ, ಕಲಬುರಗಿ ಶಾಸಕ ಅಪ್ಪುಗೌಡ ಪಾಟೀಲ, ವಿಜಯಪುರ ಮಾಜಿ ಶಾಸಕ ಮನೋಹರ ಐನಾಪುರ ಹಾಗೂ ಮಹಾರಾಷ್ಟ್ರದ ಸಹಕಾರಿ ಖಾತೆ ಸಚಿವ ಸುಭಾಷ ದೇಶಮುಖ, ಸಚಿವ ಸದಾಭಾಹು ಕೋತ್, ಸಂಸದ ಡಾ| ಜಯಸಿದ್ಧೇಶ್ವರ ಸ್ವಾಮೀಜಿ, ಮಾಜಿ ಶಾಸಕ ಸಿದ್ರಾಮಪ್ಪ ಪಾಟೀಲ ಸೇರಿದಂತೆ ಹಲವಾರು ನಾಯಕರು ಸಭೆಗಳ ಮೂಲಕ ಬಿಜೆಪಿ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಸಿದ್ಧರಾಮ ಮ್ಹೇತ್ರೆ ಅವರ ಪ್ರಚಾರಕ್ಕಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ, ಮಾಜಿ ಸಚಿವೆ ಉಮಾಶ್ರೀ, ಅಫಜಲಪುರ ಶಾಸಕ ಎಂ.ವೈ. ಪಾಟೀಲ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಸೇರಿದಂತೆ ಹಲವಾರು ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಚುನಾವಣೆಯಲ್ಲಿ ಯಾರು ಗೆಲ್ಲುತಾರೆ ಎಂಬುದರ ಬಗ್ಗೆ ಒಂದೇ ಚರ್ಚೆ ನಡೆಯುತ್ತಿದೆ. ಅಲ್ಲದೆ ಬಿಜೆಪಿ ಪರವಾಗಿ ಹೆಚ್ಚಿನ ಜನರು ಬೆಟ್ಟಿಂಗ್ ಕಟ್ಟಿದ್ದು, ಸುಮಾರು 25 ಸಾವಿರ ಮತಗಳ ಅಂತರದಲ್ಲಿ ಸಚಿನ ಕಲ್ಯಾಣಶೆಟ್ಟಿ ಗೆಲ್ಲುತ್ತಾರೆ ಎಂದು ಹೇಳಲಾಗುತ್ತಿದೆ. ಅ.21ರಂದು ಮತದಾನ ನಡೆಯಲಿದೆ. ಅ.24ರಂದು ಫಲಿತಾಂಶ ಪ್ರಕಟವಾಗಲಿದೆ.