ಬೆಂಗಳೂರು: ಜಿಎಸ್‌ಟಿ ಜಾರಿ ಬಳಿಕ ಜುಲೈ ತಿಂಗಳ ಖರೀದಿ -ಮಾರಾಟ ವಿವರ (ರಿಟರ್ನ್) ಸಲ್ಲಿಸಲು ಏಳು ದಿನವಷ್ಟೇ ಬಾಕಿ ಉಳಿದಿದ್ದರೂ ರಿಟರ್ನ್ ಸಲ್ಲಿಸಲು ಪೂರಕವಾದ ಸಾಫ್ಟ್ವೇರ್ ಇನ್ನೂ ಸಿದ್ಧವಾಗದ ಹಿನ್ನೆಲೆಯಲ್ಲಿ ಸರ್ಕಾರ ಸೆ.5ರವರೆಗೆ ಅವಧಿ ವಿಸ್ತರಿಸಿದೆ.
ಜುಲೈ ತಿಂಗಳ ರಿಟರ್ನ್ ವಿವರವನ್ನು ಆ.20 ರೊಳಗೆ ಸಲ್ಲಿಸಬೇಕು. ಅದಕ್ಕಾಗಿ ವ್ಯಾಪಾರ ಸ್ಥರು ಎಲ್ಲ ದಾಖಲೆ ಕಾಗದ ಪತ್ರಗಳನ್ನು ಸಿದ್ಧಪಡಿಸಿ ಕೊಂಡಿಟ್ಟುಕೊಂಡಿದ್ದರು. ಆದರೆ ಸಲ್ಲಿಕೆಗೆ ಪೂರಕವಾದ ಸಾಫ್ಟ್ವೇರ್ ಇನ್ನೂ ಸಿದ್ಧವಾಗಿಲ್ಲ. ಇದರಿಂದ ವ್ಯಾಪಾರ- ವಹಿವಾಟುದಾರರು
ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರ ಮೇಲಿನ ಒತ್ತಡ ನಿವಾರಣೆಗೆ ರಿಟರ್ನ್ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್ 5ರವರೆಗೆ ವಿಸ್ತರಿಸಲಾಗಿದೆ. ಆದರೂ ಕೊನೇ ಕ್ಷಣದ ದಟ್ಟಣೆ ನಿವಾರಣೆಗೆ ರಿಟರ್ನ್ ಸಲ್ಲಿಸಲು ವಿವರ, ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದರೂ ಸಾಫ್ಟ್ ವೇರ್ ಅಂತಿಮಗೊಳ್ಳದ ಕಾರಣ ಸಲ್ಲಿಸಲಾಗದೆ ಸಾಫ್ಟ್ವೇರ್ ನಿರೀಕ್ಷೆಯಲ್ಲಿ ವ್ಯಾಪಾರ- ವಹಿವಾಟು ದಾರರು ದಿನ ಕಳೆಯುವಂತಾಗಿದೆ.
ಸಿದ್ಧವಾಗದ ಸಾಫ್ಟ್ವೇರ್: ಜುಲೈ 1ರಿಂದ ಜಿಎಸ್‌ಟಿ ಜಾರಿಯಾಗಿದ್ದು, ಅದರಂತೆ ಜುಲೈ ತಿಂಗಳ ವಹಿವಾಟಿನ ವಿವರವನ್ನು ಆ.20ರೊಳಗೆ ಸಲ್ಲಿಸಬೇಕಿದೆ. ತಿಂಗಳಿನಾದ್ಯಂತ ನಡೆದ ಮಾರಾಟ- ಖರೀದಿಯ ಸಮಗ್ರ ವಿವರವನ್ನು ಆರ್-1ರಡಿ (ರಿಟರ್ನ್-1) ಸಲ್ಲಿಸುವುದು ಕಡ್ಡಾಯ. ಇದರಿಂದ ಸ್ವಯಂಪ್ರೇರಿತವಾಗಿ ಸಿದ್ಧವಾಗುವ “ರಿಟರ್ನ್-2′ ಅಡಿ ವಿವರಗಳನ್ನೂ ಹೊಂದಾಣಿಕೆ ಮಾಡಿ ದಾಖಲಿಸಬೇಕು. ಆದರೆ ಈವರೆಗೆ ಸಾಫ್ಟ್ ವೇರ್ ಸಿದ್ಧವಾಗದ ಕಾರಣ ತಾತ್ಕಾಲಿಕವಾಗಿ “ರಿಟರ್ನ್-3ಬಿ’ ಅಡಿ ವಿವರ ಸಲ್ಲಿಸಲು ಅವಕಾಶ ಮಾಸಿಕೊಡಲಾಗಿದೆ.
