ರಾಯಚೂರು: ಮನುಷ್ಯನ ಮತ್ತು ಮಣ್ಣಿನ ಆರೋಗ್ಯ ದೃಷ್ಟಿಯಿಂದ ಭವಿಷ್ಯದಲ್ಲಿ ಸಾವಯವ ಕೃಷಿ ಅನಿವಾರ್ಯವಾಗಲಿದ್ದು, ಈ ನಿಟ್ಟಿನಲ್ಲಿ ಜೈವಿಕ ನಿಯಂತ್ರಣ ವಿಭಾಗವು ಸಂಶೋಧನೆ ನಡೆಸಲಿದೆ ಎಂದು ಜೈವಿಕ ನಿಯಂತ್ರಣ ವಿಭಾಗದ ಮುಖ್ಯಸ್ಥ ಡಾ| ಅರುಣಕುಮಾರ ಹೊಸಮನಿ ಹೇಳಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜೈವಿಕ ನಿಯಂತ್ರಣ ವಿಭಾಗ ಮುಖ್ಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿಯಲ್ಲಿನ ಕೀಟಗಳ ಪರಿಣಾಮಕಾರಿಯಾದ ನಿಯಂತ್ರಣ ಸಾಧ್ಯವಿದೆ. ಹಲವಾರು ಸಂಶೋಧನೆಗಳ ಫಲವಾಗಿ ವಿಶ್ವವಿದ್ಯಾಲಯದ ಜೈವಿಕ ನಿಯಂತ್ರಣ ಕೇಂದ್ರದಲ್ಲಿ ಕೆಲ ಉತ್ಪನ್ನಗಳನ್ನು ರೈತರಿಗೆ ವಿತರಿಸಲಾಗಿದೆ. ಬೆವೆರಿಯಾ, ಮೆಟರಿಸಂ, ಲೆಕ್ಯಾನಿ ವರ್ಟಿಸಿಲಿಯಂ, ಎರೆ ಜಲ ಮುಂತಾದ ಜೈವಿಕ ನಿಯಂತ್ರಣ ಉತ್ಪನ್ನಗಳು ರೈತರ ವಿಶ್ವಾಸವನ್ನು ಗೆದ್ದಿವೆ. ಉತ್ಪಾದನಾ ಪ್ರಮಾಣ ದ್ವಿಗುಣಗೊಂಡಿದ್ದು, ಬೇಡಿಕೆಗೆ ತಕ್ಕಂತೆ ಪೂರೈಸಲಾಗುತ್ತಿಲ್ಲ ಎಂದರು. ದಿನಗಳೆದಂತೆ ಹೊಸ ಕೀಟಗಳು ಹುಟ್ಟುತ್ತಲೇ ಇದ್ದು, ಅದಕ್ಕೆ ತಕ್ಕ ಸಂಶೋಧನೆಗಳನ್ನು ನಿರಂತರವಾಗಿ ಕೈಗೊಳ್ಳಲಾಗಿದೆ. ರೈತರ ಪ್ರತಿಕ್ರಿಯೆ ಆಧರಿಸಿ ಉತ್ಪನ್ನ ತಯಾರಿಸಲಾಗುತ್ತಿದೆ. ರಸಾಯನಿಕ ಯುಕ್ತ ಬೇಸಾಯ ವಿಧಾನವನ್ನು ರೈತರು ನಿಧಾನವಾಗಿ ಕೈಬಿಡುತ್ತಿದ್ದಾರೆ ಎಂದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ| ಭೀಮಣ್ಣ ಮಾತನಾಡಿ, ಜೈವಿಕ ಪರಿಕರಗಳು ರೈತರಿಗೆ ಹೆಚ್ಚಿನ ಲಾಭ ತಂದುಕೊಡಲಿವೆ. ಮುಖ್ಯವಾಗಿ ಮಣ್ಣನ್ನು ಶ್ರೀಮಂತಗೊಳಿ ಸುವುದು ಅಗತ್ಯ. ಇಲ್ಲದಿದ್ದರೆ, ಜೈವಿಕ ಪರಿಕರಗಳಾಗಲಿ ರಸಾಯನಿಕಗಳಾಗಲಿ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡುವುದಿಲ್ಲ. ಹೊಲದಲ್ಲಿನ ಬೆಳೆಗಳ ಉಳಿಕೆಗಳನ್ನು ಮಣ್ಣಿಗೆ ಮಿಶ್ರಗೊಳಿಸಬೇಕು ಎಂದರು.
ಸಾವಯವ ಉತ್ಪಾದಕ ರೈತ ಶರಣಬಸವ ಪಾಟೀಲ್ ಮಾತನಾಡಿ, ರಸಾಯನಿಕ ಮುಕ್ತ ಕೃಷಿಯಲ್ಲಿ ತಾಳ್ಮೆ ಇದ್ದವರು ಗೆಲ್ಲುತ್ತಾರೆ. ಕ್ಯಾನ್ಸರ್ ರೋಗಿಗಳ ಪ್ರಮಾಣ ಹೆಚ್ಚಬಹುದು. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಕೈ ಮೀರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ವಿಜ್ಞಾನಿ ಡಾ| ಶಿವಕುಮಾರ ಜಿ., ಕೀಟ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಪ್ರಭುರಾಜ, ಡಾ| ಎ.ಜಿ. ಶ್ರೀನಿವಾಸ, ಡಾ|ಪ್ರಮೋದ ಕಟ್ಟಿ, ವಿಸ್ತರಣಾ ಸಲಹಾ ಸಮಿತಿ ಸದಸ್ಯ ಡಾ| ಎನ್.ಡಿ. ಚಾರಿ ಮಾತನಾಡಿದರು. ಪ್ರಗತಿಪರ ರೈತರಾದ ಅಮರೇಗೌಡ, ರಮೇಶ ಬೋಸ್, ಬೆಟ್ಟದೂರು ಶರಣಬಸವ, ವೆಂಕಟೇಶ ರೆಡ್ಡಿ ಇತರರು ಜೈವಿಕ ಪರಿಕರಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.