ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಬೆಳಗಾವಿಯ ಯೋಧ ಹುತಾತ್ಮನಾಗಿದ್ದಾನೆ.
ತಾಲೂಕಿನ ಉಚಗಾಂವ ಗ್ರಾಮದ ರಾಹುಲ್ ಭೈರು ಸುಳಗೇಕರ (22) ಎಂಬ ಯೋಧ ವೀರ ಮರಣವನ್ನಪ್ಪಿದ್ದಾರೆ.
ಶುಕ್ರವಾರ ಮುಂಜಾನೆ ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್ ನಲ್ಲಿ ಪಾಕಿಸ್ಥಾನ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಪಾಕಿಸ್ಥಾನಿ ಯೋಧರ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿತ್ತು.
ನಾಲ್ಕು ವರ್ಷಗಳ ಹಿಂದೆಯೇ ಭಾರತೀಯ ಸೈನ್ಯ ಸೇರಿದ್ದ ರಾಹುಲ್, ಗಣೇಶ ಉತ್ಸವ ವೇಳೆ ರಜೆ ಪಡೆದು ತವರಿಗೆ ಬಂದಿದ್ದರು.
ಜಮ್ಮುವಿನ ಪುಂಚ್ ಬಳಿ ಭಯೋತ್ಪಾದಕರೊಂದಿಗೆ ಸೆಣಸಾಡುವಾಗ ಗುಂಡು ತಗುಲಿ ಹುತಾತ್ಮನಾಗಿದ್ದಾನೆ. ರಾಹುಲ್ ನ ಹಿರಿಯ ಸಹೋದರ ಮಯೂರ ಕೂಡ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಹುಲ್‌ನ ತಂದೆ ಭೈರು ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತನ್ನ ಇಬ್ಬರೂ ಮಕ್ಕಳನ್ನೂ ಸೇನೆಗೆ ಸೇರಿಸುವ ಮೂಲಕ ತಂದೆ ಭೈರು ಸುಳಗೇಕರ ದೇಶಾಭಿಮಾನ ಮೆರೆದಿದ್ದಾರೆ.
ಉಚಗಾಂವ ಗ್ರಾಮದಲ್ಲಿ ಹುತಾತ್ಮ ಯೋಧನ ಬರುವಿಕೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯೋಧ ಪಾರ್ಥೀವ ಶರೀರ ಶುಕ್ರವಾರ ಸಂಜೆ ಆಗಮಿಸುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.