Advertisement

ಸೈನಿಕರ ದೇಶಸೇವೆ ಅಮೋಘ: ದೇಶಪಾಂಡೆ

12:35 PM Jun 07, 2022 | Team Udayavani |

ದಾಂಡೇಲಿ: ವಿ.ಆರ್‌. ದೇಶಪಾಂಡೆ ಮೆಮೋರಿಯಲ್‌ ಟ್ರಸ್ಟ್‌ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ದಾಂಡೇಲಿ ತಾಲೂಕಿನ ನಿವೃತ್ತ ಸೇನಾನಿಗಳ ಸಮ್ಮಿಲನ, ವೀರ ನಮನ-ಸನ್ಮಾನ ಕಾರ್ಯಕ್ರಮವನ್ನು ನಗರದ ಹಳೆ ದಾಂಡೇಲಿಯ ಹಾರ್ನ್ಬಿಲ್‌ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮವನ್ನು ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್‌ ಸುಧೀಂದ್ರ ಇಟ್ನಾಳ ಅವರು ಉದ್ಘಾಟಿಸಿ ಮಾತನಾಡಿ, ವಿ.ಆರ್‌. ದೇಶಪಾಂಡೆ ಮೆಮೋರಿಯಲ್‌ ಟ್ರಸ್ಟ್‌ ದೇಶ ಸೇವೆ ಮಾಡುತ್ತಿರುವ ಸಂಸ್ಥೆಯಾಗಿದೆ. ಯೋಧರು ದೇಶದ ಗಡಿ ಕಾಯುವ ಮೂಲಕ ದೇಶ ಸೇವೆ ಮಾಡಿದರೆ, ವಿಆರ್‌ಡಿಎಂ ಟ್ರಸ್ಟ್‌ ಹಲವು ಸ್ತರಗಳಲ್ಲಿ ಸೇವಾ ಕೈಂಕರ್ಯಗಳನ್ನು ಮಾಡುವುದರ ಮೂಲಕ ರಾಷ್ಟ್ರಸೇವೆ ಮಾಡುತ್ತಿದೆ ಎಂದರು.

ಬಂಗೂರನಗರ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ| ಆರ್‌.ಜಿ. ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್‌. ವಾಸರೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಒತ್ತಡದ ನಡುವೆಯು ಇಂತಹ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಆರ್‌.ವಿ. ದೇಶಪಾಂಡೆಯವರ ಸೇವಾ ಕಾರ್ಯಗಳನ್ನು ಕೊಂಡಾಡಿದರು. ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ವಿಷ್ಣು ಉಪ್ಪಾರ ಅವರು ನಿವೃತ್ತ ಸೈನಿಕರ ಸಂಘಕ್ಕೊಂದು ಜಾಗ ಒದಗಿಸಿಕೊಡುವಂತೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಹಾಗೂ ವಿಆರ್‌ಡಿಎಂ ಟ್ರಸ್ಟ್‌ನ ಅಧ್ಯಕ್ಷ ಆರ್‌ .ವಿ.ದೇಶಪಾಂಡೆಯವರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ದೇಶಸೇವೆ ಮಾಡುವ ಸೈನಿಕರ ಕರ್ತವ್ಯ ಅತ್ಯಂತ ಅಮೋಘವಾಗಿದೆ. ತಮ್ಮೆಲ್ಲ ಸುಖವನ್ನು ಬದಿಗೊತ್ತಿ ದೇಶಸೇವೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಜೀವನದ ಮಹತ್ವದ ಘಟ್ಟದಲ್ಲಿರುವಾಗಲೆ ನಿವೃತ್ತಿಯನ್ನು ಹೊಂದುವ ಸೈನಿಕರ ಹಲವಾರು ಬೇಡಿಕೆಗಳು ನ್ಯಾಯೋಚಿತವಾಗಿದೆ ಎಂದು ಹೇಳಿ, ನಿವೃತ್ತ ಸೈನಿಕರ ಸಂಘಕ್ಕೆ ಆದ್ಯತೆಯಡಿ ಜಾಗವನ್ನು ನೀಡುವಂತೆ ನಗರ ಸಭೆಗೆ ಮನವಿಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಹಾಗೂ ಮೃತ ಯೋಧರ ಕುಟುಂಬ ವರ್ಗದವರನ್ನು ಗೌರವಿಸಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಶಿರಸಿಯ ಜನನಿ ಸಂಗೀತ ಸಂಸ್ಥೆ ಕಲಾವಿದರಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರು, ನಗರ ಸಭೆಯ ಸದಸ್ಯರು, ನಾಗರಿಕರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next