Advertisement

250 ವರ್ಷಗಳ ಬಳಿಕ: ಶ್ರೀ ಸುಬ್ರಹ್ಮಣ್ಯ ಮಠಕ್ಕೆ ಸೋದೆ ಶ್ರೀ ಭೇಟಿ

12:55 PM Jun 01, 2017 | Team Udayavani |

ಸುಬ್ರಹ್ಮಣ್ಯ: ಸೋದೆ ಶ್ರೀ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಅವರು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠಕ್ಕೆ ಬುಧವಾರ ಭೇಟಿ ನೀಡುವ ಮೂಲಕ ಸುಮಾರು 250 ವರ್ಷಗಳ ಹಿಂದೆ ಮಠಗಳ ನಡುವೆ ಕಡಿದುಹೋಗಿದ್ದ ಸಂಬಂಧವನ್ನು ಪುನಃಸ್ಥಾಪಿಸಿದರು.

Advertisement

ಸೋಮವಾರ ಸೋದೆ ಮಠಕ್ಕೆ ತೆರಳಿದ್ದ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರ ಜತೆಗೂಡಿ ಬುಧವಾರ ಸಂಜೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಸೋದೆ ಸ್ವಾಮೀಜಿ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ಕಾಶಿಕಟ್ಟೆ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಯತಿದ್ವಯರನ್ನು ಶೃಂಗರಿಸಿದ್ದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು. ಈ ವೇಳೆ ಕರಾವಳಿಯ ಹುಲಿ ವೇಷ, ಕೇರಳದ ಚೆಂಡೆ, ಗೊಂಬೆ ಕುಣಿತ, ಮಂಗಳ ವಾದ್ಯಗಳು ಮೆರುಗು ನೀಡಿದ್ದವು. 

ದೇವಸ್ಥಾನದ ಗೋಪುರ ಬಳಿ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಯತಿದ್ವಯರನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಅನಂತರ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ದೇವರ ದರುಶನ ಪಡೆದರು. ಮಠದ ರಾಜಾಂಗಣದಲ್ಲಿ ಸೋದೆ ಸ್ವಾಮೀಜಿಯವರಿಗೆ ಮಠದ ವತಿಯಿಂದ ಪಾದ ಪೂಜೆ ಹಾಗೂ ಸತ್ಕಾರ ಕಾರ್ಯಕ್ರಮ ನಡೆಯಿತು.

18ನೇ ಶತಮಾನದಲ್ಲಿ ಉಂಡಾರು ಗ್ರಾಮದ ಸೋದರರಾದ ಶ್ರೀ ವಿಶ್ವನಿಧಿತೀರ್ಥರು (1740-1753), ಶ್ರೀ
ವಿಶ್ವಾಧೀಶ್ವರತೀರ್ಥರು (1753- 1803) ಸೋದೆ ಮಠಾಧೀಶರಾಗಿದ್ದರೆ ಇವರ ಇನ್ನೋರ್ವ ಸೋದರ ಸುಬ್ರಹ್ಮಣ್ಯ ಮಠಾಧೀಶರಾಗಿದ್ದರು. ಅವರ ಹೆಸರು ಮಠದ ದಾಖಲೆಗಳಲ್ಲಿ ನಿಖರವಾಗಿ ತಿಳಿಯುತ್ತಿಲ್ಲ. ಈ ಅವಧಿಯಲ್ಲಿ ಸಂಬಂಧ ಕಡಿದುಹೋಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next