ಬೆಂಗಳೂರು: ಸಂಜಯ ನಗರದ ಉದ್ಯಮಿಯೊಬ್ಬ ರಿಗೆ ಸೋಲಾರ್ ಪ್ಲಾಂಟ್ ಅಳವಡಿಸುವುದಾಗಿ ನಂಬಿಸಿ 4.11 ಕೋಟಿ ರೂ. ವಂಚಿಸಿದ್ದ ಆರೋಪಿ ಯು ಸಂಜಯ್‌ನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪ್ರಮೋದ್ ಪ್ರಕಾಶ್ ಬಂಧಿತ. ಜೆಮಿನಿ ಡೈಯಿಂಗ್ ಆ್ಯಂಡ್ ಪ್ರಿಂಟಿಂಗ್ ಮಿಲ್ಸ್ ಪ್ರೈವೇಟ್ ಲಿ. ಮಾಲೀಕ ಗುಲ್ಲು ತಲರೇಜಾ (70) ವಂಚನೆ ಗೊಳಗಾದವರು.
ಗುಲ್ಲು ತಲರೇಜಾ ಗೊರಗುಂಟೆ ಪಾಳ್ಯ ಬಳಿ ಇರುವ ತಮ್ಮ ಕಂಪನಿಗೆ ಸೋಲಾರ್ ಪ್ಲಾಂಟ್ ಮಾಡಿಸಲು ಮುಂದಾಗಿದ್ದರು. ಈ ವೇಳೆ ಸಮೃದ್ಧಿ ರಿನವಬೇಲ್ ಸಲ್ಯೂಷನ್ ಪ್ರೈವೇಟ್ ಲಿ.ಮಾಲೀಕ ಪ್ರಮೋದ್ ಪ್ರಕಾಶ್ ಪರಿಚಯವಾಗಿದ್ದ. ಉದ್ಯಮಿಗೆ ನಕಲಿ ದಾಖಲೆ ತೋರಿಸಿದ್ದ ಪ್ರಮೋದ್ ಪ್ರಕಾಶ್ ಸೋಲಾರ ಪ್ಲಾಂಟ್ ಅಳವಡಿಸುವುದಾಗಿ ಹೇಳಿದ್ದ. ಪ್ರಾಜೆಕ್ಟ್ ಬೇಗ ಮುಗಿಸಿಕೊಡಲು ಹಂತ-ಹಂತವಾಗಿ 4.11 ಕೋಟಿ ರೂ.ಪಡೆದಿದ್ದ. ಹಣ ಪಡೆದರೂ ಕೆಲಸ ಪ್ರಾರಂಭಿಸಿರಲಿಲ್ಲ. ಉದ್ಯಮಿ ಗುಲ್ಲು ತಲರೇಜಾ ಪ್ರಮೋದ್ ಪ್ರಕಾಶ್‌ನನ್ನು ಸಂಪರ್ಕಿಸಿದಾಗ ಸಬೂಬು ಹೇಳಿ ತಪ್ಪಿಸಿಕೊಂಡಿದ್ದ. ಆತನ ಮೇಲೆ ಅನುಮಾನ ಬಂದು ಉದ್ಯಮಿ ಆತನ ಹಿನ್ನೆಲೆ ಪರಿಶೀಲಿಸಿದಾಗ ಆರೋಪಿ ವಂಚನೆ ಬೆಳಕಿಗೆ ಬಂದಿದೆ.
ಹಣ ಹಿಂತಿರುಗಿಸುವಂತೆ ಕೇಳಿದರೆ ಆರೋಪಿ ಬೆದರಿಸುತ್ತಿದ್ದ. ಇತ್ತ ಉದ್ಯಮಿ ಸಂಜಯನಗರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಇದೀಗ ಪೊಲೀಸರು ಆರೋಪಿ ಪ್ರಮೋದ್‌ನನ್ನು ಬಂಧಿಸಿದ್ದಾರೆ.
ಆರೋಪಿ ವಂಚಿಸಿದ ಹಣವನ್ನು ಚಲನಚಿತ್ರದಲ್ಲಿ ಹೂಡಿಕೆ ಮಾಡಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.