Advertisement

ಘನತ್ಯಾಜ್ಯ ಘಟಕ ನಿರ್ಮಾಣ ವಿಳಂಬ

09:41 AM Jan 22, 2019 | |

ಪುತ್ತೂರು : ತ್ಯಾಜ್ಯ ಸಮಸ್ಯೆ ಬೀದಿ ತುಂಬಾ ನಾರುವಾಗ ಮಾತ್ರ ಘನತ್ಯಾಜ್ಯ ವಿಲೇವಾರಿ ನೆನಪಾಗುತ್ತದೆ. ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ ಮಾಡಿ, ತ್ಯಾಜ್ಯ ನಿರ್ವಹಣೆ ಮಾಡ ಬೇಕೆನ್ನುವ ಎರಡು ವರ್ಷಗಳ ಹೋರಾಟಕ್ಕೆ ಇನ್ನೂ ಸರಿಯಾದ ನ್ಯಾಯ ಸಿಕ್ಕಿಲ್ಲ.

Advertisement

ಪ್ರಸ್ತಾವಿತ ಕಡಬ ತಾಲೂಕು ಸಹಿತ ಪುತ್ತೂರು ತಾಲೂಕಿನ ಒಟ್ಟು 41 ಗ್ರಾ.ಪಂ.ಗಳ ಪೈಕಿ 2 ಗ್ರಾ.ಪಂ.ಗಳಲ್ಲಿ ಮಾತ್ರ ಘನತ್ಯಾಜ್ಯ ವಿಲೇವಾರಿ ಘಟಕ ಪೂರ್ಣಗೊಂಡಿದೆ. ಉಳಿದ 39 ಗ್ರಾ.ಪಂ.ಗಳಲ್ಲಿ ಇನ್ನೂ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿಲ್ಲ. ಇದರಲ್ಲಿ 18 ಗ್ರಾ.ಪಂ.ಗಳು ಇನ್ನೂ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ. ಘನತ್ಯಾಜ್ಯ ನಿರ್ವಹಣೆ ಘಟಕದ ಗಂಭೀರತೆಯನ್ನು ಇನ್ನೂ ಅರ್ಥ ಮಾಡಿಕೊಂಡಂತೆ ಕಾಣುವುದಿಲ್ಲ.

ಕೆಲವು ಗ್ರಾ.ಪಂ.ಗಳು ಪ್ರಸ್ತಾವನೆ ಸಲ್ಲಿ ಸಿದ್ದು, ಜಿ.ಪಂ.ನ ಅನುದಾನಕ್ಕೆ ಎದುರು ನೋಡುತ್ತಿವೆ. ಕೆಲವು ಗ್ರಾ.ಪಂ.ಗಳಲ್ಲಿ ಕಾಮಗಾರಿ ಆರಂಭಗೊಂಡಿದೆ. ಆದರೆ ಪೂರ್ಣಗೊಂಡಿಲ್ಲ. ಪ್ರತಿ ಗ್ರಾ.ಪಂ.ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಬೇಕೆನ್ನುವ ಕೂಗಿಗೆ ಗ್ರಾ.ಪಂ.ಗಳು ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ.

ಏಕೆ ಅಗತ್ಯ?

ತ್ಯಾಜ್ಯ ವಿಲೇವಾರಿ ಎನ್ನು ವುದು ಪೇಟೆಗಷ್ಟೇ ಸೀಮಿತ ವಾಗಿಲ್ಲ. ಪ್ರತಿ ಗ್ರಾಮದ ಬೀದಿಯಲ್ಲಿ ಸಂಚರಿಸಿದರೆ ತ್ಯಾಜ್ಯ ಗುಡ್ಡೆ ಬಿದ್ದಿರುವುದು ಕಂಡುಬರುತ್ತದೆ. ಇದು ಆ ಗ್ರಾಮಸ್ಥರೇ ರಾಶಿ ಹಾಕಿದ ಕಸ ಎಂದಲ್ಲ. ಕೆಲವು ಅಂಗಡಿ, ಮಾಂಸದಂಗಡಿಗಳ ತ್ಯಾಜ್ಯ ವನ್ನು ಇಲ್ಲಿ ಸುರಿದು ಹೋಗುತ್ತಿದ್ದಾರೆ. ಈ ಎಲ್ಲ ಅಂಗಡಿಗಳಿಗೆ ಅನುಮತಿ ನೀಡಿರುವ ಗ್ರಾ.ಪಂ. ತ್ಯಾಜ್ಯ ವಿಲೇವಾರಿಗೂ ಒಂದು ವ್ಯವಸ್ಥೆ ಮಾಡಬೇಕಲ್ಲವೇ? ಅದಕ್ಕಾಗಿ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಮುಂದಾಗಿದೆ.

