Advertisement

2025ರಲ್ಲಿ ಅಪ್ಪಳಿಸಲಿದೆ ಸೌರ ಚಂಡಮಾರುತ?- ಅಂತರ್ಜಾಲ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ

08:51 PM Jul 12, 2023 | Team Udayavani |

ವಾಷಿಂಗ್ಟನ್‌: 2025ರಲ್ಲಿ ಭೂಮಿಗೆ ಸೌರ ಚಂಡಮಾರುತವು ಅಪ್ಪಳಿಸಲಿದ್ದು, ಇದರಿಂದ ಅಂತರ್ಜಾಲ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಕುರಿತು ನಾಸಾ ವಿಜ್ಞಾನಿಗಳು ಇದುವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಈ ಹಿಂದೆ ಸೌರ ಚಂಡಮಾರುತ ಅಪ್ಪಳಿಸಿದ ಪರಿಣಾಮ 1859ರಲ್ಲಿ ಟೆಲಿಗ್ರಾಫ್ ಕೇಬಲ್‌ಗ‌ಳಲ್ಲಿ ಕಿಡಿ ಕಾಣಿಸಿತು. 1989ರಲ್ಲಿ ಇದರ ಪರಿಣಾಮ ಅನೇಕ ಗಂಟೆಗಳು ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು.

Advertisement

“ಸೌರ ಚಂಡಮಾರುತದ ತೀವ್ರ ಪರಿಸ್ಥಿತಿಯನ್ನು ನಾವು ಅನುಭವಿಸಿಲ್ಲ ಹಾಗೂ ಇದಕ್ಕೆ ನಮ್ಮ ಮೂಲಸೌಕರ್ಯ ವ್ಯವಸ್ಥೆಯು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ತಿಳಿದಿಲ್ಲ. ನಮ್ಮ ವೈಫ‌ಲ್ಯ ಪರೀಕ್ಷೆಯು ಸಹ ಅಂತಹ ಸನ್ನಿವೇಶಗಳನ್ನು ಒಳಗೊಂಡಿಲ್ಲ’ ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್‌ ಪ್ರಾಧ್ಯಾಪಕಿ ಸಂಗೀತಾ ಅಬ್ದು ಜ್ಯೋತಿ ಹೇಳಿದ್ದಾರೆ.

“ತೀವ್ರ ಸೌರ ಚಂಡಮಾರುತವು ದೂರ ಸಂಪರ್ಕಕ್ಕೆ ಅಡ್ಡಿಪಡಿಸಬಹುದಾದ ಸಾಗರದೊಳಗಿನ ಸಂವಹನ ಕೇಬಲ್‌ಗ‌ಳಂತಹ ದೊಡ್ಡ ಪ್ರಮಾಣದ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರಿಂದ ಅಂತರ್ಜಾಲ ವ್ಯವಸ್ಥೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆಯಿದೆ’ ಎಂದು ತಿಳಿಸಿದ್ದಾರೆ.

ಕೆಲವು ತಿಂಗಳ ಕಾಲ ಅಂತರ್ಜಾಲ ಇಲ್ಲದೇ ವ್ಯವಸ್ಥೆ ಅಲ್ಲೋಲ-ಕಲ್ಲೋಲ ಆಗಲಿದೆ. ಉದಾಹರಣೆಗೆ, ಒಂದು ದಿನ ಅಮೆರಿಕದಲ್ಲಿ ಅಂತರ್ಜಾಲ ಇಲ್ಲದಿದ್ದರೆ 1,100 ಕೋಟಿ ಡಾಲರ್‌ ನಷ್ಟವಾಗಲಿದೆ. ಸೌರ ಚಂಡಮಾರುತದಿಂದ ಆರ್ಥಿಕತೆ ಮೇಲೆ ಹೊಡೆತ ಬೀಳಲಿದೆ ಎನ್ನಲಾಗಿದೆ.

ಭೂಮಿಯೊಳಗಿನ ತಾಪಮಾನ ಹೆಚ್ಚಳ
ಭೂಮಿಯಾಳದಲ್ಲಿ ತಾಪಮಾನ ದಿನೇದಿನೆ ಹೆಚ್ಚುತ್ತಿದ್ದು, ಇದರಿಂದ ದೊಡ್ಡ ಅಪಾರ್ಟ್‌ಮೆಂಟ್‌ಗಳು, ಕಚೇರಿಗಳು ಸೇರಿದಂತೆ ಹೆಚ್ಚಿನ ಅಂತಸ್ತು ಹೊಂದಿರುವ ದೊಡ್ಡ ಕಟ್ಟಡಗಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸಂಶೋಧಕರ ಪ್ರಕಾರ, ಪ್ರಪಂಚದಾದ್ಯಂತ ನಗರ ಪ್ರದೇಶಗಳಲ್ಲಿ ದೊಡ್ಡ ಕಟ್ಟಡಗಳಿಂದ ಹಾಗೂ ಸುರಂಗ ಮಾರ್ಗದ ಸಾರಿಗೆಯಿಂದ ಹೊರಸೂಸುವ ಬಿಸಿ ತಾಪದ ಪರಿಣಾಮ, ಪ್ರತಿ ದಶಕದಲ್ಲಿ ಭೂಮಿಯ ತಾಪಮಾನ 0.1ರಿಂದ 2.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗುತ್ತಿದೆ. ತಾಪಮಾನ ಹೆಚ್ಚಳವನ್ನು ತಡೆದುಕೊಳ್ಳುವ ರೀತಿಯಲ್ಲಿ ದೊಡ್ಡ ಕಟ್ಟಡಗಳನ್ನು ನಿರ್ಮಿಸಿಲ್ಲ. ಹೀಗಾಗಿ ಕಟ್ಟಡದ ತಳಪಾಯದ ಮೇಲೆ ಪರಿಣಾಮ ಹಾಗೂ ಕೆಲವೊಮ್ಮೆ ಗೋಡೆಗಳಲ್ಲಿ ಬಿರುಕು ಕಾಣಿಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next