Advertisement

ಟಾರ್ಪಾಲು ಹೊದೆಸದೇ ಲಾರಿಗಳಲ್ಲಿ ಮಣ್ಣು ಸಾಗಾಟ

01:00 AM Mar 13, 2019 | Harsha Rao |

ಕಾರ್ಕಳ: ಕೆಲವು ಮಣ್ಣು ಸಾಗಾಟದ ಲಾರಿಗಳು ಟಾರ್ಪಾಲು ಹೊದಿಸದೇ ರಸ್ತೆಗಳಲ್ಲಿ ಓಡಾಟ ನಡೆಸುತ್ತಿರುವುದರಿಂದ ಪಾದಚಾರಿಗಳಿಗೆ, ಪ್ರಮುಖವಾಗಿ ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟವನ್ನುಂಟು ಮಾಡುತ್ತಿದೆ.

Advertisement

ಮರಳು, ಮಣ್ಣು, ಕಲ್ಲು ಸಾಗಾಟದ ಲಾರಿಗಳು ಲೋಡ್‌ ಒಯ್ಯುವಾಗ ಮೇಲ್ಗಡೆಗೆ ಟಾರ್ಪಾಲು ಹಾಕಬೇಕೆನ್ನುವ ನಿಯಮವಿದ್ದರೂ ಅದು ಪಾಲನೆ ಯಾಗುತ್ತಿಲ್ಲ. ನಿಯಮವನ್ನು ಗಾಳಿಗೆ ತೂರಿ ಲಾರಿ ಚಾಲಕರು ಯಾವುದೇ ಭಯವಿಲ್ಲದೇ ನಿರಾತಂಕವಾಗಿ ಓಡಾಟ ನಡೆಸುತ್ತಿದ್ದಾರೆ. ಲಾರಿ ಚಾಲಕರ ಇಂತಹ ಬೇಕಾಬಿಟ್ಟಿ ವರ್ತನೆಯಿಂದ ತೊಂದರೆಗೊಳಗಾದ ಜನತೆ ತೀರಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವೇಗದ ಚಾಲನೆ
ಟಾರ್ಪಾಲು ಹೊದಿಸದೇ ಲಾರಿ ಚಾಲನೆ ಮಾಡು ವುದು ಮಾತ್ರವಲ್ಲದೇ ಕೆಲವೊಂದು ಚಾಲಕರು ಲಾರಿಯನ್ನು ಅತಿ ವೇಗವಾಗಿ ಚಲಾಯಿಸುತ್ತಾರೆ. ಇದರಿಂದಾಗಿ ಮೈಯಿಡಿ ಮಣ್ಣು ರಾಚುವ ಸನ್ನಿವೇಶವೂ  ನಿರ್ಮಾಣವಾಗುತ್ತಿದೆ. ಪಾದಚಾರಿಗಳ, ಹಿಂಬದಿ ವಾಹನ ಸವಾರರ ಕಷ್ಟದ ಅರಿವು ಲಾರಿ ಚಾಲಕ ಅರಿವಿಗೆ ಬರುತ್ತಿಲ್ಲವೇ ಎನ್ನುವುದು ನಾಗರಿಕರ ಪ್ರಶ್ನೆ.

ದ್ವಿಚಕ್ರ ಸವಾರರಿಗೆ ದುಸ್ತರ
ಮಣ್ಣು ಹೊತ್ತುಕೊಂಡು ಹೋಗುವ ಲಾರಿಗಳ ಹಿಂಬದಿ ಸವಾರರು ಪಡುವ ತೊಂದರೆ ಅಷ್ಟಿಷ್ಟಲ್ಲ. ಹೆಲ್ಮೆಟ್‌ ಕಡ್ಡಾಯವಿಲ್ಲದ ಕಾರ್ಕಳದಲ್ಲಿ ದ್ವಿಚಕ್ರ ಸವಾರರಿಗೆ ಇಂತಹ ಲಾರಿಯಿಂದ ಮಣ್ಣು ಕಲ್ಲಿನ ಹುಡಿ ಎರಚಿದಲ್ಲಿ ಸೂಜಿಯಿಂದ ಚುಚ್ಚಿಸಿಕೊಂಡ ಅನುಭವ. ಕೆಲ ಸಂದರ್ಭದಲ್ಲಿ  ಇದರಿಂದಾಗಿ ದ್ವಿಚಕ್ರ ಚಾಲನೆ ದುಸ್ತರ, ಅಪಾಯಕಾರಿಯಾಗಿಯೂ ಕಂಡುಬರುವುದು.

