Advertisement

ಸೋಲಾರ್‌ ದೀಪ ಬ್ಯಾಟರಿ ಕಳ್ಳರ ಜಾಲ ಸಕ್ರಿಯ

11:09 AM Feb 24, 2018 | |

ಕಡಬ: ಪುತ್ತೂರು ತಾಲೂಕಿನಾದ್ಯಂತ ಗ್ರಾ.ಪಂ.ಗಳು ಅಳವಡಿಸಿದ ಸೋಲಾರ್‌ ಬೀದಿ ದೀಪಗಳ ಬ್ಯಾಟರಿಗಳನ್ನು ಕದ್ದೊಯ್ಯುವ ಜಾಲ ಸಕ್ರಿಯವಾಗಿದ್ದು, ಸ್ಥಳೀಯಾಡಳಿತ ಹಾಗೂ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಒಂದೇ ದಿನ 30 ಬ್ಯಾಟರಿ ಎಗರಿಸಿದರು!
ಬಹಳ ಹಿಂದಿನಿಂದಲೂ ರಸ್ತೆಯ ಪಕ್ಕದಲ್ಲಿ ಹಾಗೂ ಪೆಟ್ರೋಲ್‌ ಪಂಪ್‌ಗ್ಳ ಬಳಿ ಪಾರ್ಕ್‌ ಮಾಡಿದ್ದ ವಾಹನಗಳಿಂದ ಬ್ಯಾಟರಿಗಳನ್ನು ಎಗರಿಸುತ್ತಿದ್ದ ಕಳ್ಳರ ಜಾಲ ಇದೀಗ ರಸ್ತೆ ಬದಿಯಲ್ಲಿ ಅಳವಡಿಸಿದ ಸೋಲಾರ್‌ ಬೀದಿ ದೀಪಗಳತ್ತ ಹೊರಳಿದೆ. ಪುತ್ತೂರು ತಾಲೂಕಿನ ಪೆರಾಬೆ, ಆಲಂಕಾರು, ಕುಟ್ರಾಪ್ಪಾಡಿ ಹಾಗೂ ನೆಲ್ಯಾಡಿ ಗ್ರಾಮ ಪಂಚಾಯತ್‌ಗಳು ಅಳವಡಿಸಿದ್ದ ಸೋಲಾರ್‌ ಬೀದಿದೀಪಗಳ 30ಕ್ಕೂ ಹೆಚ್ಚು ಬ್ಯಾಟರಿಗಳನ್ನು ಫೆ. 16ರಂದು ರಾತ್ರಿ ಕದ್ದೊಯ್ದಿದ್ದಾರೆ. ಅದೇ ದಿನ ಕಡಬ ಹಳೇ ಸ್ಟೇಶನ್‌ ಬಳಿಯ ಪೆಟ್ರೋಲ್‌ ಪಂಪ್‌ನ ವಠಾರದಲ್ಲಿ ಇರಿಸಲಾಗಿದ್ದ 2 ಟಿಪ್ಪರ್‌ಗಳಿಂದಲೂ ಬ್ಯಾಟರಿ ಕಳವಾಗಿದೆ.

ಕೆಲವು ಕಡೆ ಕಳ್ಳರು ಸೋಲಾರ್‌ ಪ್ಯಾನಲ್‌ ಗಳನ್ನೂ ಕಳಚಿ ಕೊಂಡೊಯ್ದಿದ್ದಾರೆ. ಪ್ರತೀ ಬ್ಯಾಟರಿ ಅಂದಾಜು 15 ಸಾವಿರ ರೂ. ಬೆಲೆಬಾಳುತ್ತಿದ್ದು, ಒಂದೇ ದಿನ ಸುಮಾರು 5 ಲಕ್ಷ ರೂ. ಮೌಲ್ಯದ ಸೊತ್ತು ಕಳ್ಳರ ಪಾಲಾಗಿದೆ. ಕಳೆದ ಕೆಲ ತಿಂಗಳ ಅವಧಿಯಲ್ಲಿ ಪುತ್ತೂರು ತಾಲೂಕಿನ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಬ್ಯಾಟರಿಗಳು ಕಳವಾಗಿವೆ. ಆದರೆ ಪೊಲೀಸ್‌ ಠಾಣೆಯ ತನಕ ತಲುಪದ ಬ್ಯಾಟರಿ ಕಳ್ಳತನದ ಪ್ರಕರಣಗಳು ಇನ್ನಷ್ಟು ಇರಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ವಾಹನಗಳ ಬ್ಯಾಟರಿಯೂ ಕಳವು
ಸೋಲಾರ್‌ ಬೀದಿ ದೀಪಗಳಿಂದ ಮತ್ತು ವಾಹನಗಳಿಂದ ಬ್ಯಾಟರಿಗಳನ್ನು ಕದ್ದೊಯ್ಯುವ ವ್ಯವಸ್ಥಿತ ಜಾಲ ಇದಾಗಿದ್ದು, ಹಗಲು ಹೊತ್ತಿನಲ್ಲಿ ಬಂದು ಹತ್ತಿರ ಮನೆಗಳು ಅಥವಾ ಅಂಗಡಿಗಳಿಲ್ಲದ ನಿರ್ಜನ ಪ್ರದೇಶದ ಬೀದಿ ದೀಪಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಕಾರ್ಯಾಚರಣೆಗಿಳಿವ ಒಂದೇ ತಂಡದ ಕೃತ್ಯ ಇದಾಗಿದೆ ಎನ್ನುವುದು ಪೊಲೀಸರ ಅಭಿಪ್ರಾಯ.

