Advertisement

ಕಾಶ್ಮೀರದಲ್ಲಿ ಯೋಧ ನಾಪತ್ತೆ, ತೀವ್ರ ಶೋಧ

09:33 PM Jul 30, 2023 | Team Udayavani |

ಶ್ರೀನಗರ: ಹಬ್ಬಕ್ಕೆಂದು ರಜೆಪಡೆದು ಮನೆಗೆ ಆಗಮಿಸಿದ್ದ ಭಾರತೀಯ ಸೇನೆಯ ಯೋಧರೊಬ್ಬರು ನಾಪತ್ತೆಯಾಗಿರುವ ಘಟನೆ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ವರದಿಯಾಗಿದೆ. ಜಮ್ಮು-ಕಾಶ್ಮೀರ ಲೈಟ್‌ ಇನ್‌ಫ್ಯಾಂಟ್ರಿ ರೆಜಿಮೆಂಟ್‌ನ ರೈಫ‌ಲ್‌ವುನ್‌ ಆಗಿದ್ದ ಜಾವೇದ್‌ ಅಹ್ಮದ್‌ ವಾನಿ ಈದ್‌ ಹಬ್ಬಕ್ಕೆಂದು ರಜೆ ಪಡೆದು ತಮ್ಮ ನಿವಾಸಕ್ಕೆ ತೆರಳಿದ್ದರು. ಸೋಮವಾರ ಅಂದರೆ ಜು.31ರಂದು ಮತ್ತೆ ಸೇವೆಗೆ ಹಾಜರಾಗಬೇಕಿತ್ತು. ಈ ನಡುವೆ ಜು.29ರ ಶನಿವಾರದಂದು ಸಂಜೆ 6.30ರ ಸಂದರ್ಭದಲ್ಲಿ ಮನೆಗೆ ಕೆಲ ವಸ್ತುಗಳನ್ನು ತರಲೆಂದು ತಮ್ಮ ಆಲ್ಟೋ ಕಾರ್‌ನಲ್ಲಿ ಮಾರ್ಕೆಟ್‌ಗೆ ತೆರಳಿದ್ದಾರೆ.

Advertisement

ರಾತ್ರಿ 9.30ರ ಸಮಯವಾದರೂ ಜಾವೇದ್‌ ಹಿಂದಿರುಗದಿದ್ದಾಗ ಕುಟುಂಬಸ್ಥರು ಅವರಿಗಾಗಿ ಹುಡುಕಾಟ ಆರಂಭಿಸಿದ್ದು, ಮಾರ್ಕೆಟ್‌ ಸಮೀಪದಲ್ಲೇ ಕಾರ್‌ ಪತ್ತೆಯಾಗಿದೆ. ಆದರೆ ಅದರಲ್ಲಿ ಜಾವೇದ್‌ ಇರಲಿಲ್ಲ, ಕಾರಿನ ಸಮೀಪದಲ್ಲಿ ರಕ್ತದ ಕಲೆಗಳು ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿ, ಕೆಲ ಶಂಕಿತರನ್ನೂ ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಉಗ್ರರು ಅಪಹರಿಸಿರುವ ಶಂಕೆ
25 ವರ್ಷದ ಸೈನಿಕನಾದ ಜಾವೇದ್‌ ಅವರನ್ನು ಭಯೋತ್ಪಾದಕರೇ ಅಪಹರಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಸೇನೆ ಕೂಡ ಈ ಸಂಬಂಧಿಸಿದಂತೆ ತನಿಖೆಗೆ ಮುಂದಾಗಿದೆ.ಜಾವೇದ್‌ಗಾಗಿ ಶೋಧ ಕಾರ್ಯಾಚರಣೆಯನ್ನೂ ಆರಂಭಿಸಿದೆ. ಇತ್ತ ಕುಟುಂಬಸ್ಥರು ಕೂಡ ಮಗನನ್ನು ಬಿಡುವಂತೆ ಉಗ್ರರ ಬಳಿ ಮನವಿ ಮಾಡಿ, ವಿಡಿಯೊ ಒಂದನ್ನು ಮಾಡಿದ್ದಾರೆ. ಅದರಲ್ಲಿ ಜಾವೇದ್‌ ಅವರ ತಾಯಿ “ನನ್ನ ಮಗನನ್ನು ಬಿಟ್ಟುಬಿಡಿ, ಕ್ಷಮಿಸಿಬಿಡಿ. ಮತ್ತೆ ಅವನೆಂದಿಗೂ ಸೇನೆಯಲ್ಲಿ ಕಾರ್ಯನಿರ್ವಹಿಸಲು ನಾನು ಬಿಡುವುದಿಲ್ಲ, ಅವನನ್ನು ಬಿಡುಗಡೆಗೊಳಿಸಿ’ ಎಂದು ಅಲವತ್ತುಕೊಂಡಿದ್ದಾರೆ.

ಬುದ್ಧದೇವ ಆರೋಗ್ಯದಲ್ಲಿ ತುಸು ಸುಧಾರಣೆ
ಕೋಲ್ಕತ: ಇಲ್ಲಿನ ವುಡ್‌ಲ್ಯಾಂಡ್ಸ್‌ ಆಸ್ಪತ್ರೆಗೆ ದಾಖಲಾಗಿರುವ ಪ.ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಆರೋಗ್ಯದಲ್ಲಿ ತುಸು ಸುಧಾರಣೆ ಕಂಡುಬಂದಿದೆ. ಭಾನುವಾರ ಬೆಳಗ್ಗೆ ಅವರ ಆರೋಗ್ಯ ವಿಷಮಿಸಿದ್ದರೂ ನಂತರ ಚೇತರಿಸಿಕೊಂಡಿದ್ದಾರೆ. ಆದರೆ ಅಪಾಯದಿಂದ ಪಾರಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವರು ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು. ಶರೀರದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿತ್ತು. ರಕ್ತದಲ್ಲಿನ ಆಮ್ಲಜನಕಪೂರಿತ ಹಿಮೋಗ್ಲೋಬಿನ್‌ ಕುಸಿದಿದ್ದರಿಂದ ಪರಿಸ್ಥಿತಿ ವಿಷಮವಾಗಿಯೇ ಇತ್ತು. ಈ ಪ್ರಮಾಣ ಜಾಸ್ತಿಯಾದ ಮೇಲೆ ಸುಧಾರಿಸಿಕೊಂಡರು, ಅನಂತರ ರಕ್ತದೊತ್ತಡ ಸುಧಾರಿಸಿತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಆದರೆ ಇನ್ನೂ ಅಪಾಯ ಇದೆ. ವೈದ್ಯರು ಅವರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next