Advertisement

 ಇರುವುದೆಲ್ಲವ ಬಿಟ್ಟು ಕೃಷಿಕರಾದರು…

03:22 PM Apr 14, 2018 | |

ತಿಂಗಳಿಗೆ ಲಕ್ಷಾಂತರ ರೂ. ಕೊಡುತ್ತಿದ್ದ ಸಾಫ್ಟ್ವೇರ್‌ ಕ್ಷೇತ್ರ ಬಿಟ್ಟು, ನೇರವಾಗಿ ಕೃಷಿ ಎಂಬ ಹಾರ್ಡವೇರ್‌ಗೆ ಬಂದು ಬಿಟ್ಟರು ಶ್ರೀವತ್ಸ. ಈ ನೋಡಿ, ಕಣ್ತುಂಬು ನಿದ್ದೆ, ಕೈ ತುಂಬ ದುಡ್ಡು, ಮನಸ್ಸು ತುಂಬ ನೆಮ್ಮದಿ ಸಿಕ್ಕಿದೆಯಂತೆ. ಇವರ ಇರುವುದರೆಡೆಗಿನ ಪಯಣ ಹೀಗಿದೆ… 

Advertisement

“ಮೇಲ್ಗಡೆ ರಾಮ ಇದ್ದಾನೆ ಕರೆದುಕೊಂಡು ಬರ್ತೀನಿ.  ನೀನು ಸೀತೇನ ಹುಡುಕು, ಅಲ್ಲೆಲ್ಲೋ ಇರಬೇಕು…’
  ಶ್ರೀವತ್ಸ ಹೀಗೆ ಅವರ ತಾಯಿಗೆ ಹೇಳಿ, ನಮ್ಮನ್ನು ಅಲ್ಲೇ ಕೂಡಿಸಿ ಹೋದರು. ಎದುರಿಗೆ ಬೆಟ್ಟ. ಅದಕ್ಕೆ ಬಿದ್ದು ಎದ್ದು ಬರುತ್ತಿದ್ದ ಬಿಸಿಲಿನ ತಾಪ 35  38 ಡಿಗ್ರಿಯೇ ದಾಟಿತ್ತು. ಆದರೆ ಕೂತ ಜಾಗ ಮಾತ್ರ ತಣ್ಣ, ತಣ್ಣಗೆ;  ಅಷ್ಟೊಂದು ಹಸಿರು. 

 ಸೀತೆ, ರಾಮ, ಲಕ್ಷ್ಮಣ ಇವರೆಲ್ಲಾ ಯಾರು ? ರಾಮಾಯಣದಿಂದ ಎದ್ದು ಬಂದವರೇ ಅನ್ನೋ ಕುತೂಹಲವಿತ್ತು. ಬೆಟ್ಟ. ಅದರ ಬುಡದಲ್ಲಿ ಶ್ರೀವತ್ಸರ ಜಮೀನು.  ಒಟ್ಟು ಹತ್ತು ಎಕರೆ ಸೇರಿಸಿದರೆ ಚಿಗುರು ಎಕೋ ಸ್ಪೇಸ್‌.  ಇದು, ಮಾಗಡಿಯ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿಯ ಸಿಂಗದಾಸನಹಳ್ಳಿಯಲ್ಲಿದೆ. ಮುಖ್ಯ ರಸ್ತೆಯಿಂದ ಮೂರು, ನಾಲ್ಕು ಕಿ.ಮೀ ದಾರಿಗುಂಟ ಸಿಗುವ ನುರುಜು ಕಲ್ಲುಗಳನ್ನು ಸಹಿಸಿಕೊಳ್ಳಬೇಕು ಅಷ್ಟೇ.  ಆಮೇಲೆ ನೀವು ಹಸಿರವಾಸಿ. 
 ಸುಮಾರು 200 ಜಾತಿಯ ಗಿಡಗಳಿವೆ. ಇದರಲ್ಲಿ ಕಾಡು ಗಿಡಗಳೂ ಸೇರಿದ್ದು, ಎಲ್ಲವೂ  ಶ್ರೀವತ್ಸರ ಪಾಲಿಗೆ ಮನಿಪ್ಲಾಂಟ್‌ಗಳೇ. ತಾವೇ ಕಸಿಮಾಡಿ ಕೂಡ ಮಾರುತ್ತಾರೆ.  ಮನೆಯ ಮುಂದೆ ಜೇನುಡಬ್ಬಗಳು, ಬೀಟ್‌ ತಿರುಗುವ ನಾಟಿ ಕೋಳಿಗಳ ಹಿಂಡು. 

