Advertisement

8,000 ಅಡಿ ಎತ್ತರದಲ್ಲಿ ಸೈನಿಕರ ಸಾಹಸ

11:36 AM Oct 15, 2018 | |

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಆಕರ್ಷಣೆ ಹೆಚ್ಚಿಸುವ ಸಲುವಾಗಿ ಆಯೋಜಿಸಿದ್ದ ವೈಮಾನಿಕ ಪ್ರದರ್ಶನ ಜನಾಕರ್ಷಣೀಯವಾಗಿತ್ತು. ಪೂರ್ವಭಾವಿ ತಾಲೀಮಿನಲ್ಲಿ ವಿವಿಧ ಸಾಹಸಮಯ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದ ಯೋಧರು ಭಾನುವಾರ ನಡೆದ ಪ್ರಧಾನ ಕಾರ್ಯಕ್ರಮದಲ್ಲೂ ಪ್ರೇಕ್ಷಕರ ಮನಗೆದ್ದರು. 

Advertisement

ನಗರದ ಬನ್ನಿಮಂಟದ ಪಂಜಿನ ಕವಾಯತು ಮೈದಾನದಲ್ಲಿ ಬೆಳಗ್ಗೆ 11 ಗಂಟೆಯಿಂದ ಆರಂಭಗೊಂಡ ಏರ್‌ ಶೋ ಹೆಮ್ಮೆಯ ವೀರ ಯೋಧರ ಸಾಹಸ ಪ್ರವೃತ್ತಿಗೆ ಸಾಕ್ಷಿಯಾಯಿತು. ಭಾರೀ ಜನಸ್ತೋಮದಿಂದ ತುಂಬಿದ್ದ ಮೈದಾನದ ಮೇಲೆ ಹಾರಿಬಂದ ಹೆಲಿಕಾಪ್ಟರ್‌ನಲ್ಲಿದ್ದ ಸೈನಿಕರು 115 ಅಡಿ ಎತ್ತರದಿಂದ ಪುಷ್ಪವೃಷ್ಠಿ ಸುರಿಸುತ್ತಾ ವೈಮಾನಿಕ ಪ್ರದರ್ಶನಕ್ಕೆ ಸಾಂಕೇತಿಕ ಚಾಲನೆ ನೀಡಿದರು.

ಇದಾದ ಕೆಲಹೊತ್ತಿನ ಬಳಿಕ ಮೈದಾನದ ಮಧ್ಯಭಾಗಕ್ಕೆ ಬಂದ ಹೆಲಿಕಾಪ್ಟರ್‌ನಲ್ಲಿದ್ದ ಗರುಡ ಕಮಾಂಡೋ ತಂಡದ ಯೋಧರ ಸ್ಲಿಥರಿಂಗ್‌ ಪ್ರದರ್ಶನದಿಂದ ಎಲ್ಲರನ್ನು ರಂಜಿಸಿದರು. ಅಂದಾಜು 50 ಅಡಿಗಳಷ್ಟು ಎತ್ತರದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್‌ನಿಂದ 12 ಮಂದಿ ಶಸ್ತ್ರಸಜ್ಜಿತ ಯೋಧರು ಹಗ್ಗದ ಮೂಲಕ ಭೂಮಿಗೆ ಇಳಿದು ಮೂಲಕ ಪ್ರೇಕ್ಷಕರ ಚೆಪ್ಪಾಳೆ ಗಿಟ್ಟಿಸಿಕೊಂಡರು. 

ಮೊದಲ ದಿನದಂದು ನಡೆದ ಪೂರ್ವತಾಲೀಮಿನಲ್ಲಿ ಎಲ್ಲರನ್ನು ಆಕರ್ಷಿಸಿದ್ದ ವಾಯುಪಡೆಯ ಏರ್‌ಡೆವಿಲ್ಸ್‌, ಆಕಾಶ ಗಂಗಾ ತಂಡದ ಸೈನಿಕರ ಸ್ಕೈಡೈವಿಂಗ್‌ ಪ್ರದರ್ಶನ ನೋಡುಗರಿಗೆ ರಸದೌತಣ ನೀಡಿತು. ಗಜಾನಂದ್‌ ಯಾದವ್‌ ನೇತೃತ್ವದ ತಂಡದ ಯೋಧರು 8000 ಅಡಿಗಳಷ್ಟು ಎತ್ತರದಿಂದ ಸ್ಕೈಡೈವಿಂಗ್‌ ಮಾಡುವ ಮೂಲಕ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು.

