ಸೊಲ್ಲಾಪುರ: ಸೊಲ್ಲಾಪುರದ ಮೇಯರ್, ಉಪಮೇಯರ್ ಸ್ಥಾನವನ್ನು ಮಹಿಳೆಯರಿಗೆ ನೀಡುವ ಮೂಲಕ ಇಲ್ಲಿನ ಜನತೆ ವಿಶೇಷವಾಗಿ ಮಹಿಳಾ ದಿನ ಆಚರಿಸಿದರು. ಬಿಜೆಪಿಯ ನಗರಸೇವಕಿ ಶೋಭಾ ಬನಶೆಟ್ಟಿ ಅವರು ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದ್ದು, ಶಶಿಕಲಾ ಬತ್ತುಲ ಉಪಮೇಯರ್ ಸ್ಥಾನಕ್ಕೆ ತಲಾ 49 ಮತ ಪಡೆದು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ರಣಜಿತಕುಮಾರ ತಿಳಿಸಿದರು.
ಮಾ. 8 ರಂದು ಸೊಲ್ಲಾಪುರ ಮೇಯರ್, ಉಪಮೇಯರ್ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯ ಶೋಭಾ ಬನಶೆಟ್ಟಿ ಅವರಿಗೆ 49 ಮತ, ಶಿವಸೇನೆಯ ಕುಮುದ ಅಂಕಾರಾಮ ಅವರಿಗೆ 21 ಮತ, ಕಾಂಗ್ರೆಸ್‌ನ ಪ್ರಿಯಾ ಮಾನೆ ಅವರಿಗೆ 18 ಮತಗಳನ್ನು ದೊರೆತಿದ್ದವು. 28 ಮತಗಳ ಅಂತರದಿಂದ ಬಿಜೆಪಿಯ ಶೋಭಾ ಬನಶೆಟ್ಟಿ ಮೇಯರ್ ಸ್ಥಾನ ಅಲಂಕರಿಸಿದರು.
ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಶಶಿಕಲಾ ಬತ್ತುಲ ಅವರಿಗೆ 49 ಮತ, ಶಿವಸೇನೆಯ ಅಮೋಲ ಶಿಂಧೆ ಅವರಿಗೆ 21, ಎನ್‌ಸಿಪಿಯ ಕಿಶನ್ ಜಾಧವ್‌ಅವರಿಗೆ 18 ಮತಗಳು ದೊರೆತಿದ್ದವು. 49 ಮತ ಪಡೆದ ಬಿಜೆಪಿಯ ಶಶಿಕಲಾ ಬತ್ತುಲ ಉಪಮೇಯರ್ ಸ್ಥಾನಕ್ಕೆ ಆಯ್ಕೆಯಾದರು. ಚುನಾವಣೆಯಲ್ಲಿ ಎಂಐಎಂ, ಬಿಎಸ್‌ಪಿ ಹಾಗೂ ಸಿಪಿಎಂ ಪಕ್ಷದ ಸದಸ್ಯರು ಮತದಾನ ಸಂದರ್ಭದಲ್ಲಿ ಯಾರಿಗೂ ಬೆಂಬಲ ನೀಡದೆ ತಟಸ್ಥರಾಗಿದ್ದರು.
ಮೇಯರ್ ಮತ್ತು ಉಪಮೇಯರ್ ಸ್ಥಾನ ಬಿಜೆಪಿಗೆ ದೊರೆತಿದ್ದು, ಬಿಜೆಪಿ ಮಹಿಳಾ ಕಾರ್ಯಕರ್ತರು ವಿಶೇಷವಾಗಿ ಮಹಿಳಾ ದಿನ ಆಚರಿಸಿದರು. ಶೋಭಾ ಬನಶೆಟ್ಟಿ ಲಿಂಗಾಯತ ಸಮಾಜದ ಪ್ರಥಮ ಮಹಿಳಾ ಮೇಯರ್‌ರಾಗಿ ಇತಿಹಾಸ ನಿರ್ಮಿಸಿದರು. ಅಲ್ಲದೆ ಬಿಜೆಪಿಯ ಪ್ರಥಮ ಮಹಿಳಾ ಮೇಯರ್ ಕೂಡ ಇವರಾಗಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ 49 ಸದಸ್ಯರು ಆಯ್ಕೆಯಾಗಿದ್ದರು.
ಸುಮಾರು ವರ್ಷಗಳ ನಂತರ ಮಹಾನಗರ ಪಾಲಿಕೆ ಆಡಳಿತ ಬಿಜೆಪಿಗೆ ದೊರೆತಿದೆ. ಕಾಂಗ್ರೆಸ್ ಮತ್ತು ಎನ್‌ಸಿಪಿಗೆ ಕಡಿಮೆ ಸ್ಥಾನಗಳು ದೊರೆತಿದ್ದು ವಿಪಕ್ಷ ಸ್ಥಾನವೂ ದೊರೆಯಲಿಲ್ಲ. ಶಿವಸೇನೆಯ ಮಹೇಶ ಕೋಠೆ ವಿಪಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು, ಬಿಜೆಪಿಯ ಸುರೇಶ ಪಾಟೀಲ ಸಭಾಗೃಹ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸೊಲ್ಲಾಪುರ ಮಹಾನಗರ ಪಾಲಿಕೆಗಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ 49 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿತ್ತು.
ಸೊಲ್ಲಾಪುರ ಮಹಾಗರ ಪಾಲಿಕೆಯ ಒಟ್ಟು 26 ಪ್ರಭಾಗಳಲ್ಲಿಯ 02 ಸ್ಥಾನಗಳಿಗಾಗಿ 626 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಫೆ.23 ರಂದು ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ 49 ಸ್ಥಾನ ಪಡೆದುಕೊಂಡರೆ 21-ಶಿವಸೇನಾ, 14- ಕಾಂಗ್ರೆಸ್, 04-ಎನ್‌ಸಿಪಿ, 09-ಎಂಐಂ, 04-ಬಿಎಸ್‌ಪಿ, ಸಿಪಿಎಂ-01 ಸ್ಥಾನ ಪಡೆದುಕೊಂಡಿತ್ತು. 49 ಸ್ಥಾನ ಪಡೆದುಕೊಂಡಬಿಜೆಪಿ ಮಹಾನಗರ ಪಾಲಿಕೆ ಆಡಳಿತ ಪಡೆಯಲು ಯಶಸ್ವಿಯಾಗಿದೆ.