ಗಾಂಧಿನಗರದಲ್ಲಿ ಈಗಾಗಲೇ ಸಾಫ್ಟ್ವೇರ್ ಮಂದಿ ಧುಮುಕಿದ್ದು ಗೊತ್ತೇ ಇದೆ. ಆಗಾಗ, ಸಾಫ್ಟ್ವೇರ್ ಕ್ಷೇತ್ರದಲ್ಲಿರುವ ಒಂದಷ್ಟು ಪ್ರತಿಭಾವಂತರು ಸೇರಿ, ಸಿನಿಮಾ ಮಾಡುವ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಲೇ ಇದ್ದಾರೆ. ಆ ಸಾಲಿಗೆ ಈಗ “ಇಂಜೆಕ್ಟ್ 0.7′ ಎಂಬ ಹೊಸ ಚಿತ್ರವೂ ಸೇರಿದೆ. ಈ ಚಿತ್ರದ ಶೀರ್ಷಿಕೆ ಕೇಳಿದರೆ, ಇದು ಬಾಂಡ್ ಸಿನಿಮಾ ಇರಬಹುದಾ? ಎಂಬ ಪ್ರಶ್ನೆ ಎದುರಾಗುತ್ತೆ. ಆದರೆ, ಇದು ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ಗೆ ಸೇರಿದ ಸಿನಿಮಾ.
ಆ ಕುರಿತು ಒಂದಷ್ಟು ಹೇಳುವುದಾದರೆ, ಇದನ್ನು ಸಾಫ್ಟ್ವೇರ್ ಎಂಜಿನಿಯರ್‌ಗಳು ಸೇರಿ ಮಾಡಿದ ಚಿತ್ರ. ತಮ್ಮ ಆದಾಯದಲ್ಲಿ ಕೂಡಿಟ್ಟ ಹಣವನ್ನು “ಇಂಜೆಕ್ಟ್ 0.7′ ಚಿತ್ರಕ್ಕಾಗಿ ಹಾಕಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ಒಂದು ಥ್ರಿಲ್ಲರ್ ಸಿನಿಮಾ ಮಾಡಿರುವ ತೃಪ್ತಿ ಅವರದು. ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ಸಾಮಾನ್ಯ ವ್ಯಕ್ತಿ ಸಿಮೆಂಟ್ ವ್ಯಾಪಾರ ಮಾಡಲು ನಿರ್ಧರಿಸಿ, ತನ್ನ ಪತ್ನಿ ಜೊತೆ ಊರ ಹೊರಗಿರುವ ಒಂದು ಒಂಟಿ ಮನೆಗೆ ವಾಸ ಮಾಡಲು ಹೊರಡುತ್ತಾನೆ.
ಆ ಜಾಗದಲ್ಲಿ ಸಾಲು ಸಾಲು ಕೊಲೆಗಳು ನಡೆಯುತ್ತಾ ಹೋಗುತ್ತವೆ. ಆ ಕುರಿತು ವಾಹಿನಿಯಲ್ಲಿ ಸುದ್ದಿಯೂ ಆಗುತ್ತೆ. ಆಗ ರಾಜಕಾರಣಿಯೊಬ್ಬ ತನಿಖೆಗೆ ಒತ್ತಾಯಿಸುತ್ತಾನೆ. ತನಿಖೆ ಕೈಗೊಳ್ಳುವ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಒಂದೊಂದೇ ಘಟನೆಗಳು ಬಿಚ್ಚಿಕೊಳ್ಳುತ್ತವೆ. ಆ ಘಟನೆ ಏನು, ಕೊಲೆ ಮಾಡಿದ್ದು ಯಾರು, ಕೊಲೆ ಆಗಿದ್ದು ಯಾರದ್ದು ಎಂಬಿತ್ಯಾದಿ ಪ್ರಶ್ನೆಗೆ ಸಿನಿಮಾ ನೋಡಬೇಕು ಎಂಬುದು ಚಿತ್ರತಂಡದ ಮಾತು.
ಇನ್ನು, ಈ ಚಿತ್ರಕ್ಕೆ ಭದ್ರಾವತಿ ಮೂಲದ ನಿರಂಜನ್ ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರಕ್ಕೆ ಸೌಂಡ್‌ಎಫೆಕ್ಟ್ಸ್ ಕೆಲಸವನ್ನೂ ಮಾಡಿ, ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಪ್ರತಿಜ್ಞ ಹಾಗು ರೂಪಗೌಡ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಶ್ರೀಕಾಂತ್ ಯಾದವ್, ವಿನೀಶ್.ಎಂ, ಸೂರ್ಯ ಧನುಷ್, ಈಶ್ವರ್, ತಾರಾ, ಅಮೃತ, ಯೋಗೇಶ್, ರಾಜೇಶ್ ಮುಂತಾದವರು ಅಭಿನಯಿಸಿದ್ದಾರೆ.
ಬೆಂಗಳೂರು, ಅರೆಬಿಳಚಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರಮೋದ್‌ಆಚಾರ್ಯ ಅವರು ಗೀತೆ ರಚಿಸಿದ್ದಾರೆ. ಶ್ರೀಧರ್‌ಕಶ್ಯಪ್ ಸಂಗೀತವಿದೆ. ಉದಯ್ ಲೀಲಾ ಅವರು ಛಾಯಾಗ್ರಹಣ ಮಾಡಿದ್ದಾರೆ. ಮಹೇಶ್ ರೆಡ್ಡಿ ಅವರ ಸಂಕಲನವಿದೆ. ನಿರ್ದೇಶಕ ನಿರಂಜನ್ ಆ್ಯಕ್ಷನ್ -ಕಟ್ ಹೇಳಿದರೆ, ಅವರ ಪತ್ನಿ ಪವಿತ್ರ ಬಂಡವಾಳ ಹಾಕಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.