Advertisement

ಸಮನ್ವಯದಿಂದ ಏಕತೆ ಸಾಧಿಸಿ 

07:26 AM Feb 16, 2019 | Team Udayavani |

ಕೋಲಾರ: ಭಾರತದಲ್ಲಿ ಸಾಕಷ್ಟು ಧರ್ಮಗಳಿದ್ದು, ಆ ಧರ್ಮದಲ್ಲಿ ಸಾವಿರಾರು ಜಾತಿಗಳನ್ನು ಕಾಣಬಹುದಾಗಿದೆ. ಆದರೂ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತವಾಗಿದೆ ಎಂದು ತಾಪಂ ಅಧ್ಯಕ್ಷ  ಸೂಲೂರು ಎಂ.ಆಂಜಿನಪ್ಪ ತಿಳಿಸಿದರು. ಶುಕ್ರವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ  ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೀ ಸೇವಾಲಾಲ್‌  ಜಯಂತಿ ಉದ್ಘಾಟಿಸಿ ಮಾತನಾಡಿದರು. 

Advertisement

ಸಹಬಾಳ್ವೆ ಇರಲಿ: ಸಣ್ಣ-ಸಣ್ಣ ಸಮುದಾಯಗಳಲ್ಲಿ ದೊಡ್ಡ-ದೊಡ್ಡ ವಿದ್ವಾಂಸರು ಜನಿಸಿದ್ದು, ಸೌಹಾರ್ದತೆ, ಸಹಬಾಳ್ವೆಯಿಂದ ಕಾಣುವ ದೇಶವನ್ನಾಗಿ ರೂಪಿಸಿದ್ದಾರೆ ಎಂದು ತಿಳಿಸಿದರು. ಯಾವುದೇ ತಳ ಸಮುದಾಯ ರೈತನಾಗಿ, ಸೈನಿಕನಾಗಿ, ಆಡಳಿತ ವ್ಯವಸ್ಥೆಯ ಒಬ್ಬ ಅಧಿಕಾರಿಯಾಗಿ ಸಮಾಜ ಸೇವೆ ಮಾಡುವಂತಹ ಮಕ್ಕಳನ್ನು ಸಮಾಜಕ್ಕೆ ನೀಡಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು.

ಆರ್ಥಿಕ ಸಬಲರಾಗಿ: ಎಲ್ಲಾ ಸಮುದಾಯಗಳಿಗೆ ಸರ್ಕಾರ ಜಯಂತಿಗಳ ಮೂಲಕ ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ. ರಾಜ್ಯದಲ್ಲಿ 45 ಲಕ್ಷಕ್ಕೂ ಹೆಚ್ಚು ಜನಾಂಗ ಹೊಂದಿದ ಸಮುದಾಯವು ರಾಜಕೀಯವಾಗಿ, ಆರ್ಥಿಕವಾಗಿ ಮುಂದೆ ಬರುವಂತೆ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಬುದ್ಧರ ಆಶಯ ಹೊಂದಿದ್ದರು: ಸರ್ಕಾರ ವಿವಿಧ ಸಮುದಾಯಗಳಿಗೆ 26 ಜಯಂತಿ ಆಚರಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಇದಕ್ಕೆ ಕಾರಣ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಬರೆದ ‌ ಸಂವಿಧಾನದ ಮೂಲಕ ಸಾಧ್ಯವಾಗಿದೆ. ಹೀಗಾಗಿ ಎಲ್ಲರೂ ಸಮನ್ವಯದಿಂದ ಏಕತೆ ಸಾಧಿಸಬೇಕು. ನಾವೆಲ್ಲಾ ಒಂದೇ ಎಂಬ ದೃಷ್ಟಿಯಿಂದ ಬಾಳಬೇಕು. ಸಂತ ಶ್ರೀ ಸೇವಾಲಾಲ್‌ ಅವರು ಗೌತಮ ಬುದ್ದರ ಆಶಯಗಳನ್ನು ಹೊಂದಿದ್ದವರು ಎಂದು ತಿಳಿಸಿದರು. 

ಮಹಾನ್‌ ಮಾನವತಾವಾದಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ನಾಗಾನಂದ ಕೆಂಪರಾಜ್‌, ಭಾರತ ಹಚ್ಚ ಹಸಿರಾಗಿರಬೇಕು ಎಂಬುದು ಸೇವಾಲಾಲ್‌ರ ಆಶಯವಾಗಿತ್ತು. ದೇಶದಲ್ಲಿ ವಿವಿಧತೆಯಲ್ಲಿ ಏಕತೆಯಿದೆ. ಸಂತ ಶ್ರೀ ಸೇವಾಲಾಲ್‌ ಅವರು 280 ನೇ ಜಯಂತಿಯನ್ನು ಆಚರಿಸುತ್ತಿದೆ.

Advertisement

ಅವರು, ಮಹಾನ್‌ ಮಾನವತಾವಾದಿ, ಆಧ್ಯಾತ್ಮಿಕ ಗುರುಗಳಾಗಿದ್ದು, ಗೋರ್‌, ಬಂಜಾರ ಸಮುದಾಯಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. ಸೇವೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಸೇವಾಲಾಲ್‌ರು ನೀಡಿದ್ದಾರೆಂದರು. ಅಲ್ಲದೇ, ಹಿಂದುಳಿದ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮುದಾಯದಲ್ಲಿ ಹೆಚ್ಚಿನ ಸಮಾಜ ಸೇವೆ, ಸಮಾಜಕ್ಕೆ ಮಾದರಿಯಾಗುವ ಕಾರ್ಯ ಮಾಡಬೇಕೆಂದರು. 

ಮೈಸೂರು ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಆರ್‌.ಎಸ್‌. ನಾಯಕ್‌ ಅವರು ಸಂತ ಶ್ರೀ ಸೇವಾಲಾಲ್‌ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಮುದಾಯ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು.

ತೋಟಗಾರಿಕಾ ಕಾಲೇಜಿನ ವಿಜ್ಞಾನಿಗಳಾದ ನಾಗರಾಜ್‌, ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್‌, ಕೆಜಿಎಫ್‌ ಘಟಕದ ಡಿವೈಎಸ್‌ಪಿ ಮನೋಜ್‌ ನಾಯಕ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರವಿಕುಮಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next