ಮೂಡದ ಸ್ಪಷ್ಟತೆ: ಜುಲೈ 1ರಿಂದ ಜಿಎಸ್‌ಟಿ ಜಾರಿಯಾದಾಗ ಜೂನ್ 30ರವರೆಗೆ ಇದ್ದ ದಾಸ್ತಾನಿಗೆ “ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್’ ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಹಾಗಾಗಿ ಜುಲೈ 1ರಿಂದ ಪರಿಷ್ಕೃತ ದರದಂತೆ ಮಾರಾಟ ಮಾಡಿದರೂ ಕೇಂದ್ರ ಅಬಕಾರಿ ತೆರಿಗೆ ಮೊತ್ತವನ್ನು ಹಿಂತಿರುಗಿಸುವ ಭರವಸೆ ನೀಡಿತ್ತು. ಆದರೆ ಸದ್ಯ ರಿಟರ್ನ್ ಸಲ್ಲಿಸಲು ಬಿಡುಗಡೆ ಮಾಡಿರುವ “ರಿಟರ್ನ್ 3ಬಿ’ನಲ್ಲಿ ಹೂಡುವಳಿ ತೆರಿಗೆ ಮರು ಪಾವತಿ ಕುರಿತಾದ ಅಂಕಣವೇ ಕಾಣದಿರುವುದು ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
ವಾಣಿಜ್ಯ ಕಟ್ಟಡದಿಂದ ಬಾಡಿಗೆ ಪಡೆಯುತ್ತಿರು ವವರು ಸಣ್ಣ ಪುಟ್ಟ ವ್ಯವಹಾರ ನಡೆಸುತ್ತಿದ್ದರೆ ಅವರಿಗೆ ರಾಜಿ ತೆರಿಗೆಯ ಸೌಲಭ್ಯವನ್ನು ನಿರಾಕರಿಸುವುದು ಸರಿಯಲ್ಲ. ವಾಣಿಜ್ಯ ಕಟ್ಟಡದ ಬಾಡಿಗೆಗೆ ಸೂಕ್ತ ತೆರಿಗೆಯನ್ನು ಕಟ್ಟಡ ಮಾಲೀಕರಿಂದ ಪಡೆದು ಅವರು ನಡೆಸುವ ವ್ಯವಹಾರಕ್ಕೆ ರಾಜಿ ತೆರಿಗೆ ಸೌಲಭ್ಯ ಕಲ್ಪಿಸುವುದು ಸೂಕ್ತವೆನಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಜತೆಗೆ ವ್ಯಾಪಾರ- ವಹಿವಾಟುದಾರರು ರಿಟರ್ನ್ ಸಲ್ಲಿಸಲು ಸಿದ್ಧರಿದ್ದರೂ ಸಾಫ್ಟ್ವೇರ್ ಸಿದ್ಧವಾಗದ ಕಾರಣ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಸಾಫ್ಟ್ವೇರ್‌ಅನ್ನು ಬಳಕೆಗೆ ಮುಕ್ತಗೊಳಿಸಿ ಎಲ್ಲರೂ ಕಾಲಮಿತಿಯೊಳಗೆ ರಿಟರ್ನ್ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಆರ್ಥಿಕ ತಜ್ಞ ಜಿ.ಆರ್. ಮುರಳೀಧರ್ ತಿಳಿಸುತ್ತಾರೆ.
2 ಬಾರಿ ರಿಟರ್ನ್ ಸಲ್ಲಿಕೆ!
ಜುಲೈ ತಿಂಗಳ ವ್ಯಾಪಾರ- ವಹಿವಾಟಿನ ವಿವರ ದಾಖಲಿಸಲು ಸಾಫ್ಟ್ವೇರ್ ಸಿದ್ಧವಾಗದ ಕಾರಣ ಆರ್-3ಬಿ ಅಡಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಅದರಂತೆ ವ್ಯಾಪಾರ- ವಹಿವಾಟುದಾರರು ಜುಲೈ ಹಾಗೂ ಆಗಸ್ಟ್ ತಿಂಗಳ ವಿವರವನ್ನು ಆರ್-3ಬಿ ಅಡಿ ಸಲ್ಲಿಸಬೇಕು. ಸೆಪ್ಟೆಂಬರ್‌ನಿಂದ ಕಟ್ಟುನಿಟ್ಟಾಗಿ ತಿಂಗಳ 20ರೊಳಗೆ ನೇರವಾಗಿ ಆರ್-1 ಅಡಿ ವಿವರ ಸಲ್ಲಿಸುವ ವ್ಯವಸ್ಥೆ ಬರಲಿದೆ. ಆಗ ಜುಲೈ, ಆಗಸ್ಟ್ ತಿಂಗಳ ರಿಟರ್ನ್ ಸಲ್ಲಿಸಿದ್ದರೂ ಆರ್
-1ರಡಿ ಮತ್ತೂಮ್ಮೆ ವಿವರ ದಾಖಲಿಸುವುದು ಅನಿವಾರ್ಯವಾಗಲಿದೆ. ಹಾಗಾಗಿ ಎರಡು ಬಾರಿ ರಿಟರ್ನ್ ಸಲ್ಲಿಸಿದಂತಾಗಲಿದೆ.
ಜುಲೈನಲ್ಲಿ ಜಿಎಸ್‌ಟಿಯಡಿ ನಡೆದ ವ್ಯವಹಾರದ ವಿವರ ಸಲ್ಲಿಸಲು ಪೂರಕವಾದ ಸಾಫ್ಟ್ವೇರ್ ಸಿದ್ಧವಾಗುತ್ತಿದ್ದು, ರಿಟರ್ನ್ ಸಲ್ಲಿಕೆ ಅವಧಿಯನ್ನು ಸೆ.5ರವರೆಗೆ ಅವಧಿ ವಿಸ್ತರಿಸಲಾಗಿದೆ. ಜತೆಗೆ ಜುಲೈ, ಆಗಸ್ಟ್ ವಿವರವನ್ನು “ಆರ್-3ಬಿ’ಅಡಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ ಬಳಿಕ ಕಾಲಮಿತಿಯೊಳಗೆ ಕಡ್ಡಾಯವಾಗಿ ರಿಟರ್ನ್ ಸಲ್ಲಿಸಬೇಕಾಗಲಿದೆ. ಸಾಫ್ಟ್ವೇರ್ ಸಿದ್ಧವಾಗದಿರುವ ಬಗ್ಗೆ ವ್ಯಾಪಾರ- ವಹಿವಾಟುದಾರರು ಆತಂಕಪಡುವ ಅಗತ್ಯವಿಲ್ಲ.
ಬಿ.ಟಿ.ಮನೋಹರ್, ರಾಜ್ಯ ಸರ್ಕಾರದ ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ
ಎಂ.ಕೀರ್ತಿಪ್ರಸಾದ್