ಉಳ್ಳಾಲ: ಸರಕಾರಿ ನೌಕರಿಯ ಬಗ್ಗೆ ಕರಾವಳಿಯ ಜನರಿಗೆ ಹೆಚ್ಚಿನ ಮಾಹಿತಿ, ತರಬೇತಿಯ ಅಗತ್ಯವಿದ್ದು, ಕೇಂದ್ರ ಸರಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಗೆ ಪೂರಕವಾಗಿ ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ವೀರರ ಹೆಸರಿನಲ್ಲಿ ಸೈನಿಕ ತರಬೇತಿ ಸಂಸ್ಥೆಗಳನ್ನು ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಂಗಳೂರು ವಿ.ವಿ.ಯಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‌ನ ಯೋಜನೆ (ಸಿಎಎಫ್‌ಇಎಸ್) ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿನಿಯರ ವಸತಿ ನಿಲಯದ ಶಿಲಾನ್ಯಾಸ ಮತ್ತು ರೂಸಾದ 3.25 ಕೋಟಿ ರೂ. ಅನುದಾನದಡಿ ನಿರ್ಮಿಸಲಾಗಿರುವ ಭೂಗೋಳ ಶಾಸ್ತ್ರ ಅಧ್ಯಯನ ವಿಭಾಗದ ನೂತನ ಕಟ್ಟಡ ಹಾಗೂ ವಿಭಾಗ ಉದ್ಘಾಟನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಅನ್ನ ತಿಂದು ದೇಶಕ್ಕೆ ದ್ರೋಹ ಬಗೆಯುವ ಯುವಜನರ ಮನಸ್ಥಿತಿ ಬದಲಾಗಬೇಕು. ಶಿಕ್ಷಣದ ಮೂಲಕವೇ ರಾಷ್ಟ್ರಭಕ್ತಿ ಮೂಡಿಸಬೇಕಿದೆ ಎಂದರು.
ಭೂಗೋಳ ಶಾಸ್ತ್ರ ಅಧ್ಯಯನ ವಿಭಾಗದ ನೂತನ ಕಟ್ಟಡ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಸರಕಾರ ಮಂಗಳೂರು ವಿ.ವಿ.ಗೆ 20 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.
ವಿ.ವಿ. ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಸದಸ್ಯ ಪ್ರೊ| ಎಂ. ಎಸ್ ತಳವಾರ್ ಗೌರವ ಅತಿಥಿಯಾಗಿದ್ದರು. ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಪರೀಕ್ಷಾಂಗ ಕುಲಸಚಿವ ಪ್ರೊ| ಪಿ.ಎಲ್. ಧರ್ಮ, ಹಣಕಾಸು ಅಧಿಕಾರಿ ಪ್ರೊ| ಜಯಪ್ಪ, ಕಾರ್ಯಕಾರಿ ಅಭಿಯಂತ ದೇವಿಪ್ರಸಾದ್ ಎಂ. ಉಪಸ್ಥಿತರಿದ್ದರು. ಕುಲಸಚಿವ ಪ್ರೊ| ಕಿಶೋರ್ ಕುಮಾರ್ ಸಿ.ಕೆ. ಸ್ವಾಗತಿಸಿ, ಭೂಗೋಳಶಾಸ್ತ್ರ ವಿಭಾಗದ ಸಂಯೋಜಕ ಡಾ| ದಶರಥ ಪಿ. ಅಂಗಡಿ ವಂದಿಸಿದರು.