Advertisement

ಗುಡ್ಡದ ನೆತ್ತಿಯಿಂದ ಮೆಲ್ಲಗೆ ಬಂದರು ವತ್ಸ- ನೋಡ್ರಿ, ಏನ್‌ ನಾಚ್ಕೆ ಪಡ್ತಾನೆ. ಹೊಸಬರನ್ನು ಕಂಡ್ರೇ ಹಿಂಗೆ ಇವ.. ಅಂದರು.   ನೋಡಿದರೆ, ಅದು ಗಿಡ್ಡದಾದ ಪುಂಗನೂರು ಹಸು. ಅಪರೂಪದ ತಳಿ. ಅದಕ್ಕೆ “ರಾಮ’ ಅಂತ ಹೆಸರಿಟ್ಟಿದ್ದಾರೆ. ಇಷ್ಟೇ ಅಲ್ಲ, ಲಕ್ಷ್ಮಣ, ಲವ, ಕುಶ, ಸೀತೆ…  ಇಂಥವೇ ಹೆಸರಿನ ಸುಮಾರು ಹಸುಗಳಿದ್ದವು.  ಒಂದೊಂದು ಒಂದೊಂದು ಕಡೆ ಮೇಯುತ್ತಿದ್ದವು.  ವರ್ಷಕ್ಕೆ 7 ಟನ್‌ ಗೊಬ್ಬರ. ಅದೂ ಇಲ್ಲೇ ಉತ್ಪಾದನೆಯಾಗುತ್ತದೆ. ಎಲ್ಲವನ್ನೂ ಮಾಡುವುದು ತಾಯಿ-ಮಗ ಇಬ್ಬರೇ. ಕೃಷಿ ಕಾರ್ಮಿಕರನ್ನು ಇವರು ಅವಲಂಬಿಸಿಯೇ ಇಲ್ಲ. 

 “ನಾನೂ ಬೆಂಗಳೂರಿಗೆ ಹೋಗಲ್ಲ. ಕೆಲ್ಸ ಇದ್ರಷ್ಟೇ, ಇಲ್ಲಾಂದ್ರೆ ಇಲ್ಲೇ ಇದ್ದು ಬಿಡ್ತೀನಿ’ ಅಂದರು. 

 ಒಳಗಿಂದ ಅವರ ತಾಯಿ ಗೌರಮ್ಮ “ಕರೆಂಟು ಇಲ್ಲ. ಹಾಳಾದ್ದು ಯಾವಾಗ ಬರುತ್ತೋ’ ಅಂತ ಗೊಣಗಿದರು.

 “ಕರೆಂಟ್‌ ಬೆಳಗ್ಗೆ ಇರ್ತದೆ. ಮತ್ತೆ ಸಂಜೆ ಬರ್ತದೆ ‘  ತಾಯಿಗೂ ಕೇಳಬಹುದಾದ ನಮಗೂ ಒಂದೇ ಉತ್ತರ ಕೊಟ್ಟರು ವತ್ಸ.   ಮತ್ತೆ ಈ ಕಾಡಲ್ಲಿ ಅದೇಗೆ ಬದುಕ್ತೀರಿ ಅಂದರೆ -

“ಹಾಗೇ ಇರಬೇಕು. ಇದೇ ನಿಜವಾದ ಜೀವನ ಅಲ್ವೇ?’ ಅಂದರು ಶ್ರೀವತ್ಸ.  

 ಕರೆಂಟು ಕಾಣದ, ಕಾನನದ ನಡುವಿನ ಈ ತೋಟದಲ್ಲಿ ಬದುಕೋದು ಹೇಗೆ?

 “ರಾತ್ರಿ ಹೊತ್ತು ಚಿರತೆ, ಕರಡಿ ಬರ್ತವೆ. ಮುಂಗಸಿಗಳೂ ಇವೆ.  ತೋಳ ಇದೆಯಲ್ಲ ಅದು ನಮ್ಮ ನಾಯಿಗಳನ್ನು ತಿಂದಾಕಿವೆ. ಚಿರತೆ ನಾಲ್ಕೈದು ದನಗಳನ್ನು ಮಾತ್ರ ಉಳಿಸಿದೆ ‘ ಹೀಗೆ ಹೇಳಿ ಮತ್ತೆ ಪುಂಗನೂರು ರಾಮನ ತಲೆ ನೀವಿದರು.  

