Advertisement

ಸೋಡಿಗದ್ದೆ ಮಹಾಸತಿ ಜಾತ್ರೋತ್ಸವ ; ಈ ಬಾರಿ ದೇವರ ದರ್ಶನಕಷ್ಟೇ ಸೀಮಿತ

07:31 PM Jan 22, 2022 | Team Udayavani |

ಭಟ್ಕಳ: ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಒಂಬತ್ತು ದಿನಗಳ ಹಾಲಹಬ್ಬ ಜಾತ್ರೆ ಈ ಬಾರಿ ಕೊರೊನಾದಿಂದಾಗಿ ಕೇವಲ ದೇವರ ದರ್ಶನಕ್ಕಷ್ಟೇ ಅವಕಾಶ ಕಲ್ಪಿಸಲಾಗಿದ್ದು ಜಿಲ್ಲೆಯಷ್ಟೇ ಅಲ್ಲ ಉಡುಪಿ, ಮಂಗಳೂರು ಜಿಲ್ಲೆಯ ಭಕ್ತರಿಗೂ ಕೂಡಾ ಅಸಮಾಧಾನ ತಂದಿದೆ.

Advertisement

ಪ್ರತಿ ವರ್ಷವೂ ಕೂಡಾ ಜನವರಿ 23ರಂದು ಆರಂಭವಾಗುವ ಹಾಲಹಬ್ಬ ಜಾತ್ರೆ, ಕೆಂಡ ಹಾಗೂ ತುಲಾಭಾರ ಸೇವೆಯು 9 ದಿನಗಳ ತನಕ ನಡೆಯುತ್ತಿತ್ತು. ಪ್ರತಿ ವರ್ಷವೂ ಕೂಡಾ ಕೇವಲ ಜಿಲ್ಲೆಯ ಜನರಷ್ಟೇ ಅಲ್ಲ ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗದ ಭಕ್ತರೂ ಕೂಡಾ ಭಾಗವಹಿಸಿ ತಮ್ಮ ಹರಿಕೆ, ಪೂಜೆ, ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. ಬೈಂದೂರಿನ ಒಂದು ಕುಟುಂಬ ಕಳೆದ ನೂರಾರು ವರ್ಷಗಳಿಂದ ಎತ್ತಿನಗಾಡಿಯ ಮೇಲೆ ಬಂದು ದೇವರಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಿದ್ದು ಇಂದಿಗೂ ಕೂಡಾ ಅದನ್ನು ಅವರ ಕುಟುಂಬಿಕರು ಮುಂದುವರಿಸಿಕೊಂಡು ಬಂದಿದ್ದಾರೆ. ಇಂತಹ ಅನೇಕ ವಿಶೇಷತೆಗಳನ್ನು ಹೊಂದಿರುವ ಸೋಡಿಗದ್ದೆ ಜಾತ್ರೆಯನ್ನು ಈ ಬಾರಿ ಕೇವಲ ದೇವರ ದರ್ಶನಕ್ಕಷ್ಟೇ ಸೀಮಿತಗೊಳಿಸಿರುವುದು ಭಕ್ತರ ಮನದಲ್ಲಿ ಬೇಸರದ ಛಾಯೆ ಕಂಡು ಬಂದಿದೆ.

ಸೋಡಿಗದ್ದೆಯ ಮಹಾಸತಿ ದೇವಿಯ ಜಾತ್ರೆ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಇಂದಿಗೂ ಕೂಡ ಜಾತ್ರೆ ಜಾನಪದ ಶೈಲಿಯಲ್ಲಿ ಹಿಂದಿನಂತೆಯೇ ಸಂಪ್ರದಾಯ ಬದ್ಧವಾಗಿ ಆಚರಿಸಿಕೊಂಡು ಬರುವ ಜಾತ್ರೆಯಾಗಿದ್ದು ಈ ಬಾರಿ ಮಾತ್ರ ಅದಕ್ಕೆ ಬ್ರೇಕ್ ಬಿದ್ದಿದೆ.

ಜಾತ್ರೆಯ ಸಂದರ್ಭದಲ್ಲಿ ವರ್ಷಂಪ್ರತಿ ಮಹಾಸತಿಗೆ ಹೂವಿನ ಪೂಜೆ, ಗೊಂಬೆ ಹರಕೆ, ಕೆಂಡಸೇವೆ, ತುಲಾಭಾರ ಸೇವೆ ಮುಂತಾದವುಗಳು ನಡೆಯುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ದಾನಿಗಳ ಸಹಾಯದಿಂದ ಪ್ರತಿ ದಿನ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಸಾವಿರಾರು ಜನರು ಭಕ್ತಿಯಿಂದ ಶ್ರೀ ದೇವರ ಪ್ರಸಾದ ಭೋಜನ ಮಾಡುತ್ತಿದ್ದರು. ಈ ಬಾರಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲವನ್ನೂ ಸರಳ ಮತ್ತು ಸಾಂಕೇತಿಕವಾಗಿ ಆಚರಿಸುವಂತೆ ಜಿಲ್ಲಾಡಳಿತ ಸೂಚಿಸಿದ್ದರಿಂದ ಜಾತ್ರೆ ಸರಳವಾಗಿ ನಡೆಯಲಿದೆ.

