ಬೆಂಗಳೂರು: ಬೃಹತ್ ಕಂಪೆನಿಗಳಲ್ಲಿ ಅನಗತ್ಯವಾಗಿ ವಿದ್ಯುತ್ ವ್ಯರ್ಥವಾಗುವುದು, ಶಾರ್ಟ್ ಸರ್ಕ್ನೂಟ್‌ನಂತಹ ಅವಘಡಗಳು ಹಾಗೂ ಡೇಟಾ ಸಂರಕ್ಷಣೆಯನ್ನು ಕೈಗೊಳ್ಳಲು ವಿಗ್ಯಾನ್‌ಲಾಬ್ಸ್, ಎಪಿಎಂ ಪ್ಲಸ್ ಎಂಬ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದೆ.
ನೂರಕ್ಕೂ ಹೆಚ್ಚಿನ ಕಂಪ್ಯೂಟರ್‌ಗಳಿರುವ ಕಂಪೆನಿಯಲ್ಲಿ ಹೆಚ್ಚಿನ ಸಮಯ ಕಂಪ್ಯೂಟರ್‌ಗಳು ಬಳಕೆಯಲ್ಲಿರುತ್ತವೆ. ಜತೆಗೆ ಸಿಬ್ಬಂದಿಗಳು ಊಟ-ತಿಂಡಿ, ಕಾಫಿ-ಟೀ ಹೀಗೆ ವಿರಾಮ ಪಡೆದಾಗಲೂ ಕಂಪ್ಯೂಟರ್‌ಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿರುತ್ತದೆ. ಇದರಿಂದಾಗಿ ಕಂಪೆನಿಗಳಿಗೆ ಹೆಚ್ಚಿನ ವಿದ್ಯುತ್ ಬಿಲ್ ಬರುತ್ತದೆ. ಆ ಹಿನ್ನೆಲೆಯಲ್ಲಿ ಅನಗತ್ಯವಾಗಿ ವಿದ್ಯುತ್ ಬಳಕೆಯಾಗುವುದನ್ನು ಈ ಸಾಫ್ಟ್ವೇರ್ ತಡೆಯಲಿದೆ.
ನೂರಾಕ್ಕೂ ಹೆಚ್ಚಿನ ಕಂಪ್ಯೂಟರ್‌ಗಳಿರುವ ಕಂಪೆನಿಯಲ್ಲಿ ಮೊದಲಿಗೆ ಪ್ರಾಯೋಗಿಕವಾಗಿ ಸಾಫ್ಟ್ವೇರ್‌ನ್ನು ಅಳವಡಿಕೆ ಮಾಡಲಾಗುತ್ತದೆ. ಈ ವೇಳೆ ಪ್ರತಿಯೊಂದು ಕಂಪ್ಯೂಟರ್ ಎಷ್ಟು ವಿದ್ಯುತ್ ಬಳಕೆ ಮಾಡುತ್ತಿದೆ ಎಂಬುದು ತಿಳಿಯಲಿದೆ. ನಂತರದಲ್ಲಿ ಪ್ರತಿಯೊಂದು ಕಂಪ್ಯೂಟರ್‌ನ ಐಪಿ ವಿಳಾಸದ ಆಧಾರದ ಮೇಲೆ ಯುನಿಕ್ ಸಂಖ್ಯೆಯನ್ನು ನೀಡಿ, ತಮ್ಮ ಸಾಫ್ಟ್ವೇರ್ ಅಳವಡಿಕೆ ಮಾಡಲಾಗುತ್ತದೆ.
ಸಾಫ್ಟ್ವೇರ್‌ನಲ್ಲಿ ಕೆಲವೊಂದು ವಿಶೇಷ ಅಂಶಗಳನ್ನು ಅಳವಡಿಸಿರುವುದರಿಂದಾಗಿ ಇಂತಿಷ್ಟು ನಿಮಿಷಗಳು ಕಂಪ್ಯೂಟರ್ ಬಳಕೆಯಾಗದಂತಹ ಸಂದರ್ಭದಲ್ಲಿ ಕಂಪ್ಯೂಟರ್‌ಗೆ ರವಾನೆಯಾಗುತ್ತಿರುವ ವಿದ್ಯುತ್ ಸ್ಥಗಿತಗೊಳಿಸುತ್ತದೆ. ಸಿಬ್ಬಂದಿ ಬಂದ ಕುಳಿತು ಮೌಸ್ ಅಥವಾ ಕೀ ಬೋರ್ಡ್ ಕೀ ಒತ್ತಿದ ಕೆಲವೇ ಸೆಕೆಂಡುಗಳಲ್ಲಿ ಸಹಜ ಸ್ಥಿತಿಗೆ ಬರಲಿದೆ ಎಂದು ವಿಗ್ಯಾನ್‌ಲಾಬ್ಸ್ ಸಂಸ್ಥೆಯ ಮಾರುಕಟ್ಟೆ ಕಾರ್ಯನಿರ್ವಾಹಕ ಗೌರವ್ ಆರ್. ಕಪೂರ್ ಮಾಹಿತಿ ನೀಡಿದರು.
ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ವಿದೇಶ ಹಾಗೂ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಈ ಸಾಫ್ಟ್ವೇರ್ ಅಳವಡಿಸಿದೆ. ಅದರಂತೆ ವಿಶ್ವದಾದ್ಯಂತ ಸಾಫ್ಟ್ವೇರ್ ಅಳವಡಿಸಿರುವ 52 ಲಕ್ಷ ಕಂಪ್ಯೂಟರ್‌ಗಳಿಂದಾಗಿ 1049.82 ಗಿಗಾ ವ್ಯಾಟ್ ವಿದ್ಯುತ್ ಉಳಿತಾಯ ಮಾಡಲಾಗಿದ್ದು, ಇಷ್ಟು ಪ್ರಮಾಣದ ವಿದ್ಯುತ್‌ನ್ನು ಇಡೀ ಮೈಸೂರಿಗೆ ಒಂದು ವರ್ಷ ಪೂರೈಕೆ ಮಾಡಬಹುದಾಗಿತ್ತು ಎಂದು ಹೇಳಿದರು.