 ಶ್ರೀವತ್ಸ ಮಾಜಿ ಸಾಫ್ಟ್ವೇರ್‌ ಎಂಜಿನಿಯರ್‌. ಸುಮಾರು 20 ವರ್ಷ ಆ ಕಂಪನಿ, ಈ ಕಂಪನಿ, ಈ ದೇಶ, ಆ ದೇಶ ಅಂತ ಸುತ್ತಾಡಿದವರು. ಕಾಲಿಗೆ ಇದ್ದ ಚಕ್ರ ತೆಗೆದಿಟ್ಟು ಈಗ ಇರುವುದೆಲ್ಲವ ಬಿಟ್ಟು ಇಲ್ಲಿ ನೆಲೆಕಂಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಮನೆ ಇದೆ. ಆದರೆ ಈಗ ಅದು ಅತ್ತೆ ಮನೆ. ತವರು ಮನೆ ಈ ತೋಟ. 

 “ಒತ್ತಡದ ನಡುವೆ ಬದುಕಿ ಬದುಕೀ ಸಾಕಾಗಿತ್ತು. ಅದಕ್ಕೇ ಈ ತೋಟಕ್ಕೆ ಬಂದೆ. 2005ರಲ್ಲಿ ತೋಟ ತಗೊಂಡು, ಕೂಲಿ ಇಟ್ಟು ಮಾಡಿಸುತ್ತಿದ್ದೆ. ಇದ್ದಬದ್ದ ಅಡಿಕೆ ಮರಗಳೆಲ್ಲಾ ನೆಲ ಕಚ್ಚಿದವು, ತೆಂಗು ಮಾಯವಾದವು. ಕೊನೆಗೆ ಏನಾದರೂ ಮಾಡಲೇ ಬೇಕಲ್ಲ ಅಂತ ಕೆಲಸ ಬಿಟ್ಟು ನೇಗಿಲು ಹಿಡಿಯೋ ಕೆಲ್ಸ ಮಾಡಿದೆ ಅಂದರು.

 ಹೀಗೆ, ಮಾತು ಸಾಗುತ್ತಿದ್ದಾಗಲೇ- “ನಿಮ್ಮ ಹಿಂದೆ ಸುಮಾರು 10ಸಾವಿರ ರೂ. ಇದೆ. ಹುಷಾರು’ ಅಂದಾಗ ತಿರುಗಿದರೆ, ಎರಡು ಹೇರಳೆ ಕಾಯಿ ಗಿಡ ಕಂಡವು. ಗಿಡಿದಲ್ಲಿ ದುಡ್ಡು ಬಿಟ್ಟಿಲ್ಲ, ಆದರೆ ಅದು ಬೇಕು ಎಂದಾಗ ದುಡ್ಡು ಕೊಡುತ್ತೆ ಅಂದರು.

 ಅದು ಹೇಗೆ?
 ” ನೋಡಿ, ನಮ್ಮದು ಸಾವಯವ ತೋಟ. ಈ ಕಾಲಘಟ್ಟದಲ್ಲಿ ಸಾವಯವ ಪದ ಬಳಸಬಾರದು. ಏಕೆಂದರೆ, ಆ ಹೆಸರಲ್ಲಿ ಅಷ್ಟು ಅವ್ಯವಹಾರ ಮಾಡ್ತಾ ಇದ್ದಾರೆ. ಅದಕ್ಕೇ ವಿಷಮುಕ್ತ ತೋಟ ಅನ್ನಬಹುದು. 

