Advertisement

ಗ್ರಾಮಗಳಲ್ಲಿ ಉರಿಯದ ಸೋಲಾರ್‌ ದೀಪಗಳು

01:05 AM Feb 01, 2020 | Sriram |

ಗ್ರಾಮಾಂತರ ಪ್ರದೇಶಗಳಲ್ಲಿ ಸೋಲಾರ್‌ ದೀಪಗಳನ್ನು ಅಳವಡಿಸಿದ್ದೇನೋ ಸರಿ. ಆದರೆ ನಿರ್ವಹಣೆ ಕಾಣದೆ ಇವುಗಳು ಪ್ರಯೋಜನಕ್ಕೆ ಇಲ್ಲದಂತಾಗಿದೆ. ಇದರಿಂದ ಯೋಜನೆಯ ಮೂಲ ಆಶಯಕ್ಕೇ ಧಕ್ಕೆಯಾದಂತಾಗಿದೆ.

Advertisement

ಕುಂದಾಪುರ: ತಾಲೂಕಿನ ವಿವಿಧ ಗ್ರಾ. ಪಂ.ಗಳಲ್ಲಿ ತಾ. ಪಂಚಾಯತ್‌ ವತಿಯಿಂದ ಅಳವಡಿಸಿದ ಸೋಲಾರ್‌ ಬೀದಿ ದೀಪಗಳಲ್ಲಿ ಬಹುತೇಕ ಉರಿಯುತ್ತಿಲ್ಲ. ಐದು ವರ್ಷಗಳಿಗೆ ನಿರ್ವಹಣೆ ಗುತ್ತಿಗೆ ಪಡೆದವರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ.

ಪರಿಸರ ಸ್ನೇಹಿ
ಪರಿಸರಸ್ನೇಹಿ, ಪುನರುತ್ಪಾದಿತ ಇಂಧನಗಳ ಬಳಕೆಗಾಗಿ ಪ್ರೋತ್ಸಾಹ ನೀಡಲು ಸೋಲಾರ್‌ ಬೀದಿ ದೀಪಗಳನ್ನು ಬಳಸಲಾಗುತ್ತಿದೆ. ಗ್ರಾ.ಪಂ. ಗಳು ಬೀದಿ ದೀಪಗಳನ್ನು ತಮ್ಮ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳುತ್ತವೆ. ಜತೆಗೆ ತಾ.ಪಂ.ಕೂಡಾ ತನ್ನ ನಿಧಿಯಿಂದ ಕಳೆದ ಮೂರು ವರ್ಷಗಳಿಂದ ಎಲ್‌ಇಡಿ ಸೋಲಾರ್‌ ಬೀದಿ ದೀಪಗಳನ್ನು ವಿವಿಧ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅಳವಡಿಸುತ್ತಿದೆ.

ಅನುದಾನ
2017-18ರಲ್ಲಿ 24.8 ಲಕ್ಷ ರೂ.ಗಳನ್ನು ನೀಡಲಾಗಿದ್ದು 153 ದೀಪಗಳನ್ನು ವಿವಿಧ ಪಂಚಾಯತ್‌ ವ್ಯಾಪ್ತಿಯಲ್ಲಿ ತಾ. ಪಂ.ಸದಸ್ಯರ ಕ್ಷೇತ್ರದಲ್ಲಿ ಅಳವಡಿಸಲಾಗಿದೆ. 2018-19ರಲ್ಲಿ 11.55 ಲಕ್ಷ ರೂ.ಗಳನ್ನು 34 ಕಾಮಗಾರಿಗಳಾಗಿ 100 ಬೀದಿ ದೀಪಗಳನ್ನು ಅಳವಡಿಸಲಾಗಿದೆ. 2019-20ನೇ ಸಾಲಿನಲ್ಲಿ 11.78 ಲಕ್ಷ ರೂ. ಅನುದಾನ ಕಾದಿರಿಸಿದ್ದು 21 ಕಾಮಗಾರಿಗಳಾಗಿ ಸುಮಾರು 100 ಬೀದಿ ದೀಪಗಳ ಅಳವಡಿಕೆ ನಡೆಯಲಿದೆ.

