ಹನೂರು: ಹೈಡ್ರೋಫೋನಿಕ್ ತಂತ್ರಜ್ಞಾನದಿಂದ ಮಣ್ಣಿನ ಸಹಾಯವಿಲ್ಲದೇ ಜಾನುವಾರುಗಳಿಗೆ ಮೇವು ಬೆಳೆಯುವ ಮೂಲಕ ಸರ್ಕಾರಿ ಸಹಾಯಧನ ಪಡೆದು ಮೇವು ಬೆಳೆದ ದಕ್ಷಿಣ ಕರ್ನಾಟಕದ ಪ್ರಥಮ ರೈತ ಎಂಬ ಹೆಗ್ಗಳಿಕೆಗೆ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಪುತ್ರ ನವನೀತ್ ಗೌಡ ಭಾಜನರಾಗಿದ್ದಾರೆ. ಹೈಡ್ರೋಫೋನಿಕ್ ತಂತ್ರಜ್ಞಾನದಲ್ಲಿ ಮಣ್ಣಿನ ಸಹಾಯವೇವಿಲ್ಲದೆ ತಟ್ಟೆಗಳಲ್ಲಿ ಬಿತ್ತನೆ ಬೀಜ ಹಾಕಿ, 12-13 ದಿನಗಳಲ್ಲಿ ಮೇವು ತಯಾರಿಸಬಹುದಾಗಿದೆ.
ಪ್ರಸ್ತುತ ರೈತರು ಜಾನುವಾರುಗಳಿಗೆ ನೀಡುತ್ತಿರುವ ಫೀಡ್ಸ್‌ಗಿಂತ ಉತ್ತಮ ಆಹಾರವಾಗಿದೆ. ಈ ತಂತ್ರಜ್ಞಾನದ ಮೇವು ರುಚಿಕರ ಮತ್ತು ಆರೋಗ್ಯಕರವಾಗಿದ್ದು, ರಾಸುಗಳಿಗೆ ಅವಶ್ಯವಾದ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಅಂಶಗಳಿದೆ. ಜಾನುವಾರುಗಳು ನೀಡುವ ಹಾಲಿನ ಪ್ರಮಾಣವು ವೃದ್ಧಿಯಾಗಿ, ಹೈನುಗಾರಿಕೆ ನಡೆಸುವ ರೈತರಿಗೆ ಲಾಭದ ಜೊತೆಗೆ ಫೀಡ್ಸ್‌ಗೆ ತಗುಲುವ ವೆಚ್ಚವೂ ಕಡಿಮೆಯಾಗಲಿದೆ. ಖರ್ಚು ಕಡಿಮೆಯಾಗಿ ಆದಾಯ ವೃದ್ಧಿಯಾಗಲಿದೆ.
ಬೆಳೆಯುವ ವಿಧಾನ: ಹೈಡ್ರೋಫೋನಿಕ್ ತಂತ್ರಜ್ಞಾನದಲ್ಲಿ ಕಡಿಮೆ ನೀರು ಮತ್ತು ಖರ್ಚಿನಿಂದ ಮೇವು ತಯಾರಿಸಬಹುದಾಗಿದೆ. ಮೇವು ಬೆಳೆಯಲು ಗುಣಮಟ್ಟದ ಬಿತ್ತನೆ ಬೀಜವನ್ನು ನೀರಿನಲ್ಲಿ 2-3 ಬಾರಿ ತೊಳೆದ ಬಳಿಕ 24 ಗಂಟೆಗಳ ಕಾಲ ನೆನೆಯಲು ಬಿಡಬೇಕು. ನೆನೆಸಿಟ್ಟಿರುವ ಜೋಳವನ್ನು ನೀರಿನಿಂದ ಹೊರತೆಗೆದು ಪಂಚೆ, ಬೆಡ್‌ಶೀಟ್ ಅಥವಾ ಗೋಣಿಚೀಲದಲ್ಲಿ ಸುತ್ತಿ ಬಿದಿರುಬುಟ್ಟಿ ಅಥವಾ ಪಾತ್ರೆಗಳಲ್ಲಿ ಇಡಬೇಕು. ಬೇಸಿಕೆ ಕಾಲದಲ್ಲಿ 24 ಗಂಟೆ, ಚಳಿಗಾಲದಲ್ಲಿ 48 ಗಂಟೆಯಲ್ಲಿ ಮೊಳಕೆಯೊಡೆಯುತ್ತದೆ. ಮೊಳಕೆ ಹೊಡೆದ ಕಾಳನ್ನು ಹೈಡ್ರೋಫೋನಿಕ್ ತಂತ್ರಜ್ಞಾನದ ಟ್ರೇಗಳಲ್ಲಿ ಹಾಕಿದಲ್ಲಿ 8-10 ದಿನಗಳಲ್ಲಿ ಮೇವು ಸಿದ್ಧಗೊಳ್ಳಲಿದೆ.
