Advertisement
ಅಮಾಸೆಬೈಲಿನಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಸೋಲಾರ್ ಬೆಳಕಿನ ವ್ಯವಸ್ಥೆ ಅಳವಡಿಕೆ ಕಾರ್ಯ ಈಗಾಗಲೇ ಸಾಕಾರಗೊಂಡಿದ್ದು, ಒಟ್ಟು 2.13 ಕೋ.ರೂ. ವ್ಯಯಿಸಲಾಗಿದೆ. ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ಣಾಟಕ ಬ್ಯಾಂಕ್ ಲಿ. ಮಂಗಳೂರು, ಅಮಾಸೆಬೈಲು ಗ್ರಾ.ಪಂ., ಕರ್ನಾಟಕ ನವೀಕರಿಸಲಾಗುವ ಇಂಧನ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲಾಡಳಿತ ಮತ್ತು ಸೆಲ್ಕೋ ಸೋಲಾರ್ ಲೈಟ್ ಪ್ರೈ.ಲಿ. ಸಹಭಾಗಿತ್ವದಲ್ಲಿ ಯೋಜನೆಯ ಅನುಷ್ಠಾನಗೊಂಡಿದೆ.
ಜೂ. 9ರಂದು ಬೆಳಗ್ಗೆ 10.30ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಸೆಲ್ಕೋ ಇಂಡಿಯಾದ ಅಧ್ಯಕ್ಷ ಡಾ| ಎಚ್. ಹರೀಶ್ ಹಂದೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಪಾಲ್ಗೊಳ್ಳಲಿದ್ದಾರೆ. ಸಹಭಾಗಿತ್ವ
ಅಂದಿನ ಉಡುಪಿ ಜಿಲ್ಲಾಧಿಕಾರಿ ನಕ್ಸಲ್ ಪ್ರದೇಶಾಭಿವೃದ್ಧಿಯಡಿ 25 ಲಕ್ಷ ರೂ. ಅನುದಾನ ನೀಡಿದರು. ಫಲಾನುಭವಿಗಳು 3 ಸಾವಿರ ರೂ.ಗಳಂತೆ ಭರಿಸಿದರು. ಶಾಸಕರಾಗಿದ್ದ ಗೋಪಾಲ ಪೂಜಾರಿ, ವಿ.ಪ. ಸದಸ್ಯರಾದ ಕ್ಯಾ| ಗಣೇಶ್ ಕಾರ್ಣಿಕ್, ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ತಲಾ 5 ಲಕ್ಷ ರೂ., ಸಂಸದೆ ಶೋಭಾ ಕರಂದ್ಲಾಜೆ 2 ಲಕ್ಷ ರೂ. ಅನುದಾನ ನೀಡಿದರು. ಸೆಲ್ಕೋ ಕಂಪೆನಿಯು 497 ಮನೆಗಳಿಗೆ 2 ದೀಪಗಳ ಸಂಪರ್ಕ, 1 ಸಾವಿರ ಮನೆಗಳಿಗೆ 4 ದೀಪಗಳ ಸಂಪರ್ಕ, 20 ಬೀದಿ ದೀಪಗಳನ್ನು ಅಳವಡಿಸಿತು. ಅಮಾಸೆಬೈಲು ಟ್ರಸ್ಟ್ ಮೂಲಕ 51 ಮನೆಗಳಿಗೆ, ಪೇಜಾವರ ಮಠದ ಸಹಯೋಗದಲ್ಲಿ 1 ಚರ್ಚ್, 32 ದೇವಸ್ಥಾನಗಳಿಗೆ ಉಚಿತವಾಗಿ ನೀಡಲಾಯಿತು. 750 ಮನೆಗಳಿಗೆ ಧರ್ಮಸ್ಥಳ ಯೋಜನೆ ಮೂಲಕ ಬೆಳಕು ಹರಿಸಲು ಆರ್ಥಿಕ ನೆರವು ದೊರೆಯಿತು.
Related Articles
ಎ.ಜಿ. ಕೊಡ್ಗಿ ನೇತೃತ್ವದ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ ಗ್ರಾಮವನ್ನು ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸಲು ಶ್ರಮಿಸಿದೆ. 2012ರಲ್ಲಿ ವಿದ್ಯುತ್ಛಕ್ತಿ ಕೊರತೆಯ ಗ್ರಾಮೀಣ ಪ್ರದೇಶಗಳಿಗೆ ಕೇಂದ್ರದಿಂದ ಎಂಎನ್ ಆರ್‌ಇ ಸಬ್ಸಿಡಿ ಮೂಲಕ ಸೋಲಾರ್ ದೀಪ ಹಾಕುವ ಯೋಜನೆ ಬಂತು. ಇದರ ಸದ್ಬಳಕೆಗೆ ಟ್ರಸ್ಟ್ ಮುಂದಾಯಿತು. ಕೊಡ್ಗಿಯವರು 2.13 ಕೋ.ರೂ.ಗಳ ಯೋಜನಾ ರೂಪುರೇಷೆ ತಯಾರಿಸಿ ಕ್ರೆಡೆಲ್ ಮೂಲಕ ಪ್ರಸ್ತಾವನೆ ಕಳುಹಿಸಿದರು. 2014ರಲ್ಲಿ ಕೇಂದ್ರದಿಂದ ಶೇ.30 ಮತ್ತು ರಾಜ್ಯದಿಂದ ಶೇ. 20- ಹೀಗೆ ಒಟ್ಟು ಶೇ.50 ನೆರವಿಗೆ ಅನುಮೋದನೆ ದೊರೆಯಿತು. 2016ರಲ್ಲಿ ಅನುಷ್ಠಾನಕ್ಕೆ ಸಿದ್ಧವಾಗಿ 2017ರಲ್ಲಿ ಪೂರ್ಣಗೊಂಡು ಉದ್ಘಾ ಟನೆಯಾಯಿತು.
Advertisement