ಟೆಂಡರ್‌ ಹಂತದಲ್ಲಿ
ಮಾರ್ಚ್‌ ಅಂತ್ಯದ ಒಳಗೆ ಈ ಸಾಲಿನ ಅನುದಾನ 11.78 ಲ. ರೂ. ಮುಗಿಯಬೇಕು. ಇಲ್ಲದೇ ಇದ್ದಲ್ಲಿ ಅನುದಾನ ಮರಳಿ ಹೋಗುತ್ತದೆ. ಆದರೆ ಈಗಷ್ಟೇ ಟೆಂಡರ್‌ ಹಂತ
ದಲ್ಲಿದ್ದು ಜ.27ರಂದು ಸಲ್ಲಿಕೆಗೆ ಕೊನೆ ದಿನವಾಗಿತ್ತು.ಫೆಬ್ರವರಿ ಮೊದಲ ವಾರದಲ್ಲಿ ಟೆಂಡರ್‌ ತೆರೆದು ನಂತರ ಕಾಮಗಾರಿಗೆ ಅನುಮೋದನೆ ನೀಡಬೇಕಾಗುತ್ತದೆ.

Advertisement

ಷರತ್ತು
ಟೆಂಡರ್‌ ಆಹ್ವಾನಿಸುವಾಗಲೇ ಎಲ್‌ಇಡಿ ಬೀದಿದೀಪ ಅಳವಡಿಕೆ, 5 ವರ್ಷಗಳ ಕಾಲ ಅದರ ನಿರ್ವಹಣೆಗಾಗಿ ಎಂದೇ ದರ ನಮೂದಿಸಲು ಸೂಚಿಸಿ ಟೆಂಡರ್‌ ಆಹ್ವಾನಿಸ ಲಾಗುತ್ತದೆ. ಬೀದಿದೀಪಗಳನ್ನು ತಾ.ಪಂ. ನಿಧಿಯಿಂದ ಅಳವಡಿಸಿ ಅದಕ್ಕೆ ತಾ.ಪಂ.ಸದಸ್ಯರ ಅನುದಾನದಿಂದ ಎಂದು ಫ‌ಲಕ ತೂಗಿಸಿ ಅದನ್ನು ಗ್ರಾ.ಪಂ.ಗಳಿಗೆ ಹಸ್ತಾಂತರಿಸಬೇಕು. ಪಂಚಾಯತ್‌ ದುರಸ್ತಿಗೆ ಹೇಳಿದಾಗ ದುರಸ್ತಿ ಮಾಡ‌ಬೇಕಾದ ಹೊಣೆ ಗುತ್ತಿಗೆ ಸಂಸ್ಥೆಯದ್ದಾಗಿದೆ.

ಬದಲಾದ ವಿನ್ಯಾಸ
ಕೆಲವು ವರ್ಷಗಳ ಮೊದಲು ಅಳವಡಿಸುತ್ತಿದ್ದ ಬೀದಿದೀಪಗಳಲ್ಲಿ ಬ್ಯಾಟರಿ ಕಳವು ದೊಡ್ಡ ಸಮಸ್ಯೆಯಾಗಿತ್ತು. ರಾತೋರಾತ್ರಿ ಕಳ್ಳರು ಬೀದಿದೀಪಗಳ ಬ್ಯಾಟರಿಗಳನ್ನು ಸಾರಾಸಗಟಾಗಿ ಕದಿಯುತ್ತಿದ್ದರು. ಪೊಲೀಸ್‌ ಠಾಣೆಗಳಲ್ಲೂ ಪ್ರಕರಣ ದಾಖಲಾಗಿತ್ತು. ಆದರೆ ಈಗ ವಿನ್ಯಾಸ ಬದಲಾಗಿದ್ದು ಬ್ಯಾಟರಿಯನ್ನು ಪ್ಯಾನೆಲ್‌ನ ಅಡಿಭಾಗದಲ್ಲಿ ಅಳವಡಿಸಿ ಸುಲಭದಲ್ಲಿ ಕೈಗೆ ಎಟುಕದಂತೆ ಇರಿಸಲಾಗುತ್ತಿದೆ.

ಸ್ಪಂದನೆ ಇಲ್ಲ
ತಾ. ಪಂ. ಸದಸ್ಯರು ಸೋಲಾರ್‌ ಬೀದಿದೀಪ ಉರಿಯುತ್ತಿಲ್ಲ ಎಂದು ದೂರುತ್ತಿದ್ದಾರೆ. ಟೆಂಡರ್‌ ವಹಿಸಿಕೊಂಡವರು ದೂರಿಗೆ ಸ್ಪಂದಿಸುವುದಿಲ್ಲ ಎಂದು ಆರೋಪಿಸುತ್ತಾರೆ. ತಾ.ಪಂ. ಸಾಮಾನ್ಯ ಸಭೆಯಲ್ಲಿ ವಿವಿಧ ಸದಸ್ಯರ ಚರ್ಚೆಯಂತೆ ಈ ಕುರಿತು ನಿರ್ಣಯ ಕೂಡ ಆಗಿವೆ. ತಾ.ಪಂ. ವತಿಯಿಂದ ಅಳವಡಿಸಿದ ಕುರಿತಾಗಿ ದೂರುಗಳಿಲ್ಲ. ಅದಕ್ಕೂ ಮೊದಲು ಗ್ರಾ.ಪಂ.ಗಳು ತಮ್ಮ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಗುತ್ತಿಗೆಮೊತ್ತದಲ್ಲಿ ಕಾಮಗಾರಿಗಳನ್ನು ನಡೆಸಿವೆ. ಅವುಗಳ ಕುರಿತಾಗಿ ದೂರುಗಳಿವೆ ಎಂದು ಸ್ಪಷ್ಟನೆ ನೀಡುತ್ತಾರೆ ಅಧಿಕಾರಿಗಳು.

ಕಪ್ಪು ಪಟ್ಟಿಗೆ ಸೇರ್ಪಡೆ
ಟೆಂಡರ್‌ ನಿಯಮದ ಪ್ರಕಾರ 5 ವರ್ಷ ನಿರ್ವಹಣೆ ಮಾಡಬೇಕಾಗುತ್ತದೆ. ನಿರ್ವಹಣೆಗೆ ವಿಫ‌ಲವಾದ ಸಂಸ್ಥೆಯ ಕುರಿತು ತಾ.ಪಂ. ಜಿ.ಪಂ.ಗೆ ದೂರು ನೀಡಿದರೆ, ಪತ್ರ ಬರೆದರೆ ಅಂತಹ ಸಂಸ್ಥೆ ಕಪ್ಪುಪಟ್ಟಿಗೆ ಸೇರುತ್ತದೆ. ಬಳಿಕ ರಾಜ್ಯದಲ್ಲಿ ಎಲ್ಲೂ ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆದರೆ ಅಂತಹ ದುಸ್ಸಾಹಸಕ್ಕೆ ಯಾವುದೇ ಸಂಸ್ಥೆಗಳು ಮುಂದಾಗುವುದಿಲ್ಲ. ಈ ಟೆಂಡರ್‌ ಮೂಲಕ ಇನ್ನಷ್ಟು ಟೆಂಡರ್‌ ಪಡೆದರೆ ನಿರ್ವಹಣೆ ವೆಚ್ಚ ಕಡಿಮೆಯಲ್ಲಿ ಆಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಸೋಲಾರ್‌ ಪ್ಯಾನೆಲ್‌ನ ಧೂಳು ಒರೆಸಿ, 6 ತಿಂಗಳಿಗೊಮ್ಮೆ ಬ್ಯಾಟರಿ ಸ್ಥಿತಿಗತಿ ಪರಿಶೀಲಿಸಿದರೆ ಸಾಕಾಗುತ್ತದೆ. ಐದು ವರ್ಷಗಳ ನಿರ್ವಹಣೆ ಮಾಡಲೆಂದೇ ಒಟ್ಟು ಟೆಂಡರ್‌ ಮೊತ್ತದ ಶೇ.5ರಷ್ಟನ್ನು ಇಎಂಡಿಯಾಗಿ (ಅರ್ನ್ಡ್‌ ಮನಿ ಡೆಪಾಸಿಟ್‌) ಆಗಿ ಇಟ್ಟುಕೊಳ್ಳಲಾಗುತ್ತದೆ.

