ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇರುವ ನೆರೆಹೊರೆ ಪ್ರದೇಶದ ಖಾಸಗಿ ಶಾಲೆಗೆ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಮಕ್ಕಳನ್ನು ಸೇರಿಸಲು ಅವಕಾಶವಿಲ್ಲ ಎಂದು ನಿಯಮಕ್ಕೆ ಸರ್ಕಾರ ತಿದ್ದುಪಡಿ ತಂದಿದೆ. ಆದರೆ, ನೆರಹೊರೆ ಶಾಲೆ ಯಾವುದು ಎಂಬ ಜಿಜ್ಞಾಸೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.
2019-20ನೇ ಸಾಲಿಗೆ ಖಾಸಗಿ ಶಾಲೆಗಳು ಸರ್ಕಾರದ ಅನುಮತಿ ಇಲ್ಲದೇ ಸೀಟುಗಳನ್ನು ಭರ್ತಿ ಮಾಡಿಕೊಳ್ಳುತ್ತಿವೆ. ಆದರೆ, ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ 2019-20ನೇ ಸಾಲಿನ ಆರ್‌ಟಿಇ ಸೀಟು ಹಂಚಿಕೆ ಸಂಬಂಧ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯಡಿ ನೆರೆಹೊರೆ ಖಾಸಗಿ ಶಾಲೆಗಳಲ್ಲಿ 2019-20ನೇ ಸಾಲಿಗೆ ಪ್ರವೇಶ ನೀಡುವ ಸಂಬಂಧ ರಾಜ್ಯ ಸರ್ಕಾರ ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು 2012ರ ನಿಮಯ 4 ಮತ್ತು 8ಕ್ಕೆ ತಿದ್ದುಪಡಿ ತಂದಿದೆ.
ಅದರಂತೆ ನಗರ ಪ್ರದೇಶದಲ್ಲಿ ವಾರ್ಡ್, ಕಾಪೋರೇಷನ್ ಪ್ರದೇಶ ಅಲ್ಲದ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಇದ್ದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್ 12(1)(ಸಿ)ಅಡಿಯಲ್ಲಿ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವಂತಿಲ್ಲ. ಈ ತಿದ್ದುಪಡಿಯೇ ಆರ್‌ಟಿಇ ಪ್ರಕ್ರಿಯೆ ವಿಳಂಬಕ್ಕೆ ಮೂಲ ಕಾರಣವಾಗಿದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದ ವಿವಿಧ ಭಾಗದಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಗುರುತಿಸಿದೆಯಾದರೂ, ತಂತ್ರಾಂಶದಲ್ಲಿ ಸೂಕ್ತ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ತಂತ್ರಾಂಶವೇ ಬಿಸಿತುಪ್ಪ: ಅನುದಾನ ರಹಿತ ಶಾಲೆಗಳ ನೆರೆಹೊರೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಅಸ್ತಿತ್ವದಲ್ಲಿದ್ದರೂ, ತಂತ್ರಾಂಶದಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳು ಕಣ್ಮರೆಯಾಗಿವೆ. ಹಲವು ಪ್ರದೇಶದಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇರುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದೆ. ಆದರೆ, ಇಲಾಖೆಯ ತಂತ್ರಾಂಶದಲ್ಲಿ ಇದು ಗೋಚರವಾಗುತ್ತಿಲ್ಲ. ನೆರೆಹೊರೆ ಶಾಲೆಯ ಮಾಹಿತಿ ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ಮುಕ್ತವಾಗಿದೆ.
