ಜಾರ್ಖಂಡ್: ಸ್ನೇಹಿತನೊಂದಿಗೆ ಬೈಕ್ ನಲ್ಲಿ ತೆರಳಿದ್ದ 26 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಜಾರ್ಖಂಡ್ ರಾಜ್ಯದ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಸಂಜೆ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಸಾಫ್ಟ್ ವೇರ್ ಇಂಜಿನಿಯರ್ ಯುವತಿ ಸ್ನೇಹಿತನೊಂದಿಗೆ ಬೈಕ್ ನಲ್ಲಿ ತೆರಳಿದ್ದರು. ಈ ವೇಳೆ ಘಟನೆ ನಡೆದಿದೆ.
ಎಂಟು-ಹತ್ತು ಪುರುಷರ ಗುಂಪೊಂದು ಬೈಕ್ ತಡೆದು, ಗೆಳೆಯನನ್ನು ಥಳಿಸಿತು. ಬಳಿಕ ಯುವತಿಯನ್ನು ಜನರಿಲ್ಲದ ಪ್ರದೇಶಕ್ಕೆ ಕರೆದೊಯ್ದ ನಂತರ ಸಾಮೂಹಿಕ ಅತ್ಯಾಚಾರವೆಸಗಿದೆ ಎಂದು ಪೊಲೀಸರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಹಿಂದಿರುವವರನ್ನು ಗುರುತಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ತಿಳಿಸಿದ್ದಾರೆ. ಒಟ್ಟು ಹತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಯುವತಿ ಪ್ರಸಿದ್ಧ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮೇಲೆ ಅತ್ಯಾಚಾರವೆಸಗಿದ ಬಳಿಕ ಆರೋಪಿಗಳು ಆಕೆಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಆಕೆಯ ಬ್ಯಾಗ್ ಮತ್ತು ಮೊಬೈಲ್ ಫೋನ್ ಕೂಡ ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ಹತ್ತು ಲಕ್ಷ ಉದ್ಯೋಗ ಸೃಷ್ಟಿ ಎಲ್ಲಿ ಎಂದು ಕೇಳುವವರಿಗೆ ಇಂದು ಉತ್ತರ: ಶೋಭಾ ಕರಂದ್ಲಾಜೆ
ಯುವತಿ ಹೇಗೋ ಮನೆಗೆ ತಲುಪಿದ್ದಾಳೆ, ಬಳಿಕ ಘಟನೆಯ ಬಗ್ಗೆ ತನ್ನ ಮನೆಯವರಿಗೆ ತಿಳಿಸಿದ್ದಾಳೆ. ನಂತರ ಅವರು ಪೊಲೀಸರಿಗೆ ದೂರು ನೀಡಿದರು.
ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಚೈಬಾಸಾ ಪೊಲೀಸರು ತಿಳಿಸಿದ್ದಾರೆ. ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲಾಗಿದೆ.