ಧಾರವಾಡ: ಸೈನಿಕರಿಗೆ ಯಾವುದೇ ಜಾತಿ, ಧರ್ಮ ಹಾಗೂ ಮತ-ಪಂಥಗಳಿಲ್ಲ. ಸೈನಿಕ ಎಂಬ ಪದವೇ ಧರ್ಮವಾಗಿದೆ ಎಂದು ನಿವೃತ್ತ ಏರ್ ಕಮಾಂಡರ್ ಸಿ.ಎಸ್.ಹವಾಲ್ದಾರ್ ಹೇಳಿದರು.
ಶ್ರೀಸಾಯಿ ಪದವಿ ಪೂರ್ವ ವಿಜ್ಞಾನ-ವಾಣಿಜ್ಯ ಕಾಲೇಜು, ಹೊಂಬೆಳಕು ಫೌಂಡೇಷನ್ ಸಹಯೋಗದಲ್ಲಿ ಅಮೃತ ಮಹೋತ್ಸವ ಪ್ರಯುಕ್ತ ನಗರದ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ದೇಶ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರ ಬರುತ್ತವೆ, ಹೋಗುತ್ತವೆ. ಆದರೆ, ಸೈನಿಕರು ಮಾತ್ರ ದೇಶದ ಹಾಗೂ ಜನರ ರಕ್ಷಣೆಗೆ ಪ್ರಾಮಾಣಿಕ ಕರ್ತವ್ಯ ನಿಭಾಯಿಸುತ್ತಾರೆ. ಭಾರತ ಬಡತನ ರಾಷ್ಟ್ರವಲ್ಲ ಅದೊಂದು ಶ್ರೀಮಂತ ರಾಷ್ಟ್ರ. 21ನೇ ಶತಮಾನದಲ್ಲಿ ಜಗತ್ತು ಆಳುವ ಶಕ್ತಿ ಭಾರತಕ್ಕಿದೆ. ಚೀನಾ ಹಾಗೂ ಅಮೆರಿಕ ದೇಶಕ್ಕೆ ಪೈಪೋಟಿ ನೀಡಲಿದೆ. ಅಷ್ಟೊಂದು ಶಕ್ತಿ, ಸಂಪನ್ಮೂಲ ಭಾರತದಲ್ಲಿದೆ ಲಭ್ಯತೆ ಉಂಟು ಎಂದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸೈನಿಕರ ಸೇವೆ ಮರೆಯುವಂತಿಲ್ಲ. ಆದರೆ ಅಮೃತ ಮಹೋತ್ಸವದಲ್ಲಿ ಕೇವಲ ಮಹಾತ್ಮರನ್ನು ನೆನೆದು ಸೈನಿಕರನ್ನು ಕಡೆಗಣಿಸುತ್ತಿದೆ. ಸ್ವಾತಂತ್ರ್ಯಕ್ಕೆ ಮಹಾತ್ಮರು ಅಹಿಂಸಾ ಮಾರ್ಗದಿಂದ ಹೋರಾಡಿದರೆ, ಸುಭಾಷಚಂದ್ರ ಬೋಸ್ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಿ, ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ತೊಡೆ ತಟ್ಟಿದ್ದಾರೆ. ಇಂತಹ ಹೋರಾಟಗಾರರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದರು.
ಮಹಾನಗರ ಪಾಲಿಕೆ ಆಯುಕ್ತ ಡಾ|ಗೋಪಾಲಕೃಷ್ಣ ಬಿ ಮಾತನಾಡಿ, ಗಡಿಯಲ್ಲಿ ಸೈನಿಕರು ಜೀವದ ಹಂಗು ತೊರೆದು ಪಹರೆ ಕಾಯುತ್ತಾರೆ. ಕೇವಲ ಸ್ವಾತಂತ್ರ್ಯ ದಿನಕ್ಕೆ ಸೈನಿಕರಿಗೆ ಗೌರವ ತೋರದೆ, ಅವರ ಸಮಸ್ಯೆ ಹಾಗೂ ತೊಂದರೆಗೆ ಸ್ಪಂದಿಸಬೇಕು ಎಂದರು.
ಇದೇ ಸಂದರ್ಭದಲ್ಲಿ 75 ಜನ ನಿವೃತ್ತ ಹಾಗೂ ಹಾಲಿ ಸೈನಿಕರಿಗೆ ದೇಶ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೊಂಬೆಳಕು ಪ್ರತಿಷ್ಠಾನ ಅಧ್ಯಕ್ಷೆ ಡಾ|ವೀಣಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವರಧಶ್ರೀಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿಂಗಪ್ಪ ಸಿಂಗೋಟಿ, ಪ್ರಾಚಾರ್ಯ ನಾಗರಾಜ ಶಿರೂರ, ಶಿಕ್ಷಕರು ಇದ್ದರು.
ಇದಕ್ಕೂ ಮುನ್ನ ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಿಂದ ರಾಜ್ಯ ಸರ್ಕಾರಿ ನೌಕರರ ಭವನದವರೆಗೆ ಭಾರತಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.