ನಾವೆಲ್ಲರೂ ಮೊದಲು ಮಣ್ಣಿನ ಮಕ್ಕಳು. ನಂತರ ತಾಯಿಯ ಮಕ್ಕಳು. ಮಣ್ಣು ನಮ್ಮೆಲ್ಲರ ಮೊದಲ ಜನನಿ. ಅಷ್ಟು ಮಾತ್ರವಲ್ಲ, ಮಣ್ಣು ನಮ್ಮ ಆದಿಯೂ ಹೌದು; ಅದು ನಮ್ಮ ಅಂತ್ಯವೂ ಹೌದು. ಪಾಣಿನಿಯ “ಆದಿರಂತ್ಯೇನ ಸಹಿತಾ’ ಎಂಬ ಸೂತ್ರವನ್ನು ಮಣ್ಣಿಗೂ ಅನ್ವಯಿಸಿ ಹೇಳಬಹುದು. ಮಣ್ಣು ಬರೀ ಮಣ್ಣಲ್ಲ. ಅದನ್ನು ಮೃತ್ತಿಕೆ ಎಂದು ಪಕ್ಕಕ್ಕೆ ಸರಿಸಿಬಿಟ್ಟು ಗಮನಬಾಹಿರವಾಗಿಸುವಂತಿಲ್ಲ. ಮಣ್ಣು ಜೀವನ. ಮಣ್ಣು ಸಂಜೀವಿನಿ. ಮಣ್ಣು ನಮಗೆ ಉಸಿರನ್ನೂ, ಹಸಿರನ್ನೂ ಕೊಡುತ್ತದೆ.
ಮಣ್ಣು ಚಿನ್ಮಯ. ಅದು ಚಿನ್ನಮಯ. ಮಣ್ಣನ್ನು ಬಗೆದರೂ ಅದು ನಮಗೆ ಚಿನ್ನವನ್ನು ಕೊಡುತ್ತದೆ. ಮಣ್ಣನ್ನು ಬೆಳೆದರೂ ಅದು ಚಿನ್ನವನ್ನು ಕೊಡುತ್ತದೆ. ಇನ್ನು ಅಧ್ಯಾತ್ಮದ ಕಣ್ಣಿಗೆ ಮಣ್ಣು ಕಾಣುವುದೇ ಬೇರೆ. “ಮಡಕೆಯ ಮಾಡುವಡೆ ಮಣ್ಣೇ ಮೊದಲು, ತೊಡಿಗೆಯ ಮಾಡುವಡೆ ಹೊನ್ನೇ ಮೊದಲು’ ಎಂಬುದು ಬಸವವಾಣಿ. ದೇಹವೆಂಬ ಮಡಕೆಯೂ ಮಣ್ಣಿನಿಂದಲೇ ನಿರ್ಮಿತವಾಗಿದೆ. ಮನುಷ್ಯ ತನ್ನ ಬದುಕಿನ ತುಂಬೆಲ್ಲ ಹೆಣ್ಣು, ಹೊನ್ನು, ಮಣ್ಣನ್ನು ಹಿಂಬಾಲಿಸುತ್ತಾನೆ.
ಮನುಷ್ಯನಿಗೆ ಮಣ್ಣಿನ ಮೇಲೆ ಮಮಕಾರ ಇದೆ; ಒಲವು, ವಾತ್ಸಲ್ಯ ಏನೆಲ್ಲ ಇದೆ. ತನ್ನನ್ನು ಸಂರಕ್ಷಿಸುವ ಮಣ್ಣಿನ ಕುರಿತು ಮನುಷ್ಯ ಕಾಳಜಿ ವಹಿಸಬೇಕಾಗಿದೆ. ವಿಚಿತ್ರವೇನೆಂದರೆ, ಮನುಷ್ಯ ತನಗೆ ನೆಲೆ ಕೊಟ್ಟ ಮಣ್ಣನ್ನೇ ಸಾಯಿಸುತ್ತಿದ್ದಾನೆ. ಭೂಮಿಯ ಬಾಯಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕುವ ಮೂಲಕ ಈತ ಮಣ್ಣನ್ನು ಸಾಯಿಸುತ್ತಿದ್ದಾನೆ. ಹಾಲಿಗೆ ವಿಷಬೆರೆಸುವ ಹಾಗೆ, ಮಣ್ಣಿಗೆ ಕ್ರಿಮಿನಾಶಕದ ಹೆಸರಿನಲ್ಲಿ ವಿಷವುಣಿಸುತ್ತಿದ್ದಾನೆ.
ತನ್ಮೂಲಕ ಮಣ್ಣನ್ನು ಬಂಜೆಯಾಗಿಸುತ್ತಿದ್ದಾನೆ. ಮಣ್ಣಿನ ಫಲವತ್ತತೆಗೆ ಕನ್ನ ಹಾಕುತ್ತಿದ್ದಾನೆ. ಇದು ನಿಜಕ್ಕೂ ದುಃಖಕರ. ಮಣ್ಣನ್ನು ಬಂಜೆ ಆಗಿಸುವುದಕ್ಕಿಂತ ದೊಡ್ಡಪಾಪ ಇನ್ನೊಂದಿದೆಯಾ? ಖಂಡಿತವಾಗಿಯೂ ಇಲ್ಲ. ಮಣ್ಣು ಸತ್ತಯುತವಾಗಿದ್ದರೆ ಮಾತ್ರ ಜೀವಜಗತ್ತು ನೆಮ್ಮದಿಯಿಂದ ಇರುವುದು ಸಾಧ್ಯ. ಸಕಾಲದಲ್ಲಿ ನಾವು ಫಲವತ್ತಾದ ಮಣ್ಣಿನ ಸಂರಕ್ಷಣೆಯ ವಿಷಯದಲ್ಲಿ ಜಾಗೃತರಾಗದಿದ್ದರೆ ಈಗ ಯಾವ ರೀತಿ “ಬೇಟಿ ಬಚಾವೋ’ ಎಂದು ಹೇಳಲಾಗುತ್ತಿದೆಯೋ ಹಾಗೆಯೇ ಮುಂದೊಂದು ದಿನ, “ಮಿಟಿ ಬಚಾವೋ’ ಎಂದು ಆಂದೋಲನವನ್ನು ಮಾಡಬೇಕಾಗುತ್ತದೆ.
“ಸುಫಲಾಂ ಸುಜಲಾಂ, ವಂದೇ ಮಾತರಂ’ ಎಂದು ಹೇಳುವ ನಾವು ಮುಂದಿನ ದಿನಗಳಲ್ಲಿ ಫಲವತ್ತಲ್ಲದ, ನೀರಿಲ್ಲದ ಭೂಮಿಯನ್ನು ಕುರಿತು ವಂದ್ಯಾಮಾತೃವಿನ ಪಟ್ಟಕಟ್ಟಿ ಕಣ್ಣೀರಿಡಬೇಕಾದ ಪ್ರಸಂಗ ಬರಬಹುದು. ಮಣ್ಣಿನ ಸಂರಕ್ಷಣೆಯ ವಿಷಯದಲ್ಲಿ ಈಗಲಾದರೂ ಎಚ್ಚೆತ್ತುಕೊಳ್ಳುವುದು, ಮನುಕುಲಕ್ಕೆ ಶ್ರೇಯಸ್ಕರ.
* ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಹಿರೇಮಠ, ತುಮಕೂರು