ಪೊಲೀಸರ ಭೀತಿ ಇಲ್ಲ
ರಾತ್ರಿ ವೇಳೆ ಕಳ್ಳರು ನಿರಾತಂಕವಾಗಿ ಬ್ಯಾಟರಿಗಳನ್ನು ಎಗರಿಸುವ ಕಳ್ಳರಿಗೆ ಪೊಲೀಸರ ಭೀತಿಯೇ ಇಲ್ಲ. ರಾತ್ರಿ ವೇಳೆ
ಸಂಚರಿಸುವ ವಾಹನಗಳನ್ನು ಠಾಣಾ ವ್ಯಾಪ್ತಿಯ ಮುಖ್ಯರಸ್ತೆಗಳಲ್ಲಿ ತಡೆದು ತಪಾಸಣೆಗೊಳಪಡಿಸುವುದು, ರಾತ್ರಿ ಗಸ್ತು ತಿರುಗುವ ಕಾರ್ಯವನ್ನು ಪೊಲೀಸರು ಸಮರ್ಪಕವಾಗಿ ಕೈಗೆತ್ತಿಕೊಂಡಲ್ಲಿ ಇಂತಹ ಕೃತ್ಯಗಳನ್ನು ತಡೆಯಬಹುದು. 

Advertisement

ಹೆಚ್ಚಿನ ಕಡೆ ಸಿ.ಸಿ.ಟಿವಿ ಕೆಮರಾಗಳನ್ನು ಅಳವಡಿಸಲಾಗಿದ್ದರೂ ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಅವುಗಳು ನಿಷ್ಕ್ರಿಯ ವಾಗಿರುವುದು ಕಳ್ಳರ ಸುಳಿವು ದೊರೆ ಯದಿರಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ರಾತ್ರಿ ಗಸ್ತು ಹಾಗೂ ವಾಹನ ತಪಾಸಣೆಯ ಕಾರ್ಯವನ್ನು ಬಿಗಿಗೊಳಿಸಿ ಕಳ್ಳತನಗಳನ್ನು ತಡೆಯುವಲ್ಲಿ ಪೊಲೀಸರು ಗಮನಹರಿಸಬೇಕಿದೆ ಎನ್ನುವುದು ಜನರ ಅಭಿಪ್ರಾಯ.

ಶೀಘ್ರ ಬಂಧಿಸುತ್ತೇವೆ
ಬ್ಯಾಟರಿ ಕಳ್ಳತನಕ್ಕೆ ಸಂಬಂಧಿಸಿ ಪುತ್ತೂರು ಉಪ ವಿಭಾಗದ ವ್ಯಾಪ್ತಿಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಬ್ಯಾಟರಿ ಕಳ್ಳರ ಜಾಲವನ್ನು ಭೇದಿಸುವ ನಿಟ್ಟಿನಲ್ಲಿ ತನಿಖೆ ಕೈಗೆತ್ತಿಕೊಂಡು ಶಂಕಿತ ವ್ಯಕ್ತಿಗಳ ಬಗ್ಗೆ ನಿಗಾ ಇರಿಸಲಾಗಿದೆ. ಕೆಲವು ಸುಳಿವುಗಳು ದೊರೆತಿದ್ದು, ತನಿಖೆ ಪ್ರಗತಿಯಲ್ಲಿದೆ. ಶೀಘ್ರ ಬಂಧಿಸುವ ವಿಶ್ವಾಸ ನಮಗಿದೆ.
– ಶ್ರೀನಿವಾಸ್‌ ಡಿ.ಎಸ್‌.,
ಡಿವೈಎಸ್ಪಿ, ಪುತ್ತೂರು

ಪ್ರತ್ಯೇಕ ಬ್ಯಾಟರಿ ಇನ್ನಿಲ್ಲ
ಗ್ರಾ.ಪಂ.ಗಳು ಅಳವಡಿಸಿದ ಸೋಲಾರ್‌ ಬೀದಿ ದೀಪಗಳ ಬ್ಯಾಟರಿಗಳನ್ನು ಕಳ್ಳರು ಕದ್ದೊಯ್ಯುತ್ತಿರುವ ವಿಚಾರ ನಮಗೆ ತಲೆನೋವಾಗಿ ಪರಿಣಮಿಸಿದೆ. ಈ ಕುರಿತು ಸಂಬಂಧಪಟ್ಟ ಪೊಲೀಸ್‌ ಠಾಣೆಗಳಿಗೆ ದೂರು ನೀಡಲಾಗಿದ್ದು, ಪ್ರಕರಣಗಳು ದಾಖಲಾಗಿವೆ. ಕಳ್ಳತನವನ್ನು ತಡೆಯಲು ಮುಂದಿನ ದಿನಗಳಲ್ಲಿ ಪ್ರತ್ಯೇಕ ಬ್ಯಾಟರಿಯ ಬದಲು ಸೋಲಾರ್‌ ಪ್ಯಾನಲ್‌ಗೇ ಅಳವಡಿಸುವ ಬ್ಯಾಟರಿಗಳನ್ನು ಬೀದಿದೀಪಗಳಿಗೆ ಬಳಸಲು ಪಂಚಾಯತ್‌ಗಳಿಗೆ ಸೂಚಿಸಲಾಗಿದೆ.
– ಜಗದೀಶ್‌, ತಾ.ಪಂ., ಕಾರ್ಯ
ನಿರ್ವಹಣಾಧಿಕಾರಿ, ಪುತ್ತೂರು

ನಾಗರಾಜ್‌ ಎನ್‌.ಕೆ 

Advertisement

Udayavani is now on Telegram. Click here to join our channel and stay updated with the latest news.

Next