ಪೂರ್ತಿ ಸಾಕಿದ ಮರಕ್ಕೆ 500 ರೂ. ಕೊಡ್ತೀರಾ ಅಂತ ಕೇಳಿದರು. ಹೇರಳೆಕಾಯಿ ಕಿಲೋ 50ರೂ.ಗೆ ಮಾರಿದೆ. 
ಅದು ಹೇಗೆ ಗೊತ್ತಾ? ಹಣ್ಣನ್ನು ಕಿತ್ತು ಬೆಳಗ್ಗೆ ಐದು ಗಂಟೆಗೆ ಕೃಷ್ಣರಾವ್‌ ಪಾರ್ಕ ಹತ್ತಿರ ಇಟ್ಟುಕೊಂಡು ಕೂತೆ.  ಜನ ಬಂದರು. ವಿಷಮುಕ್ತ ಹಣ್ಣು, ವಿಟಮಿನ್‌ ಸಿ ಹೆಚ್ಚಾಗಿ ಇರುತ್ತೆ ‘ ಅಂತ ಬಿಡಿಸಿ ಹೇಳಿದೆ. ಕಣ್ಣು ಮುಚ್ಚಿ ಕಣ್ಣು ತೆರೆಯೋ ಹೊತ್ತಿಗೆ ತಗೊಂಡು ಹೋಗಿದ್ದ ಅಷ್ಟೂ ಹಣ್ಣು ಖಾಲಿ ಆಯ್ತು. ನಮ್ಮ ತೋಟದಿಂದ ಬೆಂಗಳೂರಿಗೆ ಒಂದು ಗಂಟೆ ಪ್ರಯಾಣ.  ನಮ್ಮ ಅಂಗಡಿಗೆ ಒಂದಷ್ಟು ಕೊಡಿ ಅಂತ ಕೇಳಿ ಪಡೆದವರೂ ಇದ್ದಾರೆ.  ಎರಡ ಮರ ವರ್ಷಕ್ಕೆ 70 ಕೆ.ಜಿಯಷ್ಟು ಚೆರ್ರಿ ಕೊಡುತ್ತದೆ.  ಈಗ ಹೇಳಿ, ಮರ ಕಷ್ಟಕ್ಕಾಗುವ ನೆಂಟ ಅಲ್ವೇ? ಅಂದರು.

ಶ್ರೀವತ್ಸ ಅವರ ತೋಟದಲ್ಲಿ ಬಿದ್ದ ಮಳೆ ನೀರು ಪಕ್ಕದ ಜಮೀನಿಗೂ ಹೋಗುವುದಿಲ್ಲ.   ಅಲ್ಲೇ ಇಂಗಿಹೋಗುತ್ತದೆ. ನೀರು ಓಡದಂತೆ ತಡೆಯಲು ನೂರಾರು ಬದುಗಳನ್ನು ನಿರ್ಮಿಸಿದ್ದಾರೆ.  7 ಹೊಂಡಗಳು ಬೇರೆ ಇವೆ. ಪ್ರತಿಯೊಂದಲ್ಲೂ ಒಂದಷ್ಟು ನೀರು ಇದೆ. ಅದಕ್ಕೆ ಮೀನು ಬಿಟ್ಟಿದ್ದಾರೆ.  ಅದನ್ನು ನೋಡಲು ಹಕ್ಕಿಗಳು ಬರುತ್ತವೆ. ಹೀಗೆ ಜೀವವೈವಿಧ್ಯತೆಯ ಚಕ್ರ ಇವರ ತೋಟದಲ್ಲಿ ತಿರುಗುತ್ತಿದೆ. 150 ಜಾತಿಯ ಹಣ್ಣಿನ ಗಿಡಗಳಿವೆ. ಜೇನೋತ್ಪಾದನೆ ಕೂಡ ಆಗುತ್ತಿದೆ.  ವರ್ಷಕ್ಕೆ 7 ಟನ್‌ ಗೊಬ್ಬರ ತಯಾರಾಗುತ್ತದೆ. ಯಾವುದನ್ನು ಮಾರುವುದಿಲ್ಲ. 

 ಸಾಫ್ಟ್ವೇರ್‌ ಬದುಕಿಗಿಂತ ಬಹಳ ಸುಖವಾಗಿದ್ದೇನೆ. ಒತ್ತಡವಿಲ್ಲ, ಬಿ.ಪಿ, ಶುಗರ್‌ ಬರೋಲ್ಲ. ಅಲ್ಲಿ ಎಷ್ಟು ಗಳಿಸುತ್ತಿದ್ದೆನೋ ಇಲ್ಲೂ ಅಷ್ಟೇ ಗಳಿಸುತ್ತಿದ್ದೇನೆ.  ಆರಂಭದಲ್ಲಿ ಭಯವಾಗಿತ್ತು, ಹೇಗಪ್ಪಾ ಬದುಕು ಅಂತ. ಆದರೆ ನಂತರ ಹರಿಯೋ ಬದುಕಲ್ಲಿ ಈಜೋದು ತಿಳೀತು. ಈಗ, ವರ್ಷಕ್ಕೆ 6-7 ಲಕ್ಷ ಆದಾಯ ಬರ್ತಿದೆ ಅಂತಾರೆ ಶ್ರೀವತ್ಸ.