ಸೋಲಾರ್‌ ದೀಪಗಳ ಅಳವಡಿಕೆ-ನಿರ್ವಹಣೆಗೆ ಗುತ್ತಿಗೆ ವಹಿಸಿಕೊಂಡವರು ಕೂಡಲೇ ಗ್ರಾಮಾಂತರ ಪ್ರದೇಶದ ದೀಪಗಳನ್ನು ಸರಿಪಡಿಸಿ ಜನಸಾಮಾನ್ಯರ ಸಮಸ್ಯೆಗೆ ಮುಕ್ತಿ ಒದಗಿಸಬೇಕಿದೆ.

ಸ್ಪಂದನೆ ಇಲ್ಲ
ಹೆಚ್ಚಿನ ಕಡೆಗಳಲ್ಲಿ ದೀಪ ಅಳವಡಿಸಿ ಏಳೆಂಟು ತಿಂಗಳು ಮಾತ್ರ ಬೆಳಕು ನೀಡಿವೆ. ನಂತರ ಗುತ್ತಿಗೆ ಪಡೆದವರು ಸ್ಪಂದಿಸುತ್ತಿಲ್ಲ. ದುರಸ್ತಿಯೂ ನಡೆಯುತ್ತಿಲ್ಲ. ತಾ.ಪಂ. ಅನುದಾನದಲ್ಲಿ ಅಳವಡಿಸಿದ ಕಾರಣ ಜನಸಾಮಾನ್ಯರಿಗೆ ಹಣಪೋಲು ಎಂಬ ಭಾವನೆ ಬರುತ್ತಿದೆ. ಗುತ್ತಿಗೆ ಪಡೆದ ಸಂಸ್ಥೆಗಳು ದೂರುಗಳಿಗೆ ಸ್ಪಂದಿಸಬೇಕು.
-ಜಗದೀಶ್‌ ದೇವಾಡಿಗ, ತಾ.ಪಂ. ಸದಸ್ಯರು

ಸೂಚಿಸಲಾಗುವುದು
ತಾ.ಪಂ. ಸದಸ್ಯರು ಈ ಕುರಿತು ಗಮನಕ್ಕೆ ತಂದಿದ್ದಾರೆ. ಟೆಂಡರ್‌ ಪಡೆದ ಸಂಸ್ಥೆಯ ಇಎಂಡಿ ನಮ್ಮ ಬಳಿಯೇ ಇರುತ್ತದೆ. ಆದ್ದರಿಂದ ನಿರ್ವಹಣೆ ಜವಾಬ್ದಾರಿ ಸಂಸ್ಥೆಯದ್ದೇ. ಈ ಕುರಿತು ಸಂಬಂಧಪಟ್ಟವರಿಗೆ ಸೂಚಿಸಲಾಗುವುದು.
-ಕೇಶವ ಶೆಟ್ಟಿಗಾರ್‌,
ಕಾರ್ಯನಿರ್ವಹಣಾಧಿಕಾರಿ, ತಾ.ಪಂ.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next