ರಾಡ್‌ ಸಾಗಾಟ
ಇನ್ನು ಕೆಲವೊಂದು ಲಾರಿಗಳಲ್ಲಿ ಕಬ್ಬಿಣದ  ರಾಡ್‌ಗಳು ಹೊರಭಾಗಕ್ಕೆ ಚಾಚಿಕೊಂಡು ಸಾಗಾಟ ವಾಗುವುದು ಕಂಡುಬರುತ್ತಿದೆ. ರಾತ್ರಿ ವೇಳೆಯಲ್ಲಿ ರಾಡ್‌ ತುಂಬಿಕೊಂಡಿರುವುದು ಹಿಂಬದಿ ಸವಾರರ ಗಮನಕ್ಕೂ ಬಾರದಿರುವುದರಿಂದ ರಾಡ್‌ ಕಾಣುವಂತೆ ಮಾಡುವುದು ಲಾರಿ ಚಾಲಕ ಮಾಲಕರ ಹೊಣೆ.

Advertisement

ಸ್ಟಿಕ್ಕರ್‌ ಅಳವಡಿಸಿ
ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಯಲ್ಲಿ ಲಾರಿ ಚಾಲಕರು ಮಣ್ಣು ಸಾಗಾಟ ಮಾಡಬೇಕಾಗಿದೆ. ರಸ್ತೆ ಮೇಲೂ ಮಣ್ಣು ಬೀಳದಂತೆ ಎಚ್ಚರವವಹಿಸುವುದು ಅಗತ್ಯ. 

ಹೀಗಾಗಿ ಟಾರ್ಪಾಲು ಅಳವಡಿಸಿ ಮಣ್ಣು ಸಾಗಾಟ ನಡೆಸುವುದು ಹೆಚ್ಚು ಸೂಕ್ತ. ರಾತ್ರಿ ವೇಳೆ ರಾಡ್‌ ಸಾಗಾಟ ಮಾಡುವುದಾದರೆ ಲೇಸರ್‌ ಪಟ್ಟಿ, ಸ್ಟಿಕ್ಕರ್‌ ಅಂಟಿಸುವುದು ಉಪಯುಕ್ತ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅದಿಕಾರಿಗಳು ಕ್ರಮ ಕೈಗೊಳ್ಳುವ ಅಗತ್ಯವಿದ್ದು, ಲಾರಿಗಳ ಮೇಲೆ ನಿಗಾ ವಹಿಸಬೇಕಾಗಿದೆ. 

ಸೂಕ್ತ ಕ್ರಮ 
ಟಾರ್ಪಾಲು ರಹಿತವಾಗಿ ಮಣ್ಣು ಮರಳು ಸಾಗಾಟ ಮಾಡುತ್ತಿದ್ದಲ್ಲಿ ಸಾರ್ವಜನಿಕರು ಅಂತಹ ಲಾರಿಗಳ ಫೋಟೋ ತೆಗೆದು ಪೊಲೀಸ್‌ ಇಲಾಖೆಗೆ ನೀಡಿ. ನಿಯಮ ಉಲ್ಲಂ ಸುವ ಲಾರಿ ಚಾಲಕ-ಮಾಲಕರ ವಿರುದ್ಧ ಸೂಕ್ತ ಕ್ರಮ ಜರಗಿಸುತ್ತೇವೆ.
-ಎಚ್‌. ಕೃಷ್ಣಕಾಂತ್‌, ಎಎಸ್‌ಪಿ ಕಾರ್ಕಳ ಉಪವಿಭಾಗ

ದಂಡ
ಸರಕಾರಿ ಕಾಮಗಾರಿ ನಡೆಸುವುದಾದರೂ ಲಾರಿಗಳು ಮಣ್ಣು ತುಂಬಿ ಹೋಗುವಾಗ ಟಾರ್ಪಾಲು ಹೊದಿಸಿ ಹೋಗುವುದು ಕಡ್ಡಾಯ. ಇಂತಹ ಲಾರಿಗಳು ಕಂಡು ಬಂದಲ್ಲಿ ಪೊಲೀಸರು ಅಥವಾ ಆರ್‌ಟಿಒ ಅಧಿಕಾರಿಗಳು 500 ರೂ. ದಂಡ ವಿಧಿಸಬಹುದಾಗಿದೆ. ಕೆಲವೊಂದು ಸಂದರ್ಭದಲ್ಲಿ ವಾಹನ ಪರವಾನಿಗೆಯನ್ನು ರದ್ದುಗೊಳಿಸಲು ಆರ್‌ಟಿಓಗೆ ಪೊಲೀಸರು ಶಿಫಾರಸು ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next