ಉಡುಪಿ: ಮಣಿಪಾಲ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ ಸೋಲಾರ್ ಮೊಬಿಲ್ ಸೀರಿಸ್-1 ಕಾರನ್ನು ಗುರುವಾರ ಎಂಐಟಿಯ ಇನೋವೇಶನ್ ಸೆಂಟರ್ ಮುಂಭಾಗದಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಗುರುವಾರ ಉದ್ಘಾಟಿಸಿದರು.
ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ತಡೆಯುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪ್ರಾಕೃತಿಕ ಸಮಸ್ಯೆ ನಿವಾರಣೆಗೆ ಸೌರಶಕ್ತಿಯ ಬಳಕೆ ಅತ್ಯಗತ್ಯವಾಗಿದ್ದು, ಪೂರ್ಣ ಪ್ರಮಾಣದಲ್ಲಿ ಸೌರಶಕ್ತಿಯ ಬಳಕೆಯಾಗಬೇಕು. ಎಂಐಟಿ ವಿದ್ಯಾರ್ಥಿಗಳು ಹೊಸದಾಗಿ ಸೌರಶಕ್ತಿ ಚಾಲಿತ ಕಾರು ತಯಾರಿಸಿದ್ದಾರೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಂಸ್ಥೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ ಎಂದು ಡಾ| ಬಲ್ಲಾಳ್ ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಂಜೀವ ಎಂ. ಪಾಟೀಲ್ ಮಾತ ನಾಡಿ, ತಾಂತ್ರಿಕವಾಗಿ ಅನೇಕ ಸಂಶೋಧನೆಗಳು ದೇಶದ ಸಮಸ್ಯೆಗಳನ್ನು ಪರಿಹರಿಸುವ ರೀತಿಯಲ್ಲಿ ಇರಬೇಕು ಎಂದರು. ಸೋಲಾರ್ ಮೊಬಿಲ್ ಸೀರಿಸ್-1 ಕಾರ್ ತಯಾರಿಕೆಗೆ ಸಹಕರಿಸಿದ ಟಾಟಾ ಸೋಲಾರ್ ಕಂಪೆನಿಯ ನರಸಿಂಹ ಮೂರ್ತಿ, ಜಯಕುಮಾರ್, ಮಹಾದೇವ್, ರೂಸ್‌ವೆಲ್ಟ್ ಅವರನ್ನು ಗೌರವಿಸಲಾಯಿತು. ಎಂಐಟಿ ಸಹಾಯಕ ನಿರ್ದೇಶಕ ಡಾ| ಬಿಎಚ್‌ವಿ ಭಾಯಿ, ಪ್ರಾಧ್ಯಾಪಕ ಉಮಾನಂದ ಕೆ.ವಿ., ಡಾ| ಸತೀಶ್ ಶೆಣೈ, ಎಂಐಟಿ ಸ್ಟೂಡೆಂಟ್ ವೆಲ್ಫೆàರ್ ಸಹಾಯಕ ನಿರ್ದೇಶಕ ಪ್ರೊ| ಬಾಲಕೃಷ್ಣ ಮುಧ್ದೋಡಿ ಉಪಸ್ಥಿತರಿದ್ದರು. ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು ಪ್ರಸ್ತಾವನೆಗೈದು, ಸ್ವಾಗತಿಸಿದರು.
30-35 ಲ.ರೂ. ವೆಚ್ಚದ ಕಾರು
ಸೌರಶಕ್ತಿ ಚಾಲಿತ ಮೊಬಿಲ್ ಸೀರಿಸ್-1 ಕಾರನ್ನು ಎಂಐಟಿಯ ಆಟೋ ಮೊಬೈಲ್ ವಿಭಾಗದ ವಿದ್ಯಾರ್ಥಿಗಳು ಪ್ರಾಧ್ಯಾಪಕ ಉಮಾನಂದ ಅವರ ಮಾರ್ಗದರ್ಶನದಲ್ಲಿ ತಯಾರಿಸಿದ್ದಾರೆ. 4 ಮಂದಿ ಕುಳಿತುಕೊಳ್ಳುವಂತಹ ಸೋಲಾರ್ ಕಾರನ್ನು 30-35 ಲ.ರೂ. ವೆಚ್ಚದಲ್ಲಿ ತಯಾರು ಮಾಡಲಾಗಿದೆ. 6 ಗಂಟೆ ಚಾರ್ಜ್ ಮಾಡಿದರೆ 100 ಕಿ.ಮೀ. ಮೈಲೇಜ್ ನೀಡುತ್ತದೆ. 10 ಲ.ರೂ. ವಿದ್ಯಾ ಸಂಸ್ಥೆಯಿಂದ ನೀಡಿದ್ದು, ಹೆಚ್ಚಿನ ಹಣ ವಿದ್ಯಾರ್ಥಿಗಳೇ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ್ದಾರೆ.