ಕೆಜಿಎಫ್: ಚೆಕ್ ಡ್ಯಾಂ ನಾಶಪಡಿಸಿ, ಸರ್ಕಾರಿ ಜಮೀನು ಒತ್ತುವರಿ ಮಾಡಿ ಕೊಂಡಿರುವ ಖಾಸಗಿ ಸೋಲಾರ್ ಕಂಪನಿ ಮತ್ತು ಅವರಿಗೆ ನಕಲಿ ದಾಖಲೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಕಾರ್ಯಕರ್ತರು ಕ್ಯಾಸಂಬಳ್ಳಿಯಲ್ಲಿ ಪ್ರತಿಭಟಿಸಿದರು.
ಖಾಸಗಿ ಕಂಪನಿಯು ಚೆಕ್ ಡ್ಯಾಂ ನಾಶ ಮಾಡುವ ಜೊತೆಗೆ 50 ಎಕರೆಗೂ ಹೆಚ್ಚು ಸರ್ಕಾರಿ ಗೋಮಾಳ, ಗುಂಡು ತೋಪು, ಕೆರೆ ಅಂಗಳ, ರಾಜಕಾಲುವೆ ಗಳನ್ನು ಒತ್ತುವರಿ ಮಾಡಿಕೊಂಡಿದೆ. ಈ ಕಂಪನಿಗೆ ಕಂದಾಯ ಇಲಾಖೆಯ ಸಿಬ್ಬಂದಿ, ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಕೂಡಲೇ ಸರ್ಕಾರಿ ಜಮೀ ನನ್ನು ವಶಪಡಿಸಿಕೊಂಡು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾ ದಲ್ಲಿ ಮುಂದಿನ ಸೋಮವಾರ ದಿಂದ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ. ನಾರಾಯಣಗೌಡ ಎಚ್ಚರಿಕೆ ನೀಡಿದರು.
ತುದಿಗಾಲಲ್ಲಿ ನಿಂತಿದ್ದಾರೆ: ಜನ ಸಾಮಾನ್ಯರ ಮತ್ತು ಸರ್ಕಾರಿ ಅಭಿವೃದ್ಧಿ ಕಾರ್ಯಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳ ಬಳಿ ವರ್ಷಾನುಗಟ್ಟಲೆ ಹುಡುಕಾಡಿದರೂ ಅಂಗೈ ಅಗಲ ಜಾಗ ಸಿಗುವುದಿಲ್ಲ. ಆದರೆ, ರಿಯಲ್ ಎಸ್ಟೇಟ್ ಮತ್ತು ಖಾಸಗಿ ಸೋಲಾರ್ ಕಂಪನಿಗೆ ಸ್ಥಾಪನೆ ಮಾಡಲು ರಾತ್ರೋ ರಾತ್ರಿ ಕೆರೆ, ಗೋಮಾಳ, ಗುಂಡು ತೋಪು, ರಾಜ ಕಾಲುವೆ, ಹೀಗೆ ನೂರಾರು ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ, ಅನುಮತಿ ನೀಡಲು ಕ್ಯಾಸಂಬಳ್ಳಿ ನಾಡ ಕಚೇರಿಯ ಕಂದಾಯ ಅಧಿಕಾರಿಗಳು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಆರೋಪಿಸಿದರು.
ಭೂ ಅತಿಕ್ರಮ: ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಮಳೆ ನೀರು ಸಂಗ್ರಹಿಸಲು ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುತ್ತಿದ್ದರೆ, ಅದನ್ನೂ ರಿಯಲ್ ಎಸ್ಟೇಟ್ ಉದ್ದಿಮೆ ಗಳು ನಾಶಮಾಡುತ್ತಿದ್ದಾರೆ. ಅದರಜೊತೆಗೆ ಸಾವಿರಾರು ಜಾನುವಾರುಗಳು ಹೊಂದಿರುವ ಕ್ಯಾಸಂಬಳ್ಳಿ ವ್ಯಾಪ್ತಿಯ ಕುರಿ ಮೇಯಿಸಲು ಸರ್ಕಾರಿ ಜಮೀನು ನಿಗದಿಯಾಗಿಲ್ಲ. ಆದರೆ, ಖಾಜಿಮಿಟ್ಟಹಳ್ಳಿ ಹಾಗೂ ಕೋಗಿಲಹಳ್ಳಿ ವ್ಯಾಪ್ತಿಯಲ್ಲಿ ಸ್ಥಾಪನೆಯಾಗುತ್ತಿರುವ ಖಾಸಗಿ ಸೋಲಾರ್ ಕಂಪನಿ, ಸರ್ಕಾರದ ಕೆರೆ, ಗುಂಡುತೋಪು, ರಾಜಕಾಲುವೆ ಒಳಗೊಂಡಂತೆ 50 ಎಕರೆಗೂ ಹೆಚ್ಚುಸರ್ಕಾರಿ ಜಮೀನು ಅತಿಕ್ರಮಿಸಿಕೊಂಡಿದೆ ಎಂದು ದೂರಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಆರ್.ಐ ನಾರಾಯಣಸ್ವಾಮಿ, ಈ ಸಂಬಂಧವಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ತಾಲೂಕು ಅಧ್ಯಕ್ಷ ಕ್ಯಾಸಂಬಳ್ಳಿ ಪ್ರತಾಪ್, ಹಸಿರು ಸೇನೆ ತಾಲೂಕು ಅಧ್ಯಕ್ಷ ವಡ್ಡಹಳ್ಳಿ ಮಂಜುನಾಥ, ಜಿಲ್ಲಾ ಉಪಾಧ್ಯಕ್ಷ ಗಣೇಶ್, ಮಂಜು, ಸುಬ್ರಮಣಿ, ರಂಜಿತ್ ಮುಂತಾದವರಿದ್ದರು.