ಹೇಗೆ ಕಾರ್ಯನಿರ್ವಹಿಸುತ್ತದೆ: ಹೈಡ್ರೋಫೋನಿಕ್ ತಂತ್ರಜ್ಞಾನದ ಒಂದು ಯೂನಿಟ್ಟಿನಲ್ಲಿ 48 ಟ್ರೇಗಳಿರುತ್ತವೆ. ಈ ಟ್ರೇನಲ್ಲಿ ಮೊಳಕೆಯೊಡೆದ ಕಾಳುಗಳನ್ನು ಹಾಕಿ, ಬಳಿಕ ನೀರು ಪೂರೈಕೆ ಮಾಡಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಒಂದು ಟೈಮರ್ ಯಂತ್ರವನ್ನೂ ಅಳವಡಿಸಲಾಗಿದ್ದು, ಪ್ರತಿ ಗಂಟೆಗೆ 20 ಸೆಕೆಂಡುಗಳ ಕಾಲ ನೀರಿನ ಟ್ರೇ ಮೇಲೆ ಸಿಂಪಡಣೆಯಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ 8ನೇ ದಿನಕ್ಕೆ ಮೇವು ಸಿದ್ಧವಾಗಲಿದ್ದು, ಕನಿಷ್ಠ 9 ಇಂಚಿನಿಂದ ಒಂದು ಅಡಿ ಎತ್ತರಕ್ಕೆ ಮೇವು ಬೆಳೆಯಲಿದೆ. ಈ ಒಂದು ಘಟಕವನ್ನು ನಿರ್ಮಾಣ ಮಾಡಿಕೊಳ್ಳಲು 58 ಸಾವಿರದಿಂದ 60 ಸಾವಿರ ಖರ್ಚಾಗಲಿದ್ದು, ಸರ್ಕಾರ ಸಬ್ಸಿಡಿ ಸೌಲಭ್ಯ ಕಲ್ಪಿಸುತ್ತಿದೆ. ಸಾಮಾನ್ಯ ವರ್ಗದ ರೈತರು 5 ಸಾವಿರ ರೂ ಪಾವತಿಸಿದಲ್ಲಿ ಘಟಕ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ.
ಯಾವಾಗ ನೀಡಬೇಕು?: ಈ ಮೇವನ್ನು ಬೆಳಗ್ಗೆ ಮತ್ತು ಸಂಜೆ ಹಾಲು ಕರೆದ ಬಳಿಕ ರಾಸುಗಳಿಗೆ ನೀಡುವುದರಿಂದ ಹಾಲಿನ ಗುಣವåಟ್ಟ ಹೆಚ್ಚಳ ಮತ್ತು ಆರೋಗ್ಯವೂ ವೃದ್ಧಿಸಲಿದೆ. ಅಲ್ಲದೆ, ಈ ಮೇವಿನಿಂದ ರಾಸುಗಳ ಚರ್ಮದ ಕಾಂತಿಯು ಕೂಡ ಹೆಚ್ಚಾಗುತ್ತದೆ.
ವಸ್ತು ಪ್ರದರ್ಶನಕ್ಕೆ ರವಾನೆ: ದೊಡ್ಡಿಂದುವಾಡಿಯ ಯುವ ರೈತ ನವನೀತ್‌ಗೌಡ ಬೆಳೆದಿರುವ ಮಣ್ಣು ರಹಿತ ಮೇವನ್ನು ಡಿ.19 ಮತ್ತು 20ರಂದು ಬೆಂಗಳೂರಿನ ಜ್ಞಾನಭಾರತಿ ವಿವಿಯ ಸಸ್ಯಶಾಸ್ತ್ರ ವಿಭಾಗದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಒಂದು ಬಗೆಯ ಮೇವನ್ನು ತಿಳಿದುಕೊಳ್ಳುವ ಬಗ್ಗೆ ಪಶು ಸಂಗೋಪನಾ ಸಚಿವರು ಉತ್ಸುಕರಾಗಿದ್ದು, ವಿಜ್ಞಾನಿಗಳೂ ಕೂಡ ಈ ಬಗ್ಗೆ ಸಂಶೋಧನೆ ಕೈಗೊಳ್ಳುವ ತವಕದಲ್ಲಿದ್ದಾರೆ.
ಹೈನುಗಾರಿಕೆಗೆ ಇದು ಉತ್ತಮ ವಿಧಾನ. ಈ ರೀತಿಯ ಮೇವನ್ನು ಕಡಿಮೆ ಜಾಗ ಮತ್ತು ನೀರಿನಲ್ಲಿ ಬೆಳೆಯಬಹುದಾಗಿದೆ. ಈ ವಿಧಾನದಲ್ಲಿ 3-5 ರೂ. ಖರ್ಚಿನಲ್ಲಿ ಒಂದು ಕೆಜಿ ಆಹಾರ ತಯಾರಿಸಬಹುದಾಗಿದೆ. ಈ ವಿಧಾನದಲ್ಲಿ ಕೇವಲ ಜೋಳ ಮಾತ್ರವಲ್ಲದೆ ರಾಗಿ, ಅಲಸಂದೆ ಇನ್ನಿತರ ಧಾನ್ಯಗಳನ್ನು ಬಳಸಿ ಮೇವು ತಯಾರಿಸಬಹುದು.
-ಸಚಿನ್, ಲೂನಾರ್ ಪ್ಲಾಸ್ಟಿಕ್ಸ್ ಸಂಸ್ಥೆ, ಕೊಲ್ಹಾಪುರ, ಮಹಾರಾಷ್ಟ್ರ
ಇಂದಿನ ಪೀಳಿಗೆಗೆ, ಯುವಕರಿಗೆ ತಂತ್ರಜ್ಞಾನದ ಅವಶ್ಯವಿದೆ. ಪಟ್ಟಣ ಪ್ರದೇಶಗಳಲ್ಲಿ ಜಾನುವಾರು ಸಾಕಾಣಿಕೆಗೆ ಸ್ಥಳ ಮತ್ತು ಹಸಿರು ಮೇವಿನ ಕೊರತೆಯನ್ನು ನೀಗಿಸಬಹುದು.
-ನವನೀತ್‌ಗೌಡ, ಯುವ ರೈತ
* ವಿನೋದ್ ಎನ್ ಗೌಡ