Advertisement

ಉಗ್ರರ ವಿರುದ್ಧ ಹೋರಾಡಿದ ಮಹೇಶ್‌ ಚೇತರಿಕೆ

11:30 AM Jul 02, 2019 | keerthan |

ಮಡಿಕೇರಿ: ಕಿರಿಯ ವಯಸ್ಸಿನಲ್ಲೇ ಶೌರ್ಯ ಚಕ್ರ ಪ್ರಶಸ್ತಿ ಪಡೆದ ಸಾಧನೆ ಮಾಡಿ ರುವ ಕೊಡಗಿನ ವೀರಯೋಧ ಎಚ್‌.ಎನ್‌. ಮಹೇಶ್‌ ಅವರು ಉಗ್ರರ ವಿರುದ್ಧ ನಡೆದ ಮತ್ತೂಂದು ಸಮರದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಗೆದ್ದು ಬಂದಿದ್ದಾರೆ. ಉಗ್ರರ ಗುಂಡೇಟಿನಿಂದ ಗಾಯಗೊಂಡಿದ್ದ ಅವರು ಇದೀಗ ಚೇತರಿಸಿಕೊಂಡಿದ್ದಾರೆ.

Advertisement

ರಜೆಯ ಮೇಲೆ ಊರಿಗೆ ಬಂದಿದ್ದ ಮಹೇಶ್‌ ಮೇ 15ರಂದು ಕರ್ತವ್ಯಕ್ಕೆ ಮರಳಿದ್ದರು. ಮೇ 29ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಉಗ್ರರು ಅಡಗಿರುವ ಮಾಹಿತಿ ಆಧರಿಸಿ ಉಗ್ರರ ವಿರುದ್ಧದ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಉಗ್ರರು ಹಾರಿಸಿದ ಗುಂಡು ಮಹೇಶ್‌ ಅವರ ತಲೆಗೆ ಬಿದ್ದಿತ್ತು. ಆದರೂ ಹಿಂಜರಿಯದ ಮಹೇಶ್‌ ಉಗ್ರರತ್ತ ನಿರಂತರವಾಗಿ ಗುಂಡು ಹಾರಿಸಿದ್ದರು. ಆದರೆ ಇವರೊಂದಿಗಿದ್ದ ಇತರ ಸೈನಿಕರು ಮಹೇಶ್‌ ಅವರನ್ನು ಹಿಂದಕ್ಕೆ ಎಳೆದುಕೊಂಡು ಉಗ್ರರನ್ನು ಬಾಂಬ್‌ ಸ್ಫೋಟಿಸಿ ಕೊಂದುಹಾಕಿದ್ದರು.

ಕಿವಿ ಹೊಕ್ಕ ಗುಂಡು ಮೂಗಿನಿಂದ ಹೊರಕ್ಕೆ!
ಉಗ್ರರು ಹಾರಿಸಿದ್ದ ಗುಂಡು ಬಲಭಾಗದ ಕಿವಿಯ ಹತ್ತಿರ ಒಳಹೊಕ್ಕು ದವಡೆಯ ಮೂಳೆಯನ್ನು ಸೀಳಿಕೊಂಡು ಮೂಗಿನ ಭಾಗದಿಂದ ಹೊರಬಂದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಹೇಶ್‌ ಕೋಮಾಗೆ ಜಾರಿದ್ದರು. ಅವರಿಗೆ ಚಂಡೀಗಢದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುಂಡೇಟಿನಿಂದ ಗಾಯವಾಗಿರುವ ಮುಖದ ಭಾಗಕ್ಕೆ 50 ಹೊಲಿಗೆ ಹಾಕಲಾಗಿದೆ. ಹಲವು ದಿನಗಳ ಚಿಕಿತ್ಸೆಯ ಬಳಿಕ ಅವರು ಚೇತರಿಸಿಕೊಂಡಿದ್ದಾರೆ.

ಈ ಹಿಂದೆಯೂ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಮಹೇಶ್‌ ಇಲ್ಲಿ ವರೆಗೆ ಒಟ್ಟು 8 ಮಂದಿ ಉಗ್ರರನ್ನು ಕೊಂದಿದ್ದಾರೆ. 2018ರ ಆಗಸ್ಟ್‌ನಲ್ಲಿ ಶೋಪಿಯಾನ್‌ ಜಿಲ್ಲೆ ಯಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಯಲ್ಲಿ ಲಷ್ಕರ್‌-ಎ-ತೋಯ್ಬಾದ ಇಬ್ಬರು ಉಗ್ರರನ್ನು ಕೊಂದದ್ದಲ್ಲದೇ ಮತ್ತೋರ್ವನನ್ನು ಗಂಭೀರವಾಗಿ ಗಾಯಗೊಳಿಸಿದ್ದರು. ಭಯೋತ್ಪಾದಕರ ವಿರುದ್ಧ ನಡೆಸಲಾದ ಎನ್‌ಕೌಂಟರ್‌ಗಳಲ್ಲಿ ದೇಶಭಕ್ತಿ ಮತ್ತು ಅಪ್ರತಿಮ ಸಾಹಸ ಪ್ರದರ್ಶಿಸಿರುವ ಮಹೇಶ್‌ಗೆ ರಾಷ್ಟ್ರಪತಿಗಳು ಶೌರ್ಯಚಕ್ರ ನೀಡಿ ಗೌರವಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next