  ರೈತರು ಅಂದರೆ ಭತ್ತ, ರಾಗಿ, ಮಾವು ಇಂಥದ್ದು ಬೆಳೀಲೇ ಬೇಕು ಅಂತಿಲ್ಲ. ಇಂಥವನ್ನು ಬೆಳೆಯದೇ ಇದ್ದರೆ ರೈತರು ಆಗೋಲ್ಲ ಅನ್ನೋದು ಸುಳ್ಳು. ಆದಾಯ ವೈವಿಧ್ಯತೆಯನ್ನು ಕಂಡುಕೊಳ್ಳಬೇಕು. ಉಪಉತ್ಪನ್ನಗಳ ಕಡೆ ಗಮನ ಹರಿಸಬೇಕು. ನಾನು ಬಾಬುìಡೋಸ್‌ ಚೆರ್ರಿ ಹಣ್ಣನ್ನು ಮಾರಿದ್ದರೆ ಕಿ.ಲೋಗೆ 250 ಸಿಗೋದು. ಆದರೆ ಮಾಡಿದ್ದೇನೆಂದರೆ, ನಾನೇ ಕೂತು ಜ್ಯೂಸ್‌, ಜಾಮ್‌ ಮಾಡಿ ಮಾರಿದೆ. ಲಾಭ ಹೆಚ್ಚಾಯ್ತು.  ಈ ರೀತಿ ಲಾಭ ಬೇಕು ಎಂದರೆ ನಮ್ಮ ಯೋಚನೆ ಕೂಡ ವಿಸ್ತಾರವಾಗಬೇಕಾಗುತ್ತದೆ ಅಂದರು. 

 ಮತ್ತೆ ರಾಮ ಕೂಗಿದಂಗೆ ಆಯ್ತು. 
 “ಅಯ್ಯೋ, ನೋಡ್ರೀ ಪೇಯಿಂಟೆಡ್‌ ಸ್ಟೋಕ್ಸ್‌ ಹಕ್ಕಿ ಬಂದಿದೆ’  ಎನ್ನುತ್ತಾ ಕೆರೆ ಕಡೆಗೆ ಓಡಿದರು. ದೂರದಲ್ಲಿ ನಿಂತು, ಗಂಭೀರವಾಗಿ ನೋಡಿದರು, “ಬನ್ನಿ ಬನ್ನಿ’ ಅಂತ ಎಲ್ಲರನ್ನೂ ಕರೆದರು. ಈ ಹಕ್ಕಿಯನ್ನು ನೋಡಬೇಕೆಂಬ ಬಯಕೆಯಿಂದಲೇ ಶೀವತ್ಸ ಬೆಳಗ್ಗೆಯಿಂದ ಜೀಪನ್ನು ತೆಗೆದೇ ಇರಲಿಲ್ಲ. ಸದ್ದಿಗೆ ಹಕ್ಕಿ ಹಾರಿ ಹೋಗುತ್ತದೆ ಎಂದು. 

 “ಎಲ್ಲಿಂದ ಬಂತಿದು? ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಒಂದು ಸಲವೂ ಕಂಡಿಲ್ವಲ್ಲಾ’ ಅಂತ ಯೋಚಿಸಿದರು. ಬಹುಶ ಮಾಗಡಿ ಕೆರೆಗೆ ಬಂದಿರಬೇಕು.  ಹಂಗಾದರೆ ಇನ್ನು ಮುಂದೆ ಇಲ್ಲಿಗೆ ಖಾಯಂ ಬಂದೇ ಬರ್ತದೆ ಬಿಡೀ… ಅಂತ ಖುಷಿಪಟ್ಟರು. 

ಅಲ್ಲಿಗೆ, ಜೀವವೈವಿಧ್ಯತೆ ಇವರ ತೋಟದಲ್ಲಿ ಗಾಢವಾಗಿದೆ ಅನ್ನೋದಕ್ಕೆ ಹೊಸ ಸಾಕ್ಷಿ ಸಿಕ್ಕಂತಾಯಿತು. 

ನಾದಾ
ಚಿತ್ರಗಳು-ಫ‌ಕ್ರುದ್ದೀನ್‌ 

Advertisement

Udayavani is now on Telegram. Click here to join our channel and stay updated with the latest news.

Next