ಸ್ಕೈಡೈವಿಂಗ್‌ ಆರಂಭದಲ್ಲಿ ನಾಲ್ವರು ಯೋಧರು ಆಕಾಶಗಂಗಾ ತಂಡದ ಧ್ವಜದೊಂದಿಗೆ ಯಶಸ್ವಿಯಾಗಿ ಸ್ಕೈಡೈವಿಂಗ್‌ ಮೂಲಕ ಪಂಜಿನ ಕವಾಯತು ಮೈದಾನಕ್ಕೆ ಬಂದಿಳಿದರು. ಇವರ ಬೆನ್ನಲ್ಲೆ ಐವರು ಯೋಧರು ಬಾನಂಗಳದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ಸ್ಕೈಡೈವಿಂಗ್‌ ನಡೆಸಿ ಮಿಂಚಿದರು. ಆಕರ್ಷಕ ಸ್ಕೈಡೈವಿಂಗ್‌ ಪ್ರದರ್ಶಿಸಿದ ವಾಯುಸೇನೆಯ ಯೋಧರ ಸಾಹಸಕ್ಕೆ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ, ಹರ್ಷೋದ್ಘಾರದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. 

Advertisement

ಮೊದಲ ದಿನದಂತೆ ಮುಖ್ಯ ಪ್ರದರ್ಶನದಲ್ಲೂ ಇಂಡಿಯನ್‌ ಏರ್‌ಫೋರ್ಸ್‌ನ ಎರಡು ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಅಂತ್ಯಗೊಂಡಿತು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದ ವಾಯುಪಡೆ ಸೈನಿಕರಿಗೆ ನೆನಪಿನ ಕಾಣಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಸಾ.ರಾ.ಮಹೇಶ್‌, ಶ್ರೀನಿವಾಸ್‌, ಶಾಸಕರಾದ ಹರ್ಷವರ್ಧನ್‌, ಎಲ್‌. ನಾಗೇಂದ್ರ, ಅಶ್ವಿ‌ನ್‌ ಕುಮಾರ್‌, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ, ಜಿಲ್ಲಾಧಿಕಾರಿ ಅಭಿರಾಂ ಶಂಕರ್‌, ಪೊಲೀಸ್‌ ಆಯುಕ್ತ ಡಾ. ಸುಬ್ರಹ್ಮಣ್ಯೇಶ್ವರ ರಾವ್‌ ಸೇರಿದಂತೆ ಇನ್ನಿತರರು ಹಾಜರಿದ್ದರು. 

ಕಿಕ್ಕಿರಿದು ತುಂಬಿದ್ದ ಜನ: ದಸರಾ ಅಂಗವಾಗಿ ಆಯೋಜಿಸಿದ್ದ ಏರ್‌ ಶೋ ಅಂಗವಾಗಿ ಶನಿವಾರ ನಡೆದ ಪೂರ್ವಭಾವಿ ತಾಲೀಮು ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿತ್ತು. ಹೀಗಾಗಿ ಭಾನುವಾರ ನಡೆದ ವೈಮಾನಿಕ ಪ್ರದರ್ಶನದ ಮುಖ್ಯ ಕಾರ್ಯಕ್ರಮ ವೀಕ್ಷಿಸಲು ನಿರೀಕ್ಷೆಗೂ ಮೀರಿದ ಪ್ರೇಕ್ಷಕರು ಆಗಮಿಸಿದ್ದರು.

ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಇಂಡಿಯನ್‌ ಏರ್‌ಫೋರ್ಸ್‌ ಸೈನಿಕರು ನೀಡಿದ ಸಾಹಸಮಯ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು. ಅಲ್ಲದೆ ಏರ್‌ ಶೋ ಮುಕ್ತಾಯದ ಬಳಿಕ ಪ್ರೇಕ್ಷಕರ ಗ್ಯಾಲರಿಯತ್ತ ಆಗಮಿಸಿದ ವಾಯುಪಡೆ ಯೋಧರೊಂದಿಗೆ ಸಾರ್ವಜನಿಕರು ಫೋಟೋ, ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟರು. 20 ಸಾವಿರಕ್ಕೂ ಹೆಚ್ಚು ಮಂದಿ ಏರ್‌ಶೋ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next