Advertisement

ಮಿತಿಮೀರಿ ಬೆಳೆಯುತ್ತಿರುವ ಪ್ಲಾಸ್ಟಿಕ್‌ ಸ್ಥಳೀಯ ಆಡಳಿತಕ್ಕೆ ದೊಡ್ಡ ತಲೆನೋವು. ಹಸಿ ಕಸವನ್ನು ಮನೆಯಲ್ಲೇ ಗೊಬ್ಬರ ಮಾಡಿ, ಒಣ ಕಸವನ್ನು ಘಟಕಕ್ಕೆ ನೀಡಬೇಕು ಎನ್ನುವುದು ಆಲೋಚನೆ. ಈ ಒಣ ಕಸವನ್ನು ವಿಂಗಡಿಸಿ, ಮರುಬಳಕೆಗೆ ವಿನಿಯೋಗ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿರೋಧವೂ ಇದೆ

ಪುತ್ತೂರು ತಾಲೂಕಿನ ಮಟ್ಟಿಗೆ ತ್ಯಾಜ್ಯ ವಿಲೇವಾರಿ ಘಟಕ ಇರುವುದು ಬನ್ನೂರು ಡಂಪಿಂಗ್‌ ಯಾರ್ಡ್‌ ಮಾತ್ರ. ಇದು ನಗರಸಭೆ ವ್ಯಾಪ್ತಿಗೆ ಸೀಮಿತ. ಇದರ ನಿರ್ವಹಣೆ ಕೊರತೆಯಿಂದ ಸ್ಥಳೀಯರ ವಿರೋಧ ಎದುರಿಸುತ್ತಿದೆ. ಇದೇ ಮಾದರಿಯನ್ನು ತೆಗೆದುಕೊಂಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾಡಿದರೆ ಹೇಗೆ ಎನ್ನುವುದು ಗ್ರಾಮಸ್ಥರ ಆತಂಕ. ಇದನ್ನು ಅರ್ಥೈಸಿಕೊಂಡ ಕೆಲ ಗ್ರಾ.ಪಂ.ಗಳು, ಘಟಕ ನಿರ್ಮಾಣಕ್ಕೆ ಹಿಂದೇಟು ಹಾಕಿರುವುದು ಸುಳ್ಳಲ್ಲ. ಏಕೆಂದರೆ, ಆಯಾ ವಾರ್ಡ್‌ನ ನಿವಾಸಿಗಳೇ ಅಲ್ಲಿನ ಗ್ರಾ.ಪಂ. ಸದಸ್ಯರಾಗಿರುತ್ತಾರೆ. ಗ್ರಾಮಸ್ಥರ ಈ ಆತಂಕವನ್ನು ಅಲ್ಲಗಳೆಯುವಂತೆ ಇಲ್ಲ. ಇಂದಿನ ಡಂಪಿಂಗ್‌ ಯಾರ್ಡ್‌ಗಳ ಸ್ಥಿತಿಯ ನಿರ್ವಹಣೆ ಪ್ರಶ್ನೆ ಯಾರಿಗಾದರೂ ಮೂಡದೇ ಇರದು. ಆದ್ದರಿಂದ ಘಟಕ ನಿರ್ಮಾಣದ ಜತೆಗೆ ನಿರ್ವಹಣೆ ಬಗ್ಗೆಯೂ ಜಿ.ಪಂ. ಸರಿಯಾದ ಮಾಹಿತಿ ನೀಡಬೇಕಾದ ಅಗತ್ಯ ಇದೆ.

ವೈಜ್ಞಾನಿಕವಾಗಿ ವಿಲೇವಾರಿತಾಲೂಕಿನ 41 ಗ್ರಾ.ಪಂ.ಗಳಲ್ಲಿ ಘಟಕ ನಿರ್ಮಾಣ ಕಷ್ಟ. ಆದರೆ 30ರಲ್ಲಾದರೂ ಮಾಡಲೇಬೇಕೆನ್ನುವ ಗುರಿ ಹೊಂದಲಾಗಿದೆ. ಕೆಲ ಸಣ್ಣ ಗ್ರಾ.ಪಂ.ಗಳನ್ನು ಸಮೀಪದ ಗ್ರಾ.ಪಂ.ಗಳಿಗೆ ಹೊಂದಿಸಿಕೊಂಡು ವಿಲೇ ಘಟಕ ಮಾಡುವ ಅಲೋಚನೆಯೂ ಇದೆ. ಕೊಳ್ತಿಗೆ, ಒಳಮೊಗ್ರು, ಕಬಕದಲ್ಲಿ ಅರಣ್ಯ ಸಮಸ್ಯೆ ಇದೆ. ಇದಕ್ಕೆ ಪರ್ಯಾಯ ಅಥವಾ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಡಂಪಿಂಗ್‌ ಯಾರ್ಡ್‌ ನಲ್ಲಿ ನಿರ್ವಹಣೆ ಇಲ್ಲದೇ ಇದ್ದರೆ ಸಮಸ್ಯೆ. ಗ್ರಾ.ಪಂ.ಗಳಲ್ಲಿ ವಿಂಗಡಣೆ ಮಾಡಿಯೇ ತೆಗೆದುಕೊಳ್ಳುತ್ತೇವೆ. ಆಗ ಸಮಸ್ಯೆ ಆಗುವುದೇ ಇಲ್ಲ. ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು.
– ಜಗದೀಶ್‌, ಇಒ, ತಾ.ಪಂ., ಪುತ್ತೂರು

ಗಣೇಶ್‌ ಎನ್‌. ಕಲ್ಲರ್ಪೆ

Advertisement

Udayavani is now on Telegram. Click here to join our channel and stay updated with the latest news.

Next