ಇದನ್ನೂ ಓದಿ : ಕೈಮಗ್ಗ ಬಟ್ಟೆಗಳಿಗೆ ಮನಸೋತ ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶ ಕುಮಾರ ಮೌರ್ಯ

Advertisement

ಜಾತ್ರೆಯ ಆರಂಭ ದಿನವಾದ ಭಾನುವಾರ (ಜ.23) ಹಾಲ ಹಬ್ಬ ನಡೆಯಲಿದ್ದು, ದೇವಸ್ಥಾನದ ಆಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರ ರವಿಚಂದ್ರ ಎಸ್., ಅಭಿವೃದ್ಧಿ ಕಮಿಟಿಯ ಸದಸ್ಯರು ಕೋವಿಡ್ ಮಾರ್ಗಸೂಚಿಯಂತೆ ಜಾತ್ರೆಗೆ ಸಿದ್ಧತೆಗಳನ್ನು ನಡೆಸಿದ್ದಾರೆ. ಕೋವಿಡ್-19ರ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧ ವಿಧಿಸಲಾಗಿದ್ದು, ದೇವಸ್ಥಾನಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತರಿಗೂ ಮಾಸ್ಕ್ ಕಡ್ಡಾಯವಾಗಿದ್ದು, ಥರ್ಮಲ್ ಸ್ಕ್ಯಾನಿಂಗ್ ಮಾಡಿಯೇ ದೇವರ ದರುಶನಕ್ಕೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಸೋಡಿಗದ್ದೆ ಮಹಾಸತಿ ದೇವಿಯು ಭಕ್ತರ ಪಾಲಿನ ಶಕ್ತಿ ದೇವತೆಯಾಗಿದ್ದು, ಹೀಗಾಗಿಯೇ ವರ್ಷಂಪ್ರತಿ 9 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ವಿಶೇಷ ಪೂಜೆ, ಹರಕೆ ಸಲ್ಲಿಸುತ್ತಾರೆ.

ಕೋವಿಡ್ ಹೆಚ್ಚಳದಿಂದಾಗಿ ಸರಕಾರ ಹಲವಾರು ನಿರ್ಬಂಧಗಳನ್ನು ಹೇರಿದ್ದು ಅವುಗಳಲ್ಲಿ, ಜಾತ್ರೆ, ಸಾರ್ವಜನಿಕ ಉತ್ಸವಗಳು ಸೇರಿರುವುದರಿಂದ ಸೋಡಿಗದ್ದೆ ಜಾತ್ರೆಯನ್ನು ಸರಳವಾಗಿ ವಿಧಿ ವಿಧಾನಗಳ ಮೂಲಕ ಆಚರಿಸಲು ತೀರ್ಮಾನಿಸಲಾಗಿದೆ. ಭಕ್ತರು ಈ ವರ್ಷದ ಜಾತ್ರೆಯ ಸಂದರ್ಭದಲ್ಲಿ ಕೇವಲ ದರ್ಶನವನ್ನು ಪಡೆದು ಸಹಕರಿಸಬೇಕು. .

– ಎಸ್ ರವಿಚಂದ್ರ, ತಹಸೀಲ್ದಾರ ಹಾಗೂ ಆಡಳಿತಾಧಿಕಾರಿ, ಸೋಡಿಗದ್ದೆ ಶ್ರೀ ಮಹಾಸತಿ ದೇವರು.

ಸೋಡಿಗದ್ದೆ ಶ್ರೀ ಮಹಾಸತಿ ಜಾತ್ರೆಯ ವಿಶೇಷ ಪೂಜೆ, ಹರಿಕೆ, ಕೆಂಡ, ತುಲಾಭಾರ ಸೇವೆಯು ಕೋವಿಡ್ ನಿಯಮ ಪಾಲನೆಗೋಸ್ಕರ ಈ ಬಾರಿ ರದ್ದು ಮಾಡಿದ್ದು ಭಕ್ತರು ಕೋವಿಡ್ ನಿಯಮವನ್ನು ಪಾಲಿಸಿ ಶ್ರೀ ದೇವರ ದರ್ಶನವನ್ನು ಪಡೆಯಬೇಕು. .

– ಈರಪ್ಪ ಜೆ. ನಾಯ್ಕ, ಅಧ್ಯಕ್ಷರು, ಸೋಡಿಗದ್ದೆ ಶ್ರಿ ಮಹಾಸತಿ ದೇವಸ್ಥಾನದ ಅಭಿವೃದ್ಧಿ ಸಮಿತಿ.

ಸೋಡಿಗದ್ದೆ ಶ್ರೀ ಮಹಾಸತಿ ಜಾತ್ರೆ ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿದ್ದು ಈ ಬಾರಿ ಕೋವಿಡ್ ನಿಯಮಗಳೀರುವ ಕಾರಣಕ್ಕೆ ಜಾತ್ರೆಯನ್ನು ನಡೆಸಲು ಅನುಮತಿ ನೀಡದೇ ಇರುವುದರಿಂದ ಭಕ್ತರು ಶ್ರೀ ದೇವರ ದರ್ಶನವನ್ನು ಪಡೆಯಬೇಕೆನ್ನುವ ಆಶಯ ನಮ್ಮದು. . .

– ನಾಗರಾಜ ಈ.ಎಚ್., ಮಾಜಿ ಅಧ್ಯಕ್ಷರು ಅಭಿವೃದ್ಧಿ ಸಮಿತಿ.

ರಾಜ್ಯದೆಲ್ಲೆಡೆ ಕೋವಿಡ್ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದ್ದರಿಂದ ಅನಿವಾರ್ಯವಾಗಿ ಈ ಬಾರಿಯ ಜಾತ್ರೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದು ಭಕ್ತರ ಸಹಕಾರ ಅಗತ್ಯ. .

– ಎಂ. ಜೆ. ನಾಯ್ಕ, ಮಾಜಿ ಕಾರ್ಯದರ್ಶಿ, ಅಭಿವೃದ್ಧಿ ಸಮಿತಿ.

Advertisement

Udayavani is now on Telegram. Click here to join our channel and stay updated with the latest news.

Next