ಸರ್ಕಾರಿ, ಅನುದಾನಿತ ಶಾಲೆ ಇರುವ ಕಡೆಗಳಲ್ಲೂ ತಂತ್ರಾಂಶದಲ್ಲಿ ಅದು ಕಣ್ಮೆರೆಯಾಗಿದೆ. ಇದು ಸಾರ್ವಜನಿಕರಿಗೆ ತಪ್ಪು ಮಾಹಿತಿ ಹೋಗಬಹುದು ಎಂಬುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಇದನ್ನು ಸರಿಪಡಿಸದೇ ಆರ್‌ಟಿಇ ಪ್ರಕ್ರಿಯೆ ಆರಂಭಿಸಲು ಸಾಧ್ಯವೇ ಇಲ್ಲ ಎಂಬುದು ತಿಳಿದು ಬಂದಿದೆ. ಅಧಿಕಾರಿಗಳಿಗೆ ಸೂಚನೆ: ನೆರೆಹೊರೆಯಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳು ಇದ್ದರೂ ಸಹ ಸರ್ಕಾರಿ, ಅನುದಾನಿತ ಶಾಲೆಗೆ ಇಲ್ಲ ಎಂಬ ತಪ್ಪು ಮಾಹಿತಿ ತಂತ್ರಾಂಶದಲ್ಲಿ ಕಂಡು ಬಂದಿದೆ. ಇದನ್ನು ಮತ್ತೂಮ್ಮೆ ಖುದ್ದಾಗಿ ಪರಿಶೀಲಿಸಬೇಕು. ತಮ್ಮ ವ್ಯಾಪ್ತಿಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳನ್ನು ತಂತ್ರಾಂಶದಲ್ಲಿ ಮ್ಯಾಪಿಂಗ್ ಮಾಡಬೇಕು. ಶಾಲೆಯ ಹೆಸರು, ಡೈಸ್ ಕೋಡ್ ಸಮೇತವಾಗಿ ಆರಂಭಿಕ ಹಾಗೂ ಅಂತ್ಯದ ತರಗತಿ ವಿವರ, ಬೋಧನಾ ಮಾಧ್ಯಮ ಹಾಗೂ ಇತರೆ ಅಂಶಗಳನ್ನು ನಿಖರವಾಗಿ ಖಾತ್ರಿ ಪಡಿಸಬೇಕು ಎಂದು ಬಿಇಓಗಳಿಗೆ ಇಲಾಖೆ ಸೂಚನೆ ನೀಡಿದೆ.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ
ರಾಜ್ಯದ ಎಲ್ಲ ಖಾಸಗಿ ಶಾಲೆಗಳಲ್ಲಿ ಉಚಿತ ಆರ್‌ಟಿಇ ಪ್ರವೇಶ ಪಡೆಯಲು ಅರ್ಜಿ ಹಾಕಲು ಫೆ.15ರಿಂದ
ಪ್ರಾರಂಭವಾಗುತ್ತದೆ. ಅರ್ಜಿ ಹಾಕಲು ಬೇಕಾದ ದಾಖಲೆ ಇತ್ಯಾದಿ ಮಾಹಿತಿ ಇರುವ ಸಂದೇಶವೊಂದು
ವಾಟ್ಸಾಪ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ.
ಆರ್‌ಟಿಇ ನಿಯಮದಲ್ಲಿ ಸರ್ಕಾರ ಬದಲಾವಣೆ ತಂದಿರುವುದರಿಂದ 2019-20ನೇ ಸಾಲಿನ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುಳ್ಳು ಮಾಹಿತಿಗೆ ಸಾರ್ವಜನಿಕರು ಗಮನ ಕೊಡುವ ಅಗತ್ಯವಿಲ್ಲ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ನೆರೆಹೊರೆ ಶಾಲೆಯ ಕುರಿತು ಸ್ಪಷ್ಟತೆ ನೀಡುವಂತೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. 2019-20ನೇ ಸಾಲಿಗೆ ಆರ್‌ಟಿಇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು.
● ಎಸ್.ಜಯಕುಮಾರ್,ನಿರ್ದೇಶಕ ಪ್ರಾಥಮಿಕ ಶಿಕ್ಷಣ.
ರಾಜ ಖಾರ್ವಿ